Advertisement
ಶುಕ್ರವಾರದ ದ್ವಿತೀಯ ಮುಖಾಮುಖೀಯಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 6 ವಿಕೆಟಿಗೆ 336 ರನ್ ಬಾರಿಸಿದಾಗ ಮೇಲುಗೈ ಸಾಧಿಸಿತೆಂದೇ ಭಾವಿಸಲಾಗಿತ್ತು. ಆದರೆ ಆರಂಭಿಕ ಆಟಗಾರ ಜಾನಿ ಬೇರ್‌ಸ್ಟೊ, ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮತ್ತು ಜಾಸನ್ ರಾಯ್ ಸೇರಿಕೊಂಡು ಆತಿಥೇಯರ ಬೌಲಿಂಗ್ ಮೇಲೆರಗಿ ಹೋದರು. 43.3 ಓವರ್‌ಗಳಲ್ಲಿ 4 ವಿಕೆಟಿಗೆ 337 ರನ್ ಬಾರಿಸುವ ಮೂಲಕ ಇಂಗ್ಲೆಂಡ್ ಗೆದ್ದು ಬಂದಿತು. ಸರಣಿ ನಿರ್ಣಾಯಕ ಪಂದ್ಯ ರವಿವಾರ ನಡೆಯಲಿದೆ.
ಕೆ.ಎಲ್. ರಾಹುಲ್ ಅವರ ಸೆಂಚುರಿ, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಪವರ್‌ಫುಲ್ ಗೇಮ್, ವಿರಾಟ್ ಕೊಹ್ಲಿ ಅವರ ನಾಯಕನ ಆಟದಿಂದ ಭಾರತದ ಇನ್ನಿಂಗ್ಸ್ ರಂಗೇರಿಸಿಕೊಂಡಿತು. ಹಂತ ಹಂತವಾಗಿ ರನ್ ಗತಿಯನ್ನು ಏರಿಸಿಕೊಂಡು ಮುನ್ನೂರರ ಗಡಿ ದಾಟಿ ಮುನ್ನುಗ್ಗಿತು. ಮೊದಲ 10 ಓವರ್‌ಗಳ ಪವರ್ ಪ್ಲೇಯಲ್ಲಿ ಗಳಿಸಿದ್ದು ಕೇವಲ 42 ರನ್, ಅಂತಿಮ 10 ಓವರ್‌ಗಳಲ್ಲಿ ಸೂರೆಗೈದದ್ದು ಬರೋಬ್ಬರಿ 126 ರನ್… ಇದು ಟೀಮ್ ಇಂಡಿಯಾದ ಏರುಗತಿಯ ಬ್ಯಾಟಿಂಗ್ ಸೂಚ್ಯಂಕವಾಗಿ ದಾಖಲಾಯಿತು.
Related Articles
Advertisement
ಇದನ್ನೂ ಓದಿ:ಶನಿವಾರ ಇನ್ನಷ್ಟು ಮಾಹಿತಿ ಬಹಿರಂಗ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ
ಆಕರ್ಷಕ ಪುಲ್ ಹಾಗೂ ಡ್ರೈವ್, ಆಗಾಗ ಮುನ್ನುಗ್ಗಿ ಬಾರಿಸುವ ಮೂಲಕ ರಾಹುಲ್ 5ನೇ ಶತಕದ ಸಂಭ್ರಮದಲ್ಲಿ ವಿಹರಿಸಿದರು. 108 ಎಸೆತಗಳಲ್ಲಿ ಅವರ ಸೆಂಚುರಿ ಪೂರ್ತಿಗೊಂಡಿತು. ಒಟ್ಟು 114 ಎಸೆತಗಳಿಂದ 108 ರನ್ ಕೊಡುಗೆ ಸಲ್ಲಿಸಿದರು. 7 ಫೋರ್, 2 ಸಿಕ್ಸರ್ ರಾಹುಲ್ ಬ್ಯಾಟಿಂಗಿನ ಆಕರ್ಷಣೆಯಾಗಿತ್ತು.
ಕಳೆದ ಪಂದ್ಯದ ಹೀರೋ ಶಿಖರ್ ಧವನ್ (4) ಮತ್ತು ರೋಹಿತ್ ಶರ್ಮ (25) 37 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿದ ಬಳಿಕ ಕೊಹ್ಲಿ-ರಾಹುಲ್ ತಂಡದ ರಕ್ಷಣೆಗೆ ನಿಂತರು. 121 ರನ್ ಜತೆಯಾಟದ ಮೂಲಕ ದೊಡ್ಡ ಮೊತ್ತಕ್ಕೆ ಮುನ್ನುಡಿ ಬರೆದರು. ಕ್ಯಾಪ್ಟನ್ ಕೊಹ್ಲಿ ಕೊಡುಗೆ 79 ಎಸೆತಗಳಿಂದ 66 ರನ್.
ಪಂತ್, ಪಾಂಡ್ಯ ಪವರ್ ಗೇಮ್ವಿಕೆಟ್ ಕೀಪರ್ ರಿಷಭ್ ಪಂತ್ ಭರ್ಜರಿ ಪುನರಾಗಮನ ಸಾರಿದರು. ಇವರ ಬ್ಯಾಟಿಂಗ್ ಆರ್ಭಟಕ್ಕೆ ಆಂಗ್ಲರ ಬೌಲಿಂಗ್ ಧೂಳೀಪಟಗೊಂಡಿತು. ಅವರ “ಸಿಕ್ಸ್ ಹಿಟ್ಟಿಂಗ್ ಪವರ್’ ಇಲ್ಲಿ ಹೊಸ ಆಯಾಮ ಪಡೆಯಿತು. 7 ಸಿಕ್ಸರ್, 3 ಬೌಂಡರಿ ಬಾರಿಸಿ ಸಿಡಿದು ನಿಂತ ಪಂತ್, 40 ಎಸೆತಗಳಿಂದ 77 ರನ್ ಚಚ್ಚಿದರು. ಅವರಿಗೆ 2 ಸಲ ಡಿಆರ್‌ಎಸ್ ಗೆಲುವು ಒಲಿದಿತ್ತು. ರಾಹುಲ್-ಪಂತ್ ಕೇವಲ 12.5 ಓವರ್‌ಗಳಿಂದ 113 ರನ್ ಪೇರಿಸಿದರು. ಹಾರ್ದಿಕ್ ಪಾಂಡ್ಯ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟಿ ಆರ್ಭಟಿಸತೊಡಗಿದರು. ಇವರದು 16 ಎಸೆತಗಳ ಚುಟುಕು ಇನ್ನಿಂಗ್ಸ್. ಆದರೆ ಹರಿದು ಬಂದದ್ದು 35 ರನ್ (4 ಸಿಕ್ಸರ್, ಒಂದು ಫೋರ್). ಕಿವಿ ಮುಚ್ಚಿ ಪ್ರತ್ಯುತ್ತರ!
ಟಿ20 ಪಂದ್ಯಗಳಲ್ಲಿ ಸತತ ವೈಫಲ್ಯ ಅನುಭವಿಸಿ ಟೀಕೆಗೆ ತುತ್ತಾಗಿದ್ದ ಕೆ.ಎಲ್. ರಾಹುಲ್ ದ್ವಿತೀಯ ಏಕದಿನದಲ್ಲಿ ಶತಕ ಬಾರಿಸಿದರು. ಈ ವೇಳೆ ಎರಡೂ ಕಿವಿ ಮುಚ್ಚಿ ಕೊಂಡು ತಮ್ಮ ಶತಕವನ್ನು ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದರು.
“ಕೆಲವರು ನಿಮ್ಮನ್ನು ಕೆಳಗೆ ಎಳೆಯಲೆಂದೇ ಕಾಯುತ್ತಿರುತ್ತಾರೆ, ನಿರಂತರ ಟೀಕೆ ಮಾಡುತ್ತಾರೆ. ನಾನಿಲ್ಲಿ ಯಾರನ್ನೂ ಅಗೌರವಿಸಲು ಬಯಸುವುದಿಲ್ಲ, ಅಂತಹ ಟೀಕಾಕಾರರ ಗದ್ದಲವನ್ನು ಕೇಳಲೂ ಇಷ್ಟಪಡುವುದಿಲ್ಲ. ಈ ಗದ್ದಲಗಳಿಗೆ ಕಿವಿಮುಚ್ಚಿ ಕೊಂಡು, ಬ್ಯಾಟಿನಿಂದಲೇ ಉತ್ತರಿಸುತ್ತೇನೆ’ ಎನ್ನುವುದೇ ನನ್ನ ಸಂದೇಶ ಎಂದು ರಾಹುಲ್ ಅನಂತರ ಹೇಳಿದರು. ಸ್ಟೋಕ್ಸ್‌ಗೆ ಎಚ್ಚರಿಕೆ
ಪಂದ್ಯದ ವೇಳೆ ಚೆಂಡಿಗೆ ಎಂಜಲು ಸವರಿದ ಕಾರಣ ಅಂಪಾಯರ್‌ಗಳು ಬೆನ್ ಸ್ಟೋಕ್ಸ್‌ಗೆ ಎಚ್ಚರಿಕೆ ನೀಡಿದ ಘಟನೆ ನಡೆದಿದೆ. ಕೋವಿಡ್-19 ಕಾರಣ ಚೆಂಡಿಗೆ ಎಂಜಲು ಹಚ್ಚುವುದನ್ನು ಐಸಿಸಿ ನಿಷೇಧಿಸಿದೆ. ಸ್ಟೋಕ್ಸ್ ಮೊದಲ ಬಾರಿ ಈ ನಿಯಮ ಉಲ್ಲಂ ಸಿದ್ದರು. ಭಾರತದ ಇನ್ನಿಂಗ್ಸ್‌ನ 4ನೇ ಓವರ್‌ನಲ್ಲಿ ಈ ಘಟನೆ ನಡೆಯಿತು.