ಧಾರವಾಡ: ಚೆಕ್‌ಡ್ಯಾಂ, ಗ್ರಾಮೀಣ ಭಾಗಕ್ಕೆ ತುರ್ತು ಕುಡಿಯುವ ನೀರಿನ ಯೋಜನೆಗೆ ಜಿಪಂ ಸಿಇಒ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿ ಜಿಪಂ ಅಧ್ಯಕ್ಷರು ಸೇರಿದಂತೆ ಎಲ್ಲ ಪಕ್ಷಗಳ ಸದಸ್ಯರು ಸಾಮಾನ್ಯ ಸಭೆಯನ್ನೇ ಬಹಿಷ್ಕರಿಸಿ ಹೊರ ನಡೆದ ಘಟನೆ ಗುರುವಾರ ಜಿಪಂನಲ್ಲಿ ನಡೆದಿದೆ.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಸೇರಿದಂತೆ ಸದಸ್ಯರ ಹಾಗೂ ಜಿಪಂ ಸಿಇಒ ಅವರ ಮಧ್ಯೆ ಬೇರೆ ಬೇರೆ ವಿಷಯಗಳ ಚರ್ಚೆ ವೇಳೆಯಲ್ಲಿ ಜಟಾಪಟಿ ನಡೆಯುತ್ತಲೇ ಕೊನೆಗೆ ಮಧ್ಯಾಹ್ನದ ನಂತರ ಸಿಇಒ ಅವರ ವಿರುದ್ಧ ಸದಸ್ಯರೆಲ್ಲರೂ ಸಿಟ್ಟಿಗೆದ್ದು ಸಭೆ ಬಹಿಷ್ಕರಿಸಿ ಹೊರ ನಡೆದರು.
ಗ್ರಾಮೀಣ ಪ್ರದೇಶದ ರೈತರಿಗೆ ಅನುಕೂಲ ಮಾಡಿ ಕೊಡುವ ನಿಟ್ಟಿನಲ್ಲಿ ನರೇಗಾ ಯೋಜನೆಯಡಿ ಚೆಕ್‌ಡ್ಯಾಂ ನಿರ್ಮಾಣಕ್ಕೆ ಅನುಮೋದನೆ ಕೊಡುವ ವಿಷಯಕ್ಕೆ ಸಂಬಂಧಿಸಿದಂತೆ ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಮಾತನಾಡಿ, ಸಿಇಒ ಅವರ ಮಾರ್ಗದರ್ಶನದಂತೆಯೇ ಪ್ರತಿ ಜಿಪಂ ಕ್ಷೇತ್ರಕ್ಕೆ ನಾಲ್ಕು ಚೆಕ್‌ಡ್ಯಾಂ ನಿರ್ಮಾಣಕ್ಕಾಗಿ ಆಯಾ ಗ್ರಾಪಂಗಳಿಂದ ಠರಾವು ಮಾಡಿ ವರದಿ ಸಲ್ಲಿಸಲಾಗಿದೆ.
ಅದಕ್ಕಾಗಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿತ್ತು. ಆಗ ಸಿಇಒ ಅವರೇ ಚೆಕ್‌ಡ್ಯಾಂಗೆ ಅವಕಾಶ ನೀಡುತ್ತೇವೆಂದು ಹೇಳಿದ್ದರು. ಈಗ ಚೆಕ್‌ಡ್ಯಾಂ ಕೊಡಲು ಬರೋದಿಲ್ಲ ಅಂದರೆ ಹೇಗೆ? ಈಗ ಮತ್ತೆ ಗ್ರಾಪಂ ವಾರ್ಷಿಕ ಕ್ರಿಯಾ ಯೋಜನೆಯಲ್ಲೇ ನಮೂದಿಸಿಕೊಂಡು ಬನ್ನಿ ಎಂದು ಹೇಳುವುದು ಎಷ್ಟು ಸರಿ? ಎಂದು ಖಾರವಾಗಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಜಿಪಂ ಸಿಇಒ ಸ್ನೇಹಲ್ ರಾಯಮಾನೆ, ನರೇಗಾ ಯೋಜನೆಯಡಿ ಚೆಕ್‌ಡ್ಯಾಂ ನಿರ್ಮಿಸಲು 60:40 ಅನುಪಾತ ಬೇಕು. ಆದರೆ ಈಗ ಸಲ್ಲಿಸಿರುವ ಪ್ರಸ್ತಾವನೆಗಳಲ್ಲಿ ಆ ಅನುಪಾತವೇ ಸರಿ ಹೊಂದುತ್ತಿಲ್ಲ. ಈಗಂತೂ ಸದ್ಯ 273 ಚೆಕ್ ಡ್ಯಾಂಗಳ ಪಟ್ಟಿ ನಮ್ಮ ಬಳಿಯೇ ಇದ್ದು,
ಗ್ರಾಪಂಗೆ ಒಂದರಂತೆ ಆಯಾ ಗ್ರಾಪಂಗಳ ವಾರ್ಷಿಕ ಕ್ರಿಯಾ ಯೋಜನೆಗಳಲ್ಲಿ ಅಳವಡಿಸಿಕೊಂಡರೆ ಮಾತ್ರ ಚೆಕ್ ಡ್ಯಾಂ ನಿರ್ಮಾಣಕ್ಕೆ ಅನುಮೋದನೆ ನೀಡುವುದಾಗಿ ಹೇಳಿದರು. ಜಿಪಂ ಸಿಇಒ ಉತ್ತರಕ್ಕೆ ತೃಪ್ತರಾಗದ ಅಧ್ಯಕ್ಷರು ಹಾಗೂ ಸದಸ್ಯರು, ಎನ್ ಆರ್‌ಇಜಿ ಯೋಜನೆಯಡಿ ಚೆಕ್ ಡ್ಯಾಂ ನಿರ್ಮಾಣ ಅಸಾಧ್ಯವೆಂದಾದರೆ ಈ ಹಿಂದೆ ಯಾಕೆ ಭರವಸೆ ನೀಡಿದ್ದೀರಿ?
ನಿಮ್ಮ ಸೂಚನೆ ಮೇರೆಗೆಯೇ ಭೂ ವಿಜ್ಞಾನಿಗಳು ಹಾಗೂ ಇಒಗಳು ಸರ್ವೇ ಕಾರ್ಯ ನಡೆಸಿಯಾಗಿದೆ. ಅಷ್ಟೇ ಏಕೆ ಗ್ರಾಪಂಗಳಲ್ಲಿ ಠರಾವು ಪಾಸ್ ಆಗಿದೆ. ಈಗ ಇದ್ದಕ್ಕಿದ್ದಂತೆಹೀಗೆ ಮಾಡಿದರೆ ಹೇಗೆ ? ನಿಮಗೆ ಚೆಕ್ ಡ್ಯಾಂ ಕೊಡಲು ಆಗುವುದೋ, ಇಲ್ಲವೋ ತಿಳಿಸಿ. ಮುಂದೇನು ಮಾಡಬೇಕು ನಮಗೆ ಗೊತ್ತಿದೆ ಎಂದು ಸಿಇಒ ಸ್ನೇಹಲ್‌ರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.