ಕಟಪಾಡಿ: ಈಗಾಗಲೇ ಕಟಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 1 ಕೋಟಿ 82 ಲಕ್ಷ ಅನುದಾನದಲ್ಲಿ ಯೋಜನೆಗಳ ಕಾಮಗಾರಿಯನ್ನು ಮಂಜೂರಾತಿಗೊಳಿಸಲಾಗಿದೆ. ಶೇ. 50ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು ,ಇನ್ನುಳಿದಂತೆ ಕೆಲ ಕಾಮಗಾರಿಯು ಟೆಂಡರ್ ಹಂತ, ಕೊವಿಡ್ 19 ಸಹಿತ ಇತರೇ ಕಾರಣಗಳಿಂದ ಹಿಂದುಳಿದಿದೆ. ಮತ್ತೂಮ್ಮೆ ಮಂಜೂರಾತಿಗೊಳಿಸಿ ಯೋಜಿತ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಅವರು ಜೂ.28ರಂದು ಕಾಪು ತಾಲೂಕಿನ ಕಟಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಡಿ ಪೂರ್ಣಗೊಳಿಸಲಾದ 54.10 ಲಕ್ಷ ಮೊತ್ತದ ವಿವಿಧ 15 ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ, ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶೇಷವಾಗಿ 25 ಕೋಟಿ ರೂ ಅನುದಾನವನ್ನು ಕಾಪು ವಿಧಾನ ಸಭಾ ಕ್ಷೇತ್ರಕ್ಕೆ ಬಿಡುಗಡೆಗೊಳಿಸಿದ್ದರು. ಜೊತೆಗೆ ಇತರೇ ಇಲಾಖೆಗಳ ಅನುದಾನವನ್ನು ಬಳಸಿಕೊಂಡು ಹಂತ ಹಂತವಾಗಿ ಕಾಪು ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಯತ್ತ ಮುನ್ನಡೆಸಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ಕಟಪಾಡಿ ಗ್ರಾ.ಪಂ. ಸದಸ್ಯರುಗಳಾದ ಸುಭಾಸ್ ಬಲ್ಲಾಳ್, ಪವಿತ್ರಾ ಶೆಟ್ಟಿ, ಶ್ರೀಧರ ಪೂಜಾರಿ, ಬಿಜೆಪಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್, ಅನಿಲ್ ಶೆಟ್ಟಿ, ಏಣಗುಡ್ಡೆ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್, ಮೂಡಬೆಟ್ಟು ಶಕ್ತಿ ಕೇಂದ್ರದ ಅಧ್ಯಕ್ಷ ನಿತಿನ್ ವಿ. ಶೇರಿಗಾರ್, ಪ್ರಮುಖರಾದ ಕಮಲಾಕ್ಷ ಕಟಪಾಡಿ, ಶ್ರೀನಿವಾಸ ಕಿಣಿ, ಅಭಿರಾಜ್ ಸುವರ್ಣ, ಸುಜಿತ್ ಕುಮಾರ್, ಗುತ್ತಿಗೆದಾರರು ಹಾಗೂ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯರ ಉಪಸ್ಥಿತರಿದ್ದರು