ಕೇಪ್ ಟೌನ್: ವನಿತಾ ಟಿ20 ವಿಶ್ವಕಪ್ ನಲ್ಲಿ ಭಾರತದ ಅಭಿಯಾನ ಸೆಮಿ ಫೈನಲ್ ನಲ್ಲಿ ಅಂತ್ಯವಾಗಿದೆ. ಆಸ್ಟ್ರೇಲಿಯಾ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಹರ್ಮನ್ ಪ್ರೀತ್ ಪಡೆ ಐದು ರನ್ ಅಂತರದ ಸೋಲನುಭವಿಸಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಆಸೀಸ್ ನಾಲ್ಕು ವಿಕೆಟ್ ನಷ್ಟಕ್ಕೆ 172 ರನ್ ಮಾಡಿದರೆ, ಭಾರತವು ಎಂಟು ವಿಕೆಟ್ ಕಳೆದುಕೊಂಡು 167 ರನ್ ಮಾತ್ರ ಪೇರಿಸಿತು.
ಚೇಸಿಂಗ್ ವೇಳೆ ಭರ್ಜರಿ ಅರ್ಧಶತಕ ಸಿಡಿಸಿ ಭಾರತಕ್ಕೆ ಗೆಲುವಿನ ಆಸೆ ಹುಟ್ಟಿಸಿದ್ದ ನಾಯಕಿ ಹರ್ಮನ್ ನಿರ್ಣಾಯಕ ಹಂತದಲ್ಲಿ ರನೌಟಾದರು. 34 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 52 ರನ್ ಚಚ್ಚಿದರು.
ಪಂದ್ಯ ಸೋತ ಬಳಿಕ ಹರ್ಮನ್ ಭಾವುಕರಾದರು. ಪ್ರೆಸೆಂಟೇಶನ್ ನಲ್ಲಿ ಮಾತನಾಡುವ ವೇಳೆ ಕಪ್ಪು ಕನ್ನಡಕವನ್ನು ಧರಿಸಿ ಬಂದಿದ್ದರು. “ ನಾನು ಅಳುವುದನ್ನು ನನ್ನ ದೇಶ ನೋಡುವುದು ನನಗೆ ಇಷ್ಟವಿಲ್ಲ. ಆದ್ದರಿಂದ ನಾನು ಈ ಕನ್ನಡಕವನ್ನು ಧರಿಸಿದ್ದೇನೆ, ನಾನು ಭರವಸೆ ನೀಡುತ್ತೇನೆ, ನಮ್ಮ ಆಟವನ್ನು ಸುಧಾರಿಸುತ್ತೇವೆ” ಎಂದರು.
ಆರಂಭಿಕರಾದ ಸ್ಮತಿ ಮಂಧನಾ, ಶಫಾಲಿ ವರ್ಮ, ಯಾಸ್ತಿಕಾ ಭಾಟಿಯ ಅಲ್ಪ ಮೊತ್ತಕ್ಕೆ ಔಟಾದ ನಂತರ ತಂಡದ ಹೋರಾಟವನ್ನು ಜೆಮಿಮಾ ರೋಡ್ರಿಗ್ಸ್ ಮತ್ತು ಹರ್ಮನ್‌ಪ್ರೀತ್ ಜಾರಿಯಲ್ಲಿಟ್ಟರು. ಇಬ್ಬರೂ 4ನೇ ವಿಕೆಟ್‌ಗೆ 69 ರನ್ ಒಗ್ಗೂಡಿಸಿದ್ದರು. ಈ ಹಂತದಲ್ಲಿ ಜೆಮಿಮಾ 24 ಎಸೆತಗಳಿಂದ 43 ರನ್ ಗಳಿಸಿ ಔಟಾದರು. ಮತ್ತೂಂದು ಕಡೆ ಸಿಡಿಯುತ್ತಲೇ ಹೋದ ಕೌರ್ 34 ಎಸೆತಗಳಲ್ಲಿ, 6 ಬೌಂಡರಿ, 1 ಸಿಕ್ಸರ್ ಸಮೇತ 52 ರನ್ ಚಚ್ಚಿದರು. ದುರದೃಷ್ಟವಶಾತ್ ಅವರು ರನೌಟಾದರು. ಆಗಲೂ ಪಂದ್ಯ ಭಾರತದ ನಿಯಂತ್ರಣದಲ್ಲೇ ಇತ್ತು. ಆದರೆ ಗೆಲ್ಲಿಸುವ ಮಟ್ಟದ ಇನಿಂಗ್ಸ್ ಯಾರಿಂದಲೂ ಬರಲಿಲ್ಲ