Advertisement

ಗ್ರಾಮೀಣ ಮಕ್ಕಳಿಗೆ ವರದಾನ ಮಹಿಳಾ ಹಾಸ್ಟೆಲ್‌

02:58 PM Jun 17, 2022 | Team Udayavani |

ಗಜೇಂದ್ರಗಡ: ನೂರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಭದ್ರ ಬುನಾದಿಯಾಗಿರುವ ಪಟ್ಟಣದ ವಸತಿ ನಿಲಯ, ಇದೀಗ ಮೇಲ್ವಿಚಾರಕರ ಮತ್ತು ವಿದ್ಯಾರ್ಥಿಗಳ ಪರಿಶ್ರಮದಿಂದ ತಾಲೂಕಿನಲ್ಲಿಯೇ ಆಕರ್ಷಣೀಯ ಹಾಗೂ ಮಾದರಿ ಮಹಿಳಾ ಹಾಸ್ಟೆಲ್‌ ಆಗಿ ಹೊರಹೊಮ್ಮಿದೆ.

Advertisement

ಹೌದು, ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರ್ಮಿಸಿರುವ ದೇವರಾಜ ಅರಸು ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಸ್ವಚ್ಛಂದ ವಾತಾವರಣ, ಆಕರ್ಷಕ ಉದ್ಯಾನವನ, ಉತ್ತಮ ಪರಿಸರ, ಸುವ್ಯವಸ್ಥಿತ ಗ್ರಂಥಾಲಯ, ಸುಸಜ್ಜಿತ ಅಡುಗೆ ಕೋಣೆ, ಸಮರ್ಪಕ ಕೊಠಡಿಗಳಿಂದ ಮಾದರಿ ಹಾಸ್ಟೆಲ್‌ ಎಂದು ಬಿರುದು ಪಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರತಿಯೊಂದು ಶಾಲೆಯ ಗೋಡೆಗಳ ಮೇಲೆ “ಜ್ಞಾನ ದೇಗುಲವಿದು, ಕೈಮುಗಿದು ಒಳಗೆ ಬಾ’ ಎಂಬ ಘೋಷವಾಕ್ಯಗಳನ್ನು ಕಾಣಬಹುದು.

ಆದರೆ, ಮಾದರಿ ವಸತಿ ನಿಲಯದಲ್ಲಿ ಕಾಲಿಟ್ಟ ತಕ್ಷಣ ಅಲ್ಲಿನ ವಾತಾವರಣ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ವಸತಿ ನಿಲಯದ ಆವರಣದಲ್ಲಿ ವಿವಿಧ ಮಾದರಿಯ ಗಿಡಗಳನ್ನು ನೆಡಲಾಗಿದ್ದು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.

ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೋಣೆಗಳು, ವಿವಿಧ ಸರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು, ದಿನಪತ್ರಿಕೆಗಳು ಓದುವವರಿಗೆ ಉಪಯುಕ್ತವಾಗಿವೆ. ಒಳಾಂಗಣ, ಹೊರಾಂಗಣ ಕ್ರೀಡಾ ಸಾಮಗ್ರಿಗಳನ್ನು ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ನಿರ್ಮಾಣ ಮಾಡಲಾಗಿದೆ.

Advertisement

ವಸತಿ ನಿಲಯದಲ್ಲಿರುವ ಪ್ರತಿಯೊಂದು ಕೊಠಡಿಯಲ್ಲಿ 10 ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸಲಾಗಿದೆ. ಬೆಡ್‌, ಶುದ್ಧ ಕುಡಿಯುವ ನೀರಿನ ಘಟಕ, 10 ಶೌಚಾಲಯ, 10 ಸ್ನಾನದ ಕೋಣೆಗಳು ಇವೆ.

ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಲು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸುಸಜ್ಜಿತ ಊಟದ ಕೋಣೆ, ಕೈತೋಟ, ನಿಲಯದ ಸುತ್ತ ಆಸನಗಳ ವ್ಯವಸ್ಥೆ ಸಹ ಕಲ್ಪಿಸಲಾಗಿದೆ.

ವಿದ್ಯಾರ್ಥಿಗಳಲ್ಲಿ ಸದೃಢ ಮನಸ್ಸು, ಸದೃಢ ದೇಹ ನಿರ್ಮಾಣಕ್ಕಾಗಿ ಬೆಳಗಿನ ಜಾವ 5 ಗಂಟೆಗೆ ಯೋಗಾಸನ, ಶಾಲಾ ಪಠ್ಯದ ವಿಷಯಗಳ ವಿದ್ಯಾರ್ಜನೆ ಮಾಡಿಸುವುದರ ಮೂಲಕ ಮಕ್ಕಳಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಾಣಕ್ಕೆ ವಸತಿ ನಿಲಯದಲ್ಲಿ ಆದ್ಯತೆ ಕಲ್ಪಿಸಲಾಗಿದ್ದಾರೆ.

ಅಧಿಕಾರಿಗಳ ಭೇಟಿ

ಸ್ಥಳೀಯ ಮಾದರಿ ವಸತಿ ನಿಲಯಕ್ಕೆ ನಿವೃತ್ತ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸುರೇಶ ಹುಗ್ಗಿ, ಎಚ್‌.ಎಚ್‌. ಪೀರಜಾದಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಎಸ್‌.ಎಲ್‌. ಉಪ್ಪಾರ ಭೇಟಿ ನೀಡಿ, ವಸತಿ ನಿಲಯದಲ್ಲಿ ಬದಲಾವಣೆ ಕಂಡು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಎಂ.ಎಸ್‌. ಗೋಡಿ, ಶುಪುತ್ರ ಕುಮಸಗಿ ಇತರರಿದ್ದರು.

ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನ

ಶೈಕ್ಷಣಿಕ ಕ್ಷೇತ್ರದಲ್ಲಿ ಏನನ್ನಾದರೂ ಸಾಧನೆಗೈಯಬೇಕು ಎನ್ನುವ ಸದುದ್ದೇಶ ಹೊಂದಿದ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಗಜೇಂದ್ರಗಡ ಮಹಿಳಾ ವಸತಿ ನಿಲಯ ವರದಾನವಾಗಿದೆ. ಅತ್ಯಾಕರ್ಷಕ ಸೌಲಭ್ಯಗಳನ್ನು ಕಲ್ಪಿಸುವುದಲ್ಲದೇ, ವಿದ್ಯಾರ್ಜನೆಗಾಗಿ ಉತ್ತಮ ವಾತಾವರಣ ಕಲ್ಪಿಸಲಾಗಿದೆ. ಈ ವಸತಿ ನಿಲಯದಲ್ಲಿದ್ದು ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ ಉದಾಹರಣೆಗಳು ಸಾಕಷ್ಟಿವೆ.

ಗಜೇಂದ್ರಗಡದ ಬಾಲಕಿಯರ ವಸತಿ ನಿಲಯದಲ್ಲಿನ ಸೌಲಭ್ಯಗಳು ವಿದ್ಯಾರ್ಥಿನಿಯರ ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಉದ್ಯಾನವನ, ಗ್ರಂಥಾಲಯ, ಸುತ್ತಲಿನ ಪರಿಸರ ಮಕ್ಕಳ ಕಲಿತಾಸಕ್ತಿ ಹೆಚ್ಚಲು ಪೂರಕವಾಗಿದೆ. ವಸತಿ ನಿಲಯದ ಸುಂದರ ನಿರ್ವಹಣೆಗೆ ಮೇಲ್ವಿಚಾರಕರ ಜೊತೆಗೆ ಮಕ್ಕಳೂ ಕೈ ಜೋಡಿಸಿ. -ಸುರೇಶ ಹುಗ್ಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿವೃತ್ತ ಜಿಲ್ಲಾ ಅಧಿಕಾರಿ

ವಿದ್ಯಾರ್ಥಿನಿಯರ ಸಹಕಾರ ಹಾಗೂ ಸಿಬ್ಬಂದಿ ಸಹಭಾಗಿತ್ವದಿಂದಲೇ ಮಾದರಿ ವಸತಿ ನಿಲಯ ಮಾಡಲು ಸಾಧ್ಯವಾಯಿತು. ಇಲ್ಲಿನ ಹಲವಾರು ಸಸ್ಯ ಪ್ರಭೇದಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೇರಣೆ ನೀಡುವಂತಿವೆ. ಇದರ ನಿರ್ವಹಣೆ ನಮ್ಮೆಲ್ಲರದ್ದು. –ಡಿ.ಎಚ್‌. ವಸ್ತಾದ, ವಸತಿ ನಿಲಯದ ಮೇಲ್ವಿಚಾರಕ

Advertisement

Udayavani is now on Telegram. Click here to join our channel and stay updated with the latest news.

Next