Advertisement

BESCOM: ಇಂದಿನಿಂದ ಯುನಿಟ್‌ಗೆ 1.15 ರೂ. ಏರಿಕೆ -ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್‌ ಬರೆ

10:23 PM Aug 31, 2023 | Team Udayavani |

ಬೆಂಗಳೂರು: ಗೌರಿ-ಗಣೇಶ ಹಬ್ಬಕ್ಕೂ ಮೊದಲೇ ಗ್ರಾಹಕರಿಗೆ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ವಿದ್ಯುತ್‌ ದರ ಏರಿಕೆ “ಶಾಕ್‌’ ನೀಡಿದೆ. ಅಷ್ಟೇ ಅಲ್ಲ, ಇದರ “ಬಿಸಿ’ ಮುಂಬರುವ ದಿನಗಳಲ್ಲೂ ನಿರಂತರವಾಗಿ ತಟ್ಟುವ ಸಾಧ್ಯತೆಗಳೂ ನಿಚ್ಚಳವಾಗಿವೆ!

Advertisement

ಚುನಾವಣೆ ಹಿನ್ನೆಲೆಯಲ್ಲಿ ವಸೂಲು ಮಾಡದೆ ಉಳಿದಿರುವ ಇಂಧನ ಮತ್ತು ವಿದ್ಯುತ್‌ ಖರೀದಿ ಹೊಂದಾಣಿಕೆ ವೆಚ್ಚದ ಹಳೆಯ ಬಾಕಿ ಹಾಗೂ ಪ್ರತಿ ತಿಂಗಳ ಇಂಧನ ಮತ್ತು ವಿದ್ಯುತ್‌ ಖರೀದಿ ಹೊಂದಾಣಿಕೆ ವೆಚ್ಚ ಸೇರಿಸಿ ಪ್ರತಿ ಯೂನಿಟ್‌ಗೆ 1.15 ರೂ. ಹೆಚ್ಚಳ ಮಾಡುವ ಮೂಲಕ ಗ್ರಾಹಕರಿಂದ ವಸೂಲು ಮಾಡಲು ಬೆಸ್ಕಾಂ ನಿರ್ಧರಿಸಿದ್ದು, ಈ ಸಂಬಂಧ ಮಂಗಳವಾರವಷ್ಟೇ ಆದೇಶ ಹೊರಡಿಸಿದೆ.

ಅದರಂತೆ ಸೆಪ್ಟೆಂಬರ್‌ನಿಂದ ಪರಿಷ್ಕೃತ ದರ ಅನ್ವಯ ಆಗಲಿದೆ. ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರಕಾರದ ಗ್ರಾಹಕರಿಗೆ ಈ ದರ ಏರಿಕೆ ಬಿಸಿ ತಟ್ಟಲಿದೆ. ಆದರೆ, “ಗೃಹಜ್ಯೋತಿ’ ಯೋಜನೆ ಜಾರಿಗೊಳಿಸಿದ್ದರಿಂದ ಮಾಸಿಕ 200 ಯೂನಿಟ್‌ಗಿಂತ ಕಡಿಮೆ ಉಪಯೋಗಿಸುವ ಗೃಹ ಬಳಕೆದಾರರಿಗೆ ಇದರ ಬಿಸಿ ತಟ್ಟುವುದಿಲ್ಲ. ಯಾಕೆಂದರೆ, ಸರ್ಕಾರವೇ ಅದನ್ನು ಭರಿಸಲಿದೆ. ಉಳಿದಂತೆ 200 ಯೂನಿಟ್‌ಗಿಂತ ಮೇಲ್ಪಟ್ಟ ಗೃಹ ಬಳಕೆದಾರರು, ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಇದರ ಹೊರೆ ತುಸು ಭಾರವಾಗಲಿದೆ.

ಲೆಕ್ಕಾಚಾರ ಹೀಗಿದೆ:
ಒಟ್ಟಾರೆ ಹೆಚ್ಚಳ ಮಾಡಲಾದ 1.15 ರೂಪಾಯಿಯಲ್ಲಿ 2022-23ನೇ ಹಣಕಾಸು ವರ್ಷದ ಮೂರನೇ ತ್ತೈಮಾಸಿಕ ಅಂದರೆ ಅಕ್ಟೋಬರ್‌- ಡಿಸೆಂಬರ್‌ ಅವಧಿಯ ಇಂಧನ ಮತ್ತು ವಿದ್ಯುತ್‌ ಖರೀದಿ ಹೊಂದಾಣಿಕೆ ವೆಚ್ಚ (ಎಫ್ಪಿಪಿಸಿಎ)ದ ಪ್ರತಿ ಯೂನಿಟ್‌ಗೆ 51 ಪೈಸೆ ಆಗಿದೆ. ಇದರ ಜತೆಗೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಅದೇ ಎಫ್ಪಿಪಿಸಿಎ ಅನ್ನು ಗ್ರಾಹಕರಿಂದ ಪ್ರತಿ ತಿಂಗಳ ಬಿಲ್ಲಿಂಗ್‌ ವೇಳೆ ಪಡೆಯಲು ಅವಕಾಶ ಕಲ್ಪಿಸಿದೆ. ಅದರಂತೆ 2023ರ ಏಪ್ರಿಲ್‌, ಜೂನ್‌ ಮತ್ತು ಜುಲೈ ತಿಂಗಳ ಇಂಧನ ಹೊಂದಾಣಿಕೆ ವೆಚ್ಚ ಬಾಕಿ ಇದ್ದು, ಪ್ರತಿ ಯೂನಿಟ್‌ಗೆ 64 ಪೈಸೆಯಂತೆ ಅದನ್ನು ವಸೂಲು ಮಾಡುವುದಾಗಿ ಬೆಸ್ಕಾಂ ತನ್ನ ಆದೇಶದಲ್ಲಿ ಹೇಳಿದೆ. ಆದೇಶದ ಪ್ರಕಾರ ಸೆಪ್ಟೆಂಬರ್‌ನಿಂದ ವಸೂಲು ಮಾಡಲು ನಿರ್ಧರಿಸಲಾಗಿದೆ.

ಹಾಗೆ ನೋಡಿದರೆ, 2022ರ ಅಕ್ಟೋಬರ್‌- ಡಿಸೆಂಬರ್‌ ಎಫ್ಪಿಪಿಸಿಎ ಅನ್ನು ಕಳೆದ ಏಪ್ರಿಲ್‌ನಿಂದಲೇ ವಸೂಲು ಮಾಡಲು ಕೆಇಆರ್‌ಸಿ ಅನುಮತಿ ನೀಡಿತ್ತು. ಆದರೆ, ವಿಧಾನಸಭಾ ಚುನಾವಣೆ ಇದ್ದುದರಿಂದ ಬೆಸ್ಕಾಂ ದರ ಹೆಚ್ಚಳ ಮಾಡುವ ಗೋಜಿಗೆ ಹೋಗಲಿಲ್ಲ. ನಂತರದಲ್ಲಿ ಆಯೋಗದ ಮೊರೆಹೋದ ಬೆಸ್ಕಾಂ, ಜುಲೈನಿಂದ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನಿಂದ ಡಿಸೆಂಬರ್‌ ಎರಡು ಹಂತಗಳಲ್ಲಿ ಬಾಕಿ “ರಿಕವರಿ’ ಮಾಡಿಕೊಳ್ಳಲು ಅನುಮತಿ ನೀಡುವಂತೆ ಮನವಿ ಮಾಡಿತು. ಅದಕ್ಕೆ ಆಯೋಗವೂ ಅಸ್ತು ಅಂದಿತು. ಅದು ಕ್ರಮವಾಗಿ ಪ್ರತಿ ಯೂನಿಟ್‌ಗೆ 51 ಪೈಸೆ ಮತ್ತು 50 ಪೈಸೆ ಆಗುತ್ತದೆ.

Advertisement

ಇನ್ನೂ ಕಾದಿದೆ ಏರಿಕೆ “ಬರೆ’
ರಾಜ್ಯದಲ್ಲಿ ಒಂದೆಡೆ ವಿದ್ಯುತ್‌ ಬೇಡಿಕೆ ಹೆಚ್ಚಳ ಮತ್ತೂಂದೆಡೆ ಉತ್ಪಾದನೆ ಕುಂಠಿತ ಆಗುತ್ತಿದ್ದು, ಖರೀದಿ ಅನಿವಾರ್ಯ ಆಗುತ್ತಿದೆ. ಇದರಿಂದ ಮುಂಬರುವ ದಿನಗಳಲ್ಲಿ ದರ ಏರಿಕೆ ರೂಪದಲ್ಲಿ ಜನರಿಗೆ ಹೊರೆ ಆಗಲಿದ್ದು, ವಿವಿಧ ಕ್ಷೇತ್ರಗಳಲ್ಲೂ ಇದರ ಪರಿಣಾಮ ಬೀರಲಿದೆ.

ಮಳೆ ಕೊರತೆಯಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಇದರಿಂದ ಲಭ್ಯವಿರುವ ನೀರಿನಲ್ಲಿ ವರ್ಷಪೂರ್ತಿ ಜಲವಿದ್ಯುತ್‌ ಉತ್ಪಾದನೆ ಮಾಡಬೇಕಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ಉತ್ಪಾದನೆ ಕಷ್ಟ. ಜತೆಗೆ ಕಲ್ಲಿದ್ದಲು ಬೆಲೆ ಕೂಡ ಏರಿಕೆಯಾಗಿದೆ. ಈ ನಡುವೆ ಕೃಷಿ ಚಟುವಟಿಕೆಗಳಿಗಾಗಿ ವಿದ್ಯುತ್‌ ಬೇಡಿಕೆ ವಿಪರೀತ ಏರಿಕೆಯಾಗಿದೆ. ಇದನ್ನು ಪೂರೈಸಲು ಖರೀದಿ ಮೊರೆಹೋಗಬೇಕು. ಆಗ ಸಹಜವಾಗಿ ಅದರ ಹೊರೆ ಗ್ರಾಹಕರ ಮೇಲೆ ಬೀಳಲಿದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next