ಗದಗ: ಜಿಲ್ಲೆಯ ಕಡಕೋಳ ಗ್ರಾಮದಲ್ಲಿ ಬಸ್ ಬಾರದ್ದಕ್ಕೆ ಟ್ರ್ಯಾಕ್ಟರ್‌ನಲ್ಲಿ ಶಾಲೆಗೆ ತೆರಳುತ್ತಿದ್ದಾಗ ಟ್ರ್ಯಾಕ್ಟರ್ ಮೇಲಿಂದ ಬಿದ್ದು ಮೃತಪಟ್ಟ ವಿದ್ಯಾರ್ಥಿನಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಮಂಗಳವಾರ ರಸ್ತೆ ತಡೆ ನಡೆಸಿದರು.
ಬಳಿಕ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು, ಜಿಲ್ಲೆಯಲ್ಲಿ ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲ. ಆಟೋರಿಕ್ಷಾ, ಟಂಟಂ, ಟ್ರ್ಯಾಕ್ಟರ್ ಮತ್ತಿತರೆ ಗೂಡ್ಸ್ ವಾಹನಗಳನ್ನು ನೆಚ್ಚಿಕೊಳ್ಳುವಂತಾಗಿದೆ ಎಂದು ದೂರಿದರು.
ಆಟೋರಿಕ್ಷಾಗಳಿಗೆ ಹಣ ಹೊಂದಿಸಲಾಗದ ಬಡ ವಿದ್ಯಾರ್ಥಿಗಳು ಕಲ್ಲುಕಡಿ ತುಂಬಿರುವ ಟ್ರ್ಯಾಕ್ಟರ್‌ಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಕುಳಿತು ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ. ಇತ್ತೀಚೆಗೆ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಬಾಲಕಿಯೊಬ್ಬರು ಟ್ರ್ಯಾಕ್ಟರ್ ನಲ್ಲಿ ಶಾಲೆಗೆ ಪ್ರಯಾಣಿಸುತ್ತಿದ್ದಾಗ ಕೆಳಗೆ ಬಿದ್ದು, ಸ್ಥಳದಲ್ಲೇ ಮೃತಟ್ಟಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ. ಗ್ರಾಮೀಣ ಭಾಗದಲ್ಲಿ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದಿರುವುದೇ ದುರ್ಘಟನೆಗೆ ಕಾರಣ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಶಿರಹಟ್ಟಿ ತಾಲೂಕಿನ ಕಡಕೋಳ ಸೇರಿದಂತೆ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಶಾಲಾ, ಕಾಲೇಜುಗಳ ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್ ಸೇವೆ ಕಲ್ಪಿಸಬೇಕು. ಕಡಕೋಳ ಗ್ರಾಮದ ಮೃತ ಬಾಲಕಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು. ಈ ಕುರಿತು ಸರಕಾರ ಅಲಕ್ಷ್ಯ ಮಾಡಿದರೆ ಎಬಿವಿಪಿಯಿಂದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಡಾ|ಪುನೀತಕುಮಾರ ಬೆನಕನವಾರಿ, ಜಿಲ್ಲಾ ಸಂಚಾಲಕ ರವಿ ಮಾನ್ವಿ, ಗಿರೀಶ ನರಗುಂದಕರ, ಹನುಂಮತ ಬಗಲಿ, ರವಿ ನರೇಗಲ್, ವೆಂಕಟೇಶ ವಾಲ್ಮೀಕಿ, ಅಭಿಷೇಕ, ಮಹೇಶ್ ಲಮಾಣಿ, ಗುರು ಶಿರಹಟ್ಟಿ, ರುದ್ರಗೌಡ ಕಳಸದ, ತ್ರಿಭುವನ್ ಕುಮಾರ್, ವೆಂಕಟೇಶ್, ಅಭಿಷೇಕ್, ಸಂತೋಷ್, ರಾಜಶೇಖರ, ವೀರೇಶ್, ಮಹೇಶ್, ಸತೀಶ್, ನಾಗರಾಜ್, ವೀರೇಂದ್ರ, ಸಿದ್ದಲಿಂಗೇಶ್ವರ ಅಕ್ಕಿ, ಮಂಜುನಾಥ್, ಜನಾರ್ದನ್, ಹನುಮಂತ ಹಳ್ಳೂರ, ಪೂಜಾ ಪೂಜಾರ, ಸ್ನೇಹಾ ಮತ್ತಿತರರು ಪಾಲ್ಗೊಂಡಿದ್ದರು.