Advertisement

Manipur; ಹಿಂಸೆ ಉಲ್ಬಣ: ಗೋಲಿಬಾರ್‌ಗೆ ಒಬ್ಬ ಬಲಿ: ಕರ್ಫ್ಯೂ ಮುಂದುವರಿಕೆ

09:07 PM Nov 18, 2024 | Team Udayavani |

ಇಂಫಾಲ್‌/ ಹೊಸದಿಲ್ಲಿ: ಮೂರು ದಿನ ಕಳೆದರೂ ಮಣಿಪುರದಲ್ಲಿ ಪರಿಸ್ಥಿತಿ ಶಾಂತವಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಸೋಮವಾರವೂ ರಾಜ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದ್ದು, ಪ್ರತಿಭಟನಕಾರರು ಮತ್ತು ಭದ್ರತ ಪಡೆಗಳ ನಡುವೆ ಘರ್ಷಣೆ ಏರ್ಪಟ್ಟಿದೆ.

Advertisement

ಇದರಲ್ಲಿ ಒಬ್ಬ ವ್ಯಕ್ತಿ ಗೋಲಿಬಾರ್‌ನಿಂದ ಸಾವನ್ನಪ್ಪಿದ್ದು, ವಿವಿಧ ಕಡೆ ನಡೆದ ಘರ್ಷಣೆಗಳಲ್ಲಿ ಏಳು 7 ಮಂದಿ ಸಾವಿಗೀಡಾಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಕಚೇರಿಗಳನ್ನು ಉದ್ರಿಕ್ತರು ಧ್ವಂಸಗೊಳಿಸಿದ್ದಾರೆ.

ಜಿರಿಬಾಮ್‌ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವ್ಯಕ್ತಿ ಗೋಲಿಬಾರ್‌ನಿಂದ ಸಾವನ್ನಪ್ಪಿದ ಬೆನ್ನಲ್ಲೇ ಕಾವು ಮತ್ತಷ್ಟು ಹೆಚ್ಚಳವಾಗಿದೆ. ಈ ಗುಂಡು ಹಾರಿಸಿದ್ದು ಭದ್ರತ ಪಡೆಗಳು ಹೌದೋ ಅಲ್ಲವೋ ಎಂಬುದು ದೃಢಪಟ್ಟಿಲ್ಲ. ಘರ್ಷಣೆ ವೇಳೆ ಭದ್ರತ ಪಡೆಗಳೇ ಗುಂಡು ಹಾರಿಸಿ ಪ್ರತಿ ಭಟನಕಾರನನ್ನು ಕೊಂದಿವೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

ಉದ್ರಿಕ್ತ ಗುಂಪು ಪೊಲೀಸ್‌ ಠಾಣೆಯಿಂದ ಕೇವಲ 500 ಮೀ. ದೂರವಿರುವ ಜಿರಿಬಾಮ್‌ ಬಿಜೆಪಿ ಕಚೇರಿಗೆ ನುಗ್ಗಿ ಬೆಂಕಿ ಹಚ್ಚಿದೆ. ಬಳಿಕ ಕಾಂಗ್ರೆಸ್‌ ಕಚೇರಿಗೂ ಬೆಂಕಿ ಇಕ್ಕಿದ್ದಾರೆ.

ಮುಂದುವರಿದ ಕರ್ಫ್ಯೂ
ಹಿಂಸಾಚಾರ ಹೆಚ್ಚಾಗುತ್ತಿದ್ದಂತೆ ಇಂಫಾಲ್‌ ಸಹಿತ 5 ಜಿಲ್ಲೆಗಳಲ್ಲಿ ವಿಧಿಸಿರುವ ಕರ್ಫ್ಯೂ ಹಾಗೂ ಇಂಟರ್ನೆಟ್‌ ಸ್ಥಗಿತವನ್ನು ಮುಂದುವರಿಸಲಾಗಿದೆ. ರಾಜಭವನ ಹಾಗೂ ಮುಖ್ಯಮಂತ್ರಿ ನಿವಾಸದ ಎದುರು ಭದ್ರತಪಡೆಯ ನಿಯೋಜನೆಯನ್ನೂ ಹೆಚ್ಚಿ ಸ ಲಾ ಗಿದೆ. ಮಾರುಕಟ್ಟೆಗಳು, ಸಾರ್ವಜನಿಕ ಸಾರಿಗೆ ಸೇವೆಯನ್ನು ರದ್ದು ಮಾಡಲಾಗಿದೆ. ಹಿಂಸಾಚಾರ ಆರಂಭವಾಗಿರುವ ಪ್ರದೇಶಗಳಲ್ಲಿ ಕೇಂದ್ರ ಸರಕಾರ ಮತ್ತು ಸಶಸ್ತ್ರ ಪಡೆ ಗಳ ವಿಶೇಷಾಧಿ ಕಾರ ಕಾಯ್ದೆ ಜಾರಿ ಮಾಡಲಾಗಿದೆ.

Advertisement

ಸರಕಾರಿ ಕಚೇರಿಗಳಿಗೆ ಬೀಗ
ಪ್ರತಿಭಟನನಿರತರು ಇಂಫಾಲ್‌ನಲ್ಲಿರುವ ಹಲವು ಸರಕಾರಿ ಕಚೇರಿಗಳಿಗೆ ಬೀಗ ಜಡಿದಿದ್ದಾರೆ. ಮೃತಪಟ್ಟ ಮೈತೇಯಿ ಜನರಿಗೆ ನ್ಯಾಯ ದೊರಕಿಸಿಕೊಡುವವರೆಗೂ ಬೀಗ ತೆರೆಯಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಪ್ರತಿಭಟನನಿರತರು ರಾಜಕಾರಣಿಗಳ ನಿವಾಸವನ್ನು ಪ್ರಮುಖವಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ.

ಎನ್‌ಡಿಎ ಸಭೆ ಕರೆದ ಸಿಎಂ
ರಾಜ್ಯ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಎನ್‌ಪಿಪಿ ಹಿಂಪಡೆದುಕೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಬೀರೇನ್‌ ಸಿಂಗ್‌ ಅವರು ಎನ್‌ಡಿಎ ಮೈತ್ರಿಕೂಟದ ನಾಯಕರ ಸಭೆ ಕರೆದು ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರಕಾರಕ್ಕೆ ಪತ್ರ ಬರೆದಿರುವ ಮೇಘಾಲಯ ಸಿಎಂ ಸಂಗ್ಮಾ ಅವರು ಕೇಂದ್ರ ಸರಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ. ಕಾಂಗ್ರೆಸ್‌ ಹಾಗೂ ಸಿಪಿಎಂ ಕೂಡ ಕೇಂದ್ರ ಸರಕಾರ ಪರಿಸ್ಥಿತಿಯನ್ನು ನಿಯಂತ್ರಿಸಬೇಕು ಎಂದು ಹೇಳಿವೆ.

3 ಪ್ರಕರಣಗಳು ಎನ್‌ಐಎ ತನಿಖೆಗೆ
ಮಣಿಪುರದಲ್ಲಿ ನಡೆದ 3 ಹಿಂಸಾಚಾರ ಪ್ರಕರಣಗಳ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡಿದೆ. ಶಸ್ತ್ರಾಸ್ತ್ರ ಹೊಂದಿದ್ದ ಬಂಡುಕೋರರು, ಜಿರಿಬಾಮ್‌ನಲ್ಲಿ ಮಹಿಳೆಯನ್ನು ಹತ್ಯೆ ಮಾಡಿದ ಪ್ರಕರಣ, ಸಿಆರ್‌ಪಿಎಫ್ ತುಕಡಿಯ ಮೇಲೆ ನಡೆದ ದಾಳಿ ಪ್ರಕರಣ, ಬೊರೋಬೆಕೆರಾ ಪ್ರದೇಶದಲ್ಲಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಎನ್‌ಐಎ ತನಿಖೆ ಮಾಡುತ್ತಿದೆ.

ಸತತ 2ನೇ ದಿನವೂ ಶಾ ಸಭೆ
ಮಣಿಪುರದಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸತತ 2ನೇ ದಿನವೂ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಮಣಿಪುರದಲ್ಲಿ ಭದ್ರತ ಪಡೆಗಳ ಹೆಚ್ಚಳ ಸಹಿತ ಅಗತ್ಯ ಕ್ರಮಗಳನ್ನು ಶೀಘ್ರ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸಭೆ ನಡೆಯುತ್ತಿರುವಾಗಲೇ ಸಂಘರ್ಷ ಪೀಡಿತ ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸುಮಾರು 5 ಸಾವಿರ ಮಂದಿಯನ್ನು ಒಳಗೊಂಡ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ (ಸಿಎಪಿಎಫ್)ಯ 50 ತುಕಡಿಗಳನ್ನು ಕಳುಹಿಸಲು ಗೃಹ ಸಚಿವಾಲಯ ಒಪ್ಪಿಗೆ ನೀಡಿದೆ. ನ. 12ರಂದು 20 ತುಕಡಿಗಳನ್ನು ಮಣಿಪುರಕ್ಕೆ ಕಳುಹಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next