Advertisement

ಟ್ಯಾಂಕರ್‌ನಿಂದ ಪೂರೈಸಿದ್ರೂ ನೀರಿಗೆ ತತ್ವಾರ!

11:01 AM Apr 04, 2019 | Naveen |

ಚಿಕ್ಕಮಗಳೂರು: ಒಂದೆಡೆ ಬಿಸಿಲಿನ ತಾಪ, ಮತ್ತೊಂದೆಡೆ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ. ಇದು ಜಿಲ್ಲೆಯ ಬಯಲು ಸೀಮೆ ಪ್ರದೇಶಗಳ ಪರಿಸ್ಥಿತಿಯಾಗಿದೆ. ತಾಲೂಕಿನ ಲಕ್ಯಾ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಜಿಲ್ಲಾಡಳಿತವು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುತ್ತಿದೆಯಾದರೂ ಎಲ್ಲ ಮನೆಗಳಲ್ಲಿಯೂ ಜಾನುವಾರುಗಳು ಇರುವುದರಿಂದಾಗಿ ನೀರು ಸಾಲದೆ ಜನ, ಜಾನುವಾರುಗಳು ಪರಿತಪಿಸುವಂತಾಗಿದೆ.

Advertisement

ಲಕ್ಯಾ ಹೋಬಳಿಯ ಹಿರೇಗೌಜ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿಯೂ ನೀರಿನ ಸಮಸ್ಯೆ ತೀವ್ರವಾಗಿದೆ. ಗ್ರಾಮ ಪಂಚಾಯತ್‌ ನ ಬೋರ್‌ವೆಲ್‌ಗ‌ಳಲ್ಲಿ ನೀರು ಇಲ್ಲದಂತಾಗಿದೆ. ಹೊಸದಾಗಿ ಬೋರ್‌ವೆಲ್‌ಗ‌ಳನ್ನು ಕೊರೆದರೂ ಅದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. 1200-1300 ಅಡಿಗಳಷ್ಟು ಕೊರೆದರೂ ನೀರು ಸಿಗುತ್ತಿಲ್ಲ. ಒಂದು ವೇಳೆ ನೀರು ದೊರೆತರೂ ಅದು ಬಹಳ ಕಡಿಮೆ ಸಿಗುತ್ತಿದೆ. ಕೇವಲ 1-2 ತಿಂಗಳುಗಳಲ್ಲಿ ನೀರು ಖಾಲಿಯಾಗುತ್ತಿದೆ.

ಖಾಸಗಿ ಬೋರ್‌ವೆಲ್‌ಗ‌ಳಲ್ಲಿಯೂ ನೀರು ಕಡಿಮೆಯಾಗಿದೆ. ಮೋಟರ್‌ ಅಳವಡಿಸಿ ನೀರೆತ್ತಲು ಪ್ರಯತ್ನಿಸಿದರೂ ಅದು ಏರುತ್ತಿಲ್ಲ. ಈ ರೀತಿ ಪ್ರಯತ್ನ ಪಟ್ಟು ಕೆಲವು ಮೋಟರ್‌ಗಳೂ ಸುಟ್ಟು ಹೋಗಿವೆ. ಜನ, ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಗ್ರಾಮ ಪಂಚಾಯತ್‌ನಿಂದ ಟ್ಯಾಂಕರ್‌ ಮೂಲಕ ವ್ಯವಸ್ಥೆ ಮಾಡಿದೆ. ಪ್ರತಿನಿತ್ಯ ಮನೆಯೊಂದಕ್ಕೆ 1 ಡ್ರಮ್‌ ನೀರನ್ನು ಪಂಚಾಯತ್‌ ನಿಂದ ಒದಗಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲ ಮನೆಗಳಲ್ಲಿಯೂ ಸಿಂದಿ ಹಸುಗಳನ್ನು ಸಾಕುತ್ತಿದ್ದಾರೆ. ಈ ಹಸುಗಳು ದಿನವೊಂದಕ್ಕೆ ಅರ್ಧ ಡ್ರಮ್‌ನಷ್ಟು ನೀರು ಕುಡಿಯುತ್ತವೆ. ಪಂಚಾಯತ್‌ ನಿಂದ ದಿನವೊಂದಕ್ಕೆ 1 ಡ್ರಮ್‌ ಮಾತ್ರ ನೀರು ಕೊಡುತ್ತಿದ್ದಾರೆ. ಹೀಗಾಗಿ ಹಸುಗಳಿಗೂ ನೀರು ಸಾಲುತ್ತಿಲ್ಲ. ಜನರಿಗೂ ಕುಡಿಯುವ ನೀರಿಗೆ ತೊಂದರೆಯುಂಟಾಗಿದೆ.

ಲಕ್ಯಾ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪಂಚಾಯತ್‌ ನ ಎಲ್ಲ ಗ್ರಾಮಗಳಲ್ಲಿಯೂ ನೀರಿನ ಸಮಸ್ಯೆ ತೀವ್ರವಾಗಿದೆ. ಈ ವ್ಯಾಪ್ತಿಯ ಗ್ರಾಮಗಳು ಸತತವಾಗಿ ಬರಗಾಲಕ್ಕೆ ಈಡಾಗುತ್ತಿರುವ ಪ್ರದೇಶಗಳಾಗಿವೆ. ಬೆಳೆಯನ್ನು ನೆಚ್ಚಿಕೊಳ್ಳುವಂತಿಲ್ಲ. ಹಾಗಾಗಿ ಹೈನುಗಾರಿಕೆಯಿಂದಲಾದರೂ ದುಡಿಯೋಣ ಎಂಬ ಕಾರಣದಿಂದ ಎಲ್ಲ ಮನೆಗಳಲ್ಲಿಯೂ ಸಿಂದಿ ಹಸುಗಳನ್ನು ಸಾಕುತ್ತಿದ್ದೇವೆ. ಆದರೆ ಈಗ ಅವುಗಳಿಗೂ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಎಲ್ಲ ಗ್ರಾಮಗಳಲ್ಲಿಯೂ ಜಾನುವಾರು ತೊಟ್ಟಿಗಳನ್ನು ನಿರ್ಮಿಸಿ ಅದಕ್ಕೆ ನೀರು ಹಾಕಿ ಜಾನುವಾರುಗಳಿಗೆ ನೀರು ಒದಗಿಸುವ ಯತ್ನ ಮಾಡಲಾಗುತ್ತಿದೆ. ಆದರೂ ಜಾನುವಾರು ತೊಟ್ಟಿಗಳಿಗೂ ಸಮರ್ಪಕ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಸದ್ಯಕ್ಕೆ ಮೇವಿನ ತೊಂದರೆ ಇಲ್ಲ : ಕೆಲವು ತಿಂಗಳ ಹಿಂದೆ ಕೆಲಕಾಲ ಉತ್ತಮ ಮಳೆಯಾದ ಕಾರಣ ಜಾನುವಾರುಗಳಿಗೆ ಸದ್ಯಕ್ಕೆ ಮೇವಿನ ತೊಂದರೆ ಇಲ್ಲವಾಗಿದೆ. ಇನ್ನೂ 1-2 ತಿಂಗಳುಗಳಿಗೆ ಆಗುವಷ್ಟು ಮೇವು ಲಭ್ಯವಿದೆ. ಅಷ್ಟರೊಳಗೆ ಮಳೆಯಾದಲ್ಲಿ ಮೇವಿನ ಸಮಸ್ಯೆ ನಿವಾರಣೆಯಾಗುತ್ತದೆ. ಮಳೆ ಆಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಾನುವಾರುಗಳ ಮೇವಿಗೂ ತೊಂದರೆಯಾಗುತ್ತದೆ ಎಂಬುದು ಗ್ರಾಮಸ್ಥರ ಅನಿಸಿಕೆಯಾಗಿದೆ.

Advertisement

ಶಾಶ್ವತ ಯೋಜನೆ ಅಗತ್ಯ : ಪ್ರತಿವರ್ಷ ಹೊಸಾಗಿ ಹಲವು ಬೋರ್‌ವೆಲ್‌ಗ‌ಳನ್ನು ಲಕ್ಷಾಂತರ ರೂ. ಖರ್ಚು ಮಾಡಿ ಕೊರೆಸಲಾಗುತ್ತದೆ. ಆದರೂ ನೀರು ಸಿಗುತ್ತಿಲ್ಲ. ಒಂದು ವೇಳೆ ನೀರು ಸಿಕ್ಕಿದರೂ ಅದು ಕೆಲವು ತಿಂಗಳು ಮಾತ್ರ ಬರುತ್ತದೆ. ಕಳೆದ 3-4 ವರ್ಷಗಳಲ್ಲಿ ಬೋರ್‌ವೆಲ್‌ಗ‌ಳಿಗಾಗಿಯೇ ಕೋಟ್ಯಂತರ ರೂ. ಗಳನ್ನು ಸರ್ಕಾರ ಖರ್ಚು ಮಾಡಿದೆ. ಇಷ್ಟು ಖರ್ಚು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಬೋರ್‌ವೆಲ್‌ಗ‌ಳನ್ನು ಕೊರೆಸಲು ಖರ್ಚು ಮಾಡಿರುವ ಹಣದಿಂದಲೇ ಈ ಭಾಗದ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಿದ್ದರೆ ಈ ವೇಳೆಗಾಗಲೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬಹುದಾಗಿತ್ತು. ಆದರೆ ರಾಜಕಾರಣಿಗಳು, ಅಧಿಕಾರಿಗಳು ಇದರತ್ತ ಗಮನಹರಿಸಿಲ್ಲ ಎಂಬುದು ಗ್ರಾಮಸ್ಥರ ದೂರು. ಯಗಚಿ ಜಲಾಶಯದಿಂದ ಜಿಲ್ಲಾ ಪಂಚಾಯತ್‌ ಸಮೀಪದ ಪವಿತ್ರವನದವರೆಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಅಲ್ಲಿಂದ ಕೇವಲ 5-6 ಕಿ.ಮೀ. ದೂರಕ್ಕೆ ಪೈಪ್‌ಲೈನ್‌ ಅಳವಡಿಸಿದರೆ ಈ ಗ್ರಾಮಗಳಿಗೂ ಕುಡಿಯುವ ನೀರು ಒದಗಿಸಬಹುದು. ಯಗಚಿ ಜಲಾಶಯದಿಂದಲೇ ಆಗಲಿ, ಭದ್ರಾದಿಂದಲೆ ಆಗಲಿ ಈ ಭಾಗದ ಕೆರೆಗಳಿಗೆ ನೀರು ಹರಿಸುವ ಯೋಜನೆ ರೂಪಿಸಿ ಅದನ್ನು ಶೀಘ್ರವಾಗಿ ಪೂರ್ಣಗೊಳಿಸಿದರೆ ಈ ಭಾಗದ ಜನ, ಜಾನುವಾರುಗಳು ಬದುಕಲು ಸಾಧ್ಯವಾಗುತ್ತದೆ. ಇಲ್ಲವಾದರೆ ಜಾನುವಾರುಗಳನ್ನು ಸಾಕಲು ಸಾಧ್ಯವಾಗುವುದಿಲ್ಲ ಎಂಬುದು ಗ್ರಾಮಸ್ಥರ ಅನಿಸಿಕೆಯಾಗಿದೆ.

ಎಸ್‌.ಕೆ.ಲಕ್ಷ್ಮೀಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next