Advertisement

1 ಕೋಟಿ ಲೀ ನೀರು ಸಂಗ್ರಹಿಸುವ ಟ್ಯಾಂಕ್‌: ನಲ್ಕ ಸರಳಾಯ ಸಹೋದರರ ಸಾಧನೆ

03:19 PM Apr 18, 2017 | Team Udayavani |

ಪೆರಡಾಲ: ಏರಿಳಿತವಿರುವ ಗುಡ್ಡಗಳನ್ನು ಹೊಂದಿರುವ ಮಲೆನಾಡಿನ ಹಲವು ಪ್ರದೇಶಗಳಲ್ಲಿ ಎತ್ತರದ ಸ್ಥಳಗಳಲ್ಲಿ ನಮ್ಮ ಪೂರ್ವಜರು ನಿರ್ಮಿಸಿದ  ಮಣ್ಣಿನಿಂದ ರಚಿಸಲ್ಪಟ್ಟ ನೀರಿನ ಅನೇಕ ಟ್ಯಾಂಕ್‌ಗಳಿವೆ. ಸುರಂಗಗಳ ಮೂಲಕ ನೀರಿನ ಒಳ ಹರಿವು. ಹಲವು ಮಂದಿ ಕೃಷಿಕರು ಇದನ್ನು ರಕ್ಷಿಸಿಕೊಂಡು ಬಂದು ತಮ್ಮ ನೀರಿನ ಆವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಕಾಸರಗೋಡು ಜಿಲ್ಲೆಯ ನಲ್ಕದ ಸನಿಹದ ಸರಳಾಯ ಸಹೋದರರು ಇಂತಹ ಒಂದು ಟ್ಯಾಂಕಿಯ ಗಾತ್ರವನ್ನು ಹೆಚ್ಚಿಸಿ ಮುಂದಿನ ಮಳೆಗಾಲದಲ್ಲಿ 1 ಕೋಟಿ ಲೀ.ಗೂ ಹೆಚ್ಚು ನೀರು ಸಂಗ್ರಹಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ.

Advertisement

ಸರಳಾಯ ಸಹೋದರರು: ಲಕ್ಷಿಪ್ರಿಯ ಸರಳಾಯ, ಅರುಣ್‌ಕುಮಾರ್‌ ಸರಳಾಯ ಮತ್ತು ಶಾಂತ ಕುಮಾರ್‌ ಸರಳಾಯ ನಲ್ಕದ ಸನಿಹದ ಕೇರಿಮೂಲೆ ಈ ಸಾಧನೆ ಮಾಡ ಹೊರಟ ಸಹೋದರರು. ತಮ್ಮ ಕೃಷಿ ಭೂಮಿಯ ಎತ್ತರದ ಭಾಗದಲ್ಲಿದ್ದ  ಈ ಟ್ಯಾಂಕ್‌ನಲ್ಲಿ ಶೇಖರಣೆಗೊಂಡ ನೀರಿನ ಮೂಲಕ ತಮ್ಮ ಅಡಿಕೆ ತೆಂಗು ಬಾಳೆ ಇತ್ಯಾದಿ ಬೆಳೆಗಳಿಗೆ ನೀರುಣಿಸುತ್ತಿದ್ದರು. ಇತ್ತೀಚೆಗೆ ಸಹೋದರರ ನಡುವೆ ಆಸ್ತಿಯ ವಿಭಾಗವಾಯಿತು. ಅರುಣ್‌ ಕುಮಾರ್‌ ತನ್ನಭಾಗಕ್ಕೆ ಬಂದ ಈ ಟ್ಯಾಂಕಿಯ ಗಾತ್ರವನ್ನು ಹಿಗ್ಗಿಸಿ ಮಳೆಗಾಲದಲ್ಲಿ ಹರಿದು ಹೋಗುತ್ತಿದ್ದ ನೀರನ್ನೂ ಕೂಡ ಹಿಡಿದಿಡುವ ಕುರಿತು ಯೋಚಿಸಿದರು. ಸಹೋದರರೂ ಬೆಂಬಲ ವ್ಯಕ್ತ ಪಡಿಸಿದರು.

1 ಕೋಟಿ ಲೀ. ಗೂ ಅಧಿಕ ನೀರು: ಹಿತಾಚಿ ಮತ್ತು ಟಿಪ್ಪರ್‌ನ ಮೂಲಕ ಕೆಲಸ ಆರಂಭಿಸಿದರು.  ಒಟ್ಟು 60 ಮೀ. ಉದ್ದ 40 ಮೀ. ಅಗಲ ಮತ್ತು 5 ಮೀ. ಆಳದ ಕೆರೆ ಸಿದ್ಧ ಪಡಿಸಿದರು. ಇದರಲ್ಲಿ ಅರ್ಧ ಭಾಗದ ಆಳ 4 ಮೀ. ಗೆ ಸೀಮಿತಗೊಳಿಸಿ ಬೇಸಿಗೆ ಗಾಲದಲ್ಲಿ ನೀರು ಕಡಿಮೆ ಯಾದಾಗ ಅರ್ಧ ಭಾಗದಲ್ಲಿ ಮಾತ್ರ ನೀರು ನಿಂತು ಹೊರತೆಗೆಯಲು ಸಾಧ್ಯವಾಗುವಂತೆ ಅಣಿಗೊಳಿಸಿದರು. ಟ್ಯಾಂಕ್‌ ಮಧ್ಯ ಭಾಗದಿಂದ 4 ಇಂಚು ವ್ಯಾಸದ ಪಿವಿಸಿ ಪೈಪ್‌ ನೀರು ಹೊರತೆಗೆಯಲು ಅಳವಡಿಸಿದ್ದಾರೆ. ಒಟ್ಟು ವೆ‌ಚ್ಚ ರೂ. 90 ಸಾವಿರ. ಅರ್ಧ ಎಕ್ರೆಗೂ ಅಧಿಕ ಸ್ಥಳದಲ್ಲಿ ಈ ಟ್ಯಾಂಕ್‌ ಆವರಿಸಿಕೊಂಡಿದೆ. ನಮ್ಮ ಗಣಿತ ಮೇಷ್ಟ್ರ ಲೆಕ್ಕದಂತೆ 10,800 ಘನ ಮೀಟರ್‌ ನೀರು ಅಂದರೆ ಒಂದು ಕೋಟಿಯ 8 ಲಕ್ಷ ಲೀಟರ್‌ ನೀರು ಹಿಡಿಸಬಲ್ಲದು.

ಸುರಂಗದಿಂದ ನೀರು :  ಈ ಟ್ಯಾಂಕ್‌ ಒಳಗಡೆ ಎರಡು ಸುರಂಗಗ ಳಿಂದ ನೀರು ಹರಿದು ಬರುತ್ತಿದೆ. ಮಳೆಗಾಲದಲ್ಲಿ ಬಲವಾದ ಒರತೆ ಇದೆ. ಈ ನೀರು ಸಂಗ್ರಹಿಸಿಡುವುದು ಇವರ ಉದ್ದೇಶ. ಇವರ ಸ್ನೇಹಿತ ಯುವ ಮುಂದಾಳು ಸುಮಿತ್‌ ರಾಜ್‌ ಈ ಸ್ಥಳಕ್ಕೆ ಭೇಟಿ  ನೀಡಿದರು. ಸ್ನೇಹಿತನ ಈ ಸಾಹಸವನ್ನು ತನ್ನ ಫೇಸ್‌ ಬುಕ್‌ಗೆ ಲೋಡ್‌ ಮಾಡಿದರು. ಸ್ನೇಹಿತನ ಈ ಸಾಧನೆಯನ್ನು ಅರುಣ ಕಲ್ಯಾಣಿ ಎಂದು ನಾಮಕರಣ ಮಾಡಿ  ಇ – ಮಾಧ್ಯಮದ ಮೂಲಕ ಪ್ರಚಾರ ಮಾಡಿದರು. ಇದು ಈ ಲೇಖಕರ ಕಣ್ಣಿಗೆ ಬಿದ್ದು ಸ್ಥಳ ಭೇಟಿಯ ಮೂಲಕ  ಈ ಲೇಖನ ರೂಪುಗೊಂಡಿತು.

ಮಣ್ಣ ಟ್ಯಾಂಕ್‌ಗಳು ಪುನರ್ಜನ್ಮ ಪಡೆಯಲಿ: ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಸ್ಥಳಗಳಲ್ಲಿ ಮಣ್ಣಿನ ನೀರಿನ ಟ್ಯಾಂಕ್‌ಗಳಿವೆ. ಹಲವಾರು ಮಂದಿ ಪ್ರತಿವರ್ಷ ಉಸ್ತುವಾರಿ ನೋಡಿಕೊಳ್ಳುತ್ತಾ  ಕೃಷಿ ಭೂಮಿಗೆ ನೀರು ಪಡೆಯುತ್ತಿದ್ದಾರೆ. ಈ ಟ್ಯಾಂಕ್‌ಗಳ ಕೆಳಭಾಗದಲ್ಲಿ  ಕೃಷಿ ಭೂಮಿ ಇರುವುದರಿಂದ  ಮಣ್ಣಿನ ಮೂಲಕ ನೀರು ಕೆಳ ಭಾಗಕ್ಕೆ ಇಂಗಿ ತೋಟಗಳೆಲ್ಲ ತಂಪಾಗಿರುತ್ತವೆ. ಆದರೆ ಇಂದಿನ ಕೊಳವೆ ಬಾವಿ ಯುಗದಲ್ಲಿ ಹಲವರು ಇಂತಹ ಟ್ಯಾಂಕ್‌ಗಳನ್ನು ಮುಚ್ಚಿ ಕೃಷಿ ಮಾಡಿ ಇಂದು ನೀರಿನ ಬರವನ್ನು ಎದುರಿಸುತ್ತಿದ್ದಾರೆ. ಇಂತಹ  ಟ್ಯಾಂಕ್‌ಗಳು ಇಂದು ಪುನರ್ಜನ್ಮ ಪಡೆದು ನೀರಿನ ಬರವನ್ನು ದೂರ ಮಾಡಬೇಕಾಗಿದೆ. ಹಲವೆಡೆ ಮತ್ತೆ ಇಂತಹ ಟ್ಯಾಂಕ್‌ಗಳ ನಿರ್ಮಾಣದ ಪ್ರಯತ್ನ ಹಲವು ರೀತಿಯಲ್ಲಿ ಆಗುತ್ತಲಿವೆ. ಮಳೆಗಾಲದಲ್ಲಿ ಪೋಲಾಗಿ ಹೋಗುವ ನೀರನ್ನು ತಡೆದು ನಿಲ್ಲಿಸಿ ಜಲಕ್ಷಾಮವನ್ನು ಎದುರಿಸಲು ಇಂತಹ ಕಾಮಗಾರಿಗಳು ಇಂದಿನ ಅಗತ್ಯವಾಗಿದೆ.  ಈ ನಿಟ್ಟಿನಲ್ಲಿ  ನಮ್ಮ ಮಕ್ಕಳಿಗೆ ನೀರಿನ ಪಾಠವಾಗಬೇಕಿದೆ. ಸರಳಾಯ ಸಹೋದರರ ಈ ಪ್ರಯತ್ನಕ್ಕೆ ಅಭಿನಂದನೆ ಹೇಳ್ಳೋಣ

Advertisement

ಶಂಕರ್‌ ಸಾರಡ್ಕ

Advertisement

Udayavani is now on Telegram. Click here to join our channel and stay updated with the latest news.

Next