ಹರಪನಹಳ್ಳಿ: ಬರಗಾಲದಿಂದ ಕೆಲಸವಿಲ್ಲದೇ ಬಸವಳಿದ ಜನತೆ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಉದ್ಯೋಗ ಖಾತ್ರಿ ಕೆಲಸಕ್ಕೆ ಆಗಮಿಸಿದ್ದ ಕೂಲಿ ಕಾರ್ಮಿಕರು ತಂದಿದ್ದ ಊಟವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಅಶ್ವತಿ ಅವರು ಸವಿದು ಸರಳತೆ ಮರೆದರು.
ತಾಲೂಕಿನ ಚಿಗಟೇರಿ ಗ್ರಾಮದ ಶಿವನಯ್ಯನ ಕೆರೆ ಹೂಳೆತ್ತುವ ಕಾಮಗಾರಿ ಕೆಲಸ ವೀಕ್ಷಣೆಗೆ ಮಾಡಲು ಶುಕ್ರವಾರ ಸ್ಥಳಕ್ಕೆ ಬೆಳಗ್ಗೆ 10 ಗಂಟೆಗೆ ಸಮಯಕ್ಕೆ ಸಿಇಒ ಎಸ್.ಅಶ್ವತಿ ಅವರು ಆಗಮಿಸಿದ್ದರು. ಸಂದರ್ಭದಲ್ಲಿ ಕೆಲಸಕ್ಕೆ ಆಗಮಿಸಿದ್ದ ನೂರಾರು ಮಹಿಳೆಯರು ಊಟಕ್ಕೆ ಕೂತಿದ್ದರು. “ಏಕೆ ಈಗ ಊಟಕ್ಕೆ ಮಾಡುತ್ತಿದ್ದಾರಾ’ ಎಂದು ಸಿಇಒ ಮಹಿಳೆಯರನ್ನು ಪ್ರಶ್ನಿಸಿದರು.
“ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕೆ ಬರುತ್ತೀವಿ, ಅಷ್ಟು ಬೇಗ ಊಟ ಮಾಡಲು ಮನಸ್ಸಾಗಲ್ಲ, ಅದ್ಕೆ ಈಗ ಮಾಡುತ್ತೀವಿ’ ಎಂದು ಕೂಲಿ ಮಹಿಳೆಯರು ಉತ್ತರಿಸಿದರು. “ನಮ್ಮನ್ನು ಊಟಕ್ಕೆ ಕರೆಯಲ್ವಾ’ ಎಂದು ಅಶ್ವತಿ ಅವರು ಮಹಿಳೆಯರನ್ನು ಮರು ಪ್ರಶ್ನಿಸಿದಾಗ “ಬನ್ನಿ ಅಕ್ಕ ಊಟ ಮಾಡಿ’ ಎಂದು ಕರೆದರು.
ನೆಲದ ಮೇಲೆಯೇ ಕೂತು ಮಹಿಳೆಯರು ತಂದಿದ್ದ ಜೋಳದ ರೊಟ್ಟಿ, ಪಲ್ಯ ಹಾಗೂ ಅನ್ನ ಮೆಣಸಿನಕಾಯಿ ಚಟ್ನಿ ಸವಿದು, ಊಟ ತುಂಬಾ ಚೆನ್ನಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ನಂತರ ಕೆರೆ ಪಕ್ಕದಲ್ಲಿರುವ ಚೌಡಮ್ಮ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದರು.
ನಂತರ ನಡೆದ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಸಿಇಒ ಎಸ್.ಅಶ್ವತಿ ಅವರು, ಕಾರ್ಮಿಕರಿಗೆ ತಕ್ಷಣವೇ ಕೂಲಿ ಹಣವನ್ನು ಅವರ ಖಾತೆಗೆ ಜಮ ಮಾಡಬೇಕು. ಕೆಲಸ ನಡೆಯುವ ಸ್ಥಳದಲ್ಲಿ ನೆರಳು, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸುಮಾರು 150ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದರು. ಕೆಲಸ ಅರಸಿ ಗುಳೇ ಹೋಗಬೇಡಿ, ಮಳೆ ಬರುವವರೆಗೂ ನಿಮಗೆ ಕೆಲಸ ನೀಡುತ್ತೇವೆ ಎಂದು ಕಾರ್ಮಿಕರಿಗೆ ಭರವಸೆ ನೀಡಿದರು. ಜಿಪಂ ಸದಸ್ಯ ಉತ್ತಂಗಿ ಮಂಜುನಾಥ್, ಜಿಪಂ ಉಪ ಕಾರ್ಯದರ್ಶಿ ಜಿ.ಎಸ್. ಷಡಾಕ್ಷರಪ್ಪ, ಇಒ ಆರ್.ತಿಪ್ಪೇಸ್ವಾಮಿ, ಉದ್ಯೋಗ ಖಾತ್ರಿ ನೋಡಲ್ ಅಧಿಕಾರಿ ಚಂದ್ರನಾಯ್ಕ, ಚಂದನ್, ಗ್ರಾಪಂ ಅಧ್ಯಕ್ಷ ರವಿಗೌಡ, ಪಿಡಿಒ ಭೋಜಪ್ಪ ಇದ್ದರು.