ಲಂಡನ್: ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ “ಎಟಿಪಿ ಫೈನಲ್ಸ್’ನಲ್ಲಿ ವಿಶ್ವದ ನಂ. ವನ್ ಟೆನಿಸಿಗ ನೊವಾಕ್ ಜೊಕೋವಿಕ್‌ಗೆ ಆಘಾತವಿಕ್ಕಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ರವಿವಾರ ತಡರಾತ್ರಿ ನಡೆದ ಅಂತಿಮ ಹಣಾಹಣಿಯಲ್ಲಿ ಜ್ವೆರೇವ್ 6-4, 6-3 ನೇರ ಸೆಟ್‌ಗಳಿಂದ ಜೊಕೋವಿಕ್ ಅವರನ್ನು ಸೋಲಿಸಿದರು. ಋತುವಿನ ಅಂತಿಮ ಕೂಟದಲ್ಲಿ 2ನೇ ಬಾರಿ ಪಾಲ್ಗೊಳ್ಳುತ್ತಿರುವ ಜ್ವೆರೇವ್ ಸೆಮಿಫೈನಲ್‌ನಲ್ಲಿ 6 ಬಾರಿಯ ಚಾಂಪಿಯನ್ ರೋಜರ್ ಫೆಡರರ್ ಅವರನ್ನು ಸೋಲಿಸಿ ಅಪಾಯಕಾರಿಯಾಗಿ ಗೋಚರಿಸಿದ್ದರು.
ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ಜೊಕೋವಿಕ್ ಫೈನಲ್‌ನಲ್ಲಿ ಮಂಕಾದಂತೆ ಕಂಡುಬಂದರು. ರೌಂಡ್ ರಾಬಿನ್ ಲೀಗ್ ಹಂತದಲ್ಲಿ ಜ್ವೆರೇವ್ ವಿರುದ್ಧ ಜಯಿಸಿದ್ದ ಜೊಕೋವಿಕ್ ಪ್ರಶಸ್ತಿ ಸಮರದಲ್ಲಿ ಮುಗ್ಗರಿಸಿದರು. ಇದರಿಂದ ರೋಜರ್ ಫೆಡರರ್ ಅವರ ದಾಖಲೆಯನ್ನು ಸರಿದೂಗಿಸುವ ಪ್ರಯತ್ನದಲ್ಲಿದ್ದ ಜೊಕೋವಿಕ್ ಭಾರೀ ಹೊಡೆತ ಅನುಭವಿಸಿದರು. ಫೆಡರರ್ ಅತೀ ಹೆಚ್ಚು 6 ಸಲ ಎಟಿಪಿ ಫೈನಲ್ಸ್ ಚಾಂಪಿಯನ್ ಆಗಿದ್ದಾರೆ. ಜೊಕೋವಿಕ್ ಪ್ರಶಸ್ತಿ ಅಭಿಯಾನವೀಗ 5ಕ್ಕೆ ನಿಂತಿದೆ.
ಕಿರಿಯ ಟೆನಿಸ್ ಸಾಧಕ
ಜ್ವೆರೇವ್ “ಎಟಿಪಿ ಫೈನಲ್’ ಪ್ರಶಸ್ತಿ ಗೆದ್ದ ಕಿರಿಯ ಆಟಗಾರ. 10 ವರ್ಷಗಳ ಹಿಂದೆ ಜೊಕೋವಿಕ್ ಈ ಸಾಧನೆ ಮಾಡಿದ್ದರು. ಬೋರಿಸ್ ಬೆಕರ್ (1995) ಬಳಿಕ ಎಟಿಪಿ ಫೈನಲ್ಸ್ ಪ್ರಶಸ್ತಿ ಗೆದ್ದ ಜರ್ಮನಿಯ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಜ್ವೆರೇವ್ ಅವರದ್ದಾಗಿದೆ.
ಜ್ವೆರೇವ್ ಸತತ ಪಂದ್ಯಗಳಲ್ಲಿ ಟೆನಿಸ್ ದಿಗ್ಗಜರಾದ ಫೆಡರರ್, ಜೊಕೋವಿಕ್ ಅವರನ್ನು ಸೋಲಿಸಿದ ವಿಶ್ವದ 4ನೇ ಆಟಗಾರನಾಗಿ ಮೂಡಿಬಂದರು. ಇದಕ್ಕೂ ಮುನ್ನ ರಫೆಲ್ ನಡಾಲ್ 3 ಬಾರಿ, ಆ್ಯಂಡ್ರಿ ಮರ್ರೆ ಹಾಗೂ ಡೇವಿಡ್ ನಲಾದಿಯನ್ ಒಮ್ಮೆ ಈ ಇಬ್ಬರು ಆಟಗಾರರನ್ನು ಸತತ ಪಂದ್ಯಗಳಲ್ಲಿ ಹಿಮ್ಮೆಟ್ಟಿಸಿದ್ದರು.
“ಈ ಗೆಲುವನ್ನು ವರ್ಣಿಸಲು ಸಾಧ್ಯವಿಲ್ಲ. ಇದು ನಾನು ಗೆದ್ದ ಬಹುದೊಡ್ಡ ಪ್ರಶಸ್ತಿ. ಸತತವಾಗಿ ಫೆಡರರ್, ಜೊಕೋವಿಕ್ ಅವರಂತಹ ಸ್ಟಾರ್ ಆಟಗಾರರನ್ನು ಸೋಲಿಸಿರುವುದೊಂದು ಮಧುರ ಕ್ಷಣ’
ಅಲೆಕ್ಸಾಂಡರ್ ಜ್ವೆರೇವ್