Advertisement

ನೆರೆಗೆ 10 ಸೇತುವೆ, 70 ಕಿ.ಮೀ. ರಸ್ತೆ ಹಾನಿ

09:19 PM Aug 31, 2019 | Lakshmi GovindaRaj |

ಹುಣಸೂರು: ತಾಲೂಕಿನ ಜೀವನದಿ ಲಕ್ಷ್ಮಣತೀರ್ಥ ನದಿಯ ಪ್ರವಾಹವು ಬೆಳೆ, ಮನೆಗಳ ಹಾನಿಯ ಜೊತೆಗೆ ಸೇತುವೆಗಳು, ರಸ್ತೆಗಳನ್ನೂ ಭಾರೀ ಪ್ರಮಾಣದಲ್ಲಿ ಹಾನಿಗೊಳಿಸಿ ಸಂಚಾರ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದೆ.

Advertisement

ನದಿ ಪಾತ್ರದ ಹನಗೋಡು ಹೋಬಳಿಯಲ್ಲಿ ಹೆಚ್ಚು ಹಾನಿಯಾಗಿದ್ದರೆ, ಬಿಳಿಕೆರೆ, ಕಸಬಾ ಮತ್ತು ಗಾವಡಗೆರೆ ಹೋಬಳಿಗಳಲ್ಲೂ ವಿವಿಧೆಡೆ ಸೇತುವೆ, ರಸ್ತೆಗಳು ಕಿತ್ತು ಹೋಗಿವೆ. ಒಟ್ಟಾರೆ ತಾಲೂಕಿನಲ್ಲಿ 10ಕ್ಕೂ ಹೆಚ್ಚು ಸೇತುವೆ, 70 ಕಿ.ಮೀ. ರಸ್ತೆ ಹದಗೆಟ್ಟು ಹೋಗಿದೆ. ಸದ್ಯ ಇನ್ನೂ ನೆರೆ ಪರಿಹಾರ ಬಿಡುಗಡೆಯಾಗದಿರುವುದರಿಂದ ದುರಸ್ತಿ ಕಾರ್ಯ ನಡೆಯುತ್ತಿಲ್ಲ. ವಾಹನ ಸವಾರರು, ಪ್ರಯಾಣಿಕರು ಸುತ್ತು ಬಳಸಿ ಸಂಚರಿಸುವಂತಾಗಿದೆ.

ಹನಗೋಡು ಸೇತುವೆಗೆ ಹಾನಿ: ನದಿಯ ಭಾರೀ ಪ್ರವಾಹದಿಂದಾಗಿ ಹನಗೋಡು, ಕೊಳುವಿಗೆ, ರಾಮೇನಹಳ್ಳಿ, ರಾಮಪಟ್ಟಣ ಸೇತುವೆಗಳಿಗೆ ಹಾನಿಯಾಗಿದೆ. ಕೊಳವಿಗೆ ರಸ್ತೆಯ ಹನಗೋಡು ಬಳಿ ನಿರ್ಮಿಸಿರುವ ಸೇತುವೆ ಒಂದು ಭಾಗದ ಎರಡು ಕಡೆ ತಡೆಗೋಡೆ ಕುಸಿದಿದೆ. ಸೇತುವೆ ಮೇಲ್ಭಾಗದ ಕೈಪಿಡಿಗಳು(ಗೋಡೆಗಳು), ಅಳವಡಿಸಿದ್ದ ಕೇಬಲ್‌ಗ‌ಳ ಕಾಂಕ್ರೀಟ್‌ ಸಹ ಕಿತ್ತು ಹೋಗಿದೆ. ಸೇತುವೆಯ ಎರಡು ಬದಿಯ ಕಾಂಕ್ರೀಟ್‌ ನಡುವೆ ದೊಡ್ಡದಾದ ಗಿಡಗಳು ಬೆಳೆದಿದ್ದು, ಸೇತುವೆಗೆ ಅಪಾಯ ತಂದೊಡ್ಡಿದೆ.

ಕಳೆದ ಎರಡು ವರ್ಷಗಳ ಹಿಂದೆ ಭಾರೀ ಪ್ರಮಾಣದಲ್ಲಿ ಬಿದಿರು ಸಿಕ್ಕಿಕೊಂಡಿದ್ದ ವೇಳೆ ಕಿಡಿಗೇಡಿಗಳು ಬಿದಿರು ಹಿಂಡಲಿಗೆ ಬೆಂಕಿ ಹಾಕಿದ್ದರಿಂದ ಸೇತುವೆಗೆ ಹಾನಿ ಸಂಭವಿಸಿತ್ತು. ಅಲ್ಲದೇ ಸೇತುವೆ ಕೆಳಗೆ ಅಪಾರ ಪ್ರಮಾಣದಲ್ಲಿ ಮರಳು ತೆಗೆದಿದ್ದರಿಂದ ಪ್ರವಾಹದಲ್ಲಿ ಸಾಕಷ್ಟು ಮಣ್ಣು ಕೊಚ್ಚಿಕೊಂಡು ಹೋಗಿದ್ದು, ತಳಪಾಯ ಕಾಣಿಸಿಕೊಂಡು ಅಪಾಯಕ್ಕೆ ಆಹ್ವಾನ ನೀಡಿದೆ.

ಅಪಾಯದಲ್ಲಿ ಕೊಳುವಿಗೆ ಸೇತುವೆ: ಹನಗೋಡು ಕೊಳವಿಗೆ ಬಳಿ ನದಿಗೆ ನಿರ್ಮಿಸಿರುವ ಸೇತುವೆಯ ಒಂದು ಬದಿಯಲ್ಲಿ ಪ್ರವಾಹವು ಅಪಾರ ಪ್ರಮಾಣದಲ್ಲಿ ಸೇತುವೆ ತಡೆಗೋಡೆಯ ಮಣ್ಣನ್ನು ಹಾಗೂ ರಸ್ತೆಯನ್ನೇ ಕೊಚ್ಚಿಹಾಕಿದ್ದು, ಈ ಸೇತುವೆ ಮೇಲೆ ದ್ವಿಚಕ್ರ ವಾಹನ ಹೊರತುಪಡಿಸಿ, ಬೇರೆ ಯಾವ ವಾಹನಗಳು ಸಂಚರಿಸಲಾಗುತ್ತಿಲ್ಲ. ಬಸ್‌ ಸಂಚಾರ ಕೂಡ ಸ್ಥಗಿತಗೊಂಡಿದ್ದು, ಬದಲಿ ಮಾರ್ಗದಲ್ಲಿ ಸುತ್ತಿಬಳಸಿ ಸಂಚರಿಸಬೇಕಾಗಿದೆ.

Advertisement

ಸೇತುವೆ ಪಿಲ್ಲರ್‌ ಅಪಾಯದಲ್ಲಿ: ಹುಣಸೂರು ನಗರದ ಬೈಪಾಸ್‌ ರಸ್ತೆಯ ಸೇತುವೆ ಡಾಂಬರ್‌ ಕಿತ್ತು ಹೋಗಿ ಗುಂಡಿಗಳು ಬಿದ್ದಿದ್ದರೆ, ತಳಭಾಗದಲ್ಲೂ ಭಾರೀ ಕೊರಕಲು ಉಂಟಾಗಿದೆ. ಈ ಸೇತುವೆ ಮೇಲೆ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದ್ದು, ಕೈಯಲ್ಲಿ ಜೀವ ಹಿಡಿದು ಸಂಚರಿಸುವಂತಾಗಿದೆ. ಇನ್ನು ನಗರಕ್ಕೆ ಸಮೀಪದ ಹನಗೋಡು ರಸ್ತೆಯ ರಾಮೇನಹಳ್ಳಿ ಬಳಿ ನದಿಗೆ ನಿರ್ಮಿಸಿದ್ದ ಸೇತುವೆಯ ಒಂದು ಬದಿ ಮಣ್ಣನ್ನು ಹೊತ್ತೂಯ್ದಿದೆ. ರಾಮಪಟ್ಟಣ ಬಳಿಯ ಸೇತುವೆ ರಸ್ತೆಯ ತಡೆಗೋಡೆ ಬಿದ್ದುಹೋಗಿದೆ.

10 ಕಿರು ಸೇತುವೆಗೆ ಹಾನಿ: ಹುಣಸೂರು-ಕೆ.ಆರ್‌.ನಗರ ರಸ್ತೆಯ ಶನಿದೇವರ ದೇವಾಲಯದ ಹತ್ತಿರ ಕಿರು ಸೇತುವೆ ಹಾನಿಗೊಳಗಾಗಿದ್ದು, ಸಂಚಾರ ಬಂದ್‌ ಆಗಿದೆ. ನಾಗನಹಳ್ಳಿ-ತಿಪ್ಪಲಾಪುರ ಮಾರ್ಗ ಬಳಸುದಾರಿಯಲ್ಲಿ ವಾಹನಗಳು ಸಂಚರಿಸುತ್ತಿವೆ. ನಿಲುವಾಗಿಲಿನ ಅವಲಕ್ಕಿಕಡದ ಮೋರಿ, ಭಾರತವಾಡಿ-ದೊಡ್ಡಹೆಜ್ಜೂರು ರಸ್ತೆಯ ಕೆರೆ ಏರಿಯ ಮೋರಿ ಸೇರಿದಂತೆ ಅನೇಕ ಕಡೆಗಳಲ್ಲಿ ಹಾನಿಯಾಗಿದೆ. 10ಕ್ಕೂ ಹೆಚ್ಚು ಸೇತುವೆಗಳು ಹಾನಿಯಾಗಿವೆ.

70 ಕಿ.ಮೀ. ರಸ್ತೆ ಹಾನಿ: ಪ್ರವಾಹದ ನೀರು ಗ್ರಾಮದೊಳಗೆ ನುಗ್ಗಿದ್ದರಿಂದ ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಸುಮಾರು 70 ಕಿ.ಮೀ. ರಸ್ತೆಗಳು ಹಾಳಾಗಿವೆ. ಹನಗೋಡು ಭಾಗದ ಕೋಣನಹೊಸಳ್ಳಿ ಗ್ರಾಮದ ಎಲ್ಲಾ ರಸ್ತೆಗಳನ್ನು ಕೊಚ್ಚಿ ಹೋಗಿದ್ದರೆ, ಕೊಳುವಿಗೆ, ಬಿಲ್ಲೇನಹೊಸಳ್ಳಿ, ಕೆ.ಜಿ.ಹಬ್ಬನಕುಪ್ಪೆ, ನೇಗತ್ತೂರು, ಅಬ್ಬೂರು, ಕಾಮಗೌಡನಹಳ್ಳಿ ಗೇಟ್‌, ಕಲ್ಲೂರಪ್ಪನ ಬೆಟ್ಟದ ರಸ್ತೆ, ಹರಳಹಳ್ಳಿ ರಸ್ತೆ, ಗಾವಡಗೆರೆ ಹೋಬಳಿಯ ಹುಲ್ಯಾಳು ರಸ್ತೆ, ಬಿಳಿಕೆರೆ ಹೋಬಳಿಯ ಚಿಕ್ಕಬೀಚನಹಳ್ಳಿ ರಸ್ತೆಗಳು ಹದಗೆಟ್ಟಿವೆ.

ಬಹುತೇಕ ಹಳ್ಳಿಗಳಲ್ಲಿ ಜಮೀನಿಗೆ ಹೋಗುವ ರಸ್ತೆಗಳಂತೂ ಕಿತ್ತು ಹೋಗಿವೆ. ಪ್ರವಾಹಕ್ಕೆ ಮೊದಲು ಜುಲೈನಲ್ಲಿ ಸುರಿದಿದ್ದ ಬಿರುಗಾಳಿ ಮಳೆಗೂ ಹಲವು ಕಡೆ ರಸ್ತೆಗಳು ಹದಗೆಟ್ಟಿದ್ದವು. ಕೆಲ ಮುಖ್ಯರಸ್ತೆಗಳನ್ನು ಹೊರತುಪಡಿಸಿದರೆ, ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ತಿ ಕಾರ್ಯ ಆರಂಭಗೊಂಡಿಲ್ಲ, ಕಾಮಗಾರಿ ನಡೆಸಲು ಅನುಮತಿ ಸಿಗದೆ, ಅನುದಾನ ಕೊರತೆಯೂ ಸಾಕಷ್ಟಿದೆ ಎಂಬುದು ತಿಳಿದು ಬಂದಿದೆ.

ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ನಾಲ್ಕು ದೊಡ್ಡ ಸೇತುವೆ, ಹತ್ತಕ್ಕೂ ಹೆಚ್ಚು ಕಿರು ಸೇತುವೆಗಳು, 9 ಕಿ.ಮೀ.ಗೂ ಹೆಚ್ಚು ರಸ್ತೆ ಹಾಳಾಗಿದೆ. ಹನಗೋಡು ಸೇತುವೆ ಬಳಿಯ ರಸ್ತೆ ಸೇರಿದಂತೆ ಅಗತ್ಯವಿರುವ ಕೆಲವೆಡೆ ತುರ್ತು ಕಾಮಗಾರಿ ಮಾತ್ರ ಕೈಗೊಳ್ಳಲಾಗಿದೆ. ರಸ್ತೆ ಹಾಗೂ ಸೇತುವೆ ದುರಸ್ತಿ ಕಾರ್ಯಕ್ಕೆ 7.5 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೇ ಈ ಹಿಂದೆ ಸುರಿದಿದ್ದ ಭಾರೀ ಮಳೆಗೆ 9 ಕಿ.ಮೀ ರಸ್ತೆಹಾನಿಯಾಗಿತ್ತು. ಈ ರಸ್ತೆಗಳ ದುರಸ್ತಿಗೆ 75 ಲಕ್ಷ ರೂ. ಪ್ರಸ್ತಾವನೆಯನ್ನು ಸರ್ಕಾರ‌ಕ್ಕೆ ಸಲ್ಲಿಸಲಾಗಿದೆ.
-ಕೃಷ್ಣ, ಎಇಇ, ಲೋಕೋಪಯೋಗಿ ಇಲಾಖೆ

ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ 60 ಕಿ.ಮೀ. ರಸ್ತೆ ಹಾನಿಯಾಗಿದೆ. ಎರಡು ಮೋರಿ, ಒಂದು ಸೇತುವೆಯ ತಡೆಗೋಡೆಗೆ ಧಕ್ಕೆಯಾಗಿದ್ದು, ಇವುಗಳ ದುರಸ್ತಿಗಾಗಿ 3.84 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು.
-ಮಹೇಶ್‌ ಎಇಇ, ಜಿಪಂ ಎಂಜಿನಿಯರಿಂಗ್‌ ವಿಭಾಗ

ತಾಲೂಕಿನಲ್ಲಿ ಪ್ರವಾಹದ ಹಾನಿಯಿಂದಾಗಿರುವ ರಸ್ತೆ-ಸೇತುವೆ ಮತ್ತಿತರ ಹಾನಿ ಬಗ್ಗೆ ರಾಜ್ಯ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ‌ ಮಾಹಿತಿ ನೀಡಲಾಗಿದೆ. ಹಣ ಬಿಡುಗಡೆಯಾದ ನಂತರ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು.
-ವೀಣಾ, ಉಪವಿಭಾಗಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next