ಉಪ್ಪಿನಂಗಡಿ: ಝೈಬುನ್ನೀಸಾ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಶಿಕ್ಷಕ ರವಿಯನ್ನು ಅಲ್ಪಸಂಖ್ಯಾಕ ಇಲಾಖೆ ಸೇವೆಯಿಂದ ವಜಾಗೊಳಿಸಿದ್ದು, ವಸತಿ ನಿಲಯದ ಶಿಕ್ಷಕರು ಮತ್ತು ಅಲ್ಲಿನ ಸಿಬಂದಿಯನ್ನು ವಿಚಾರಣೆ ನಡೆಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದರು.
ಅವರು ಫೆ. 3ರಂದು ಉಪ್ಪಿನಂಗಡಿ ನಿನ್ನಿಕಲ್ ನಿವಾಸಿ, ಮಂಡ್ಯ ಜಿಲ್ಲೆ ಕೆ.ಆರ್. ಪೇಟೆಯಲ್ಲಿರುವ ಅಲ್ಪ ಸಂಖ್ಯಾಕ ಮಾದರಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದ ಝೈಬುನ್ನೀಸಾ ನಿಗೂಢ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಘಟನೆ ಬಗ್ಗೆ ಕೂಲಂಕಷ ತನಿಖೆಗೆ ಸರಕಾರ ಸೂಚಿಸಿದೆ. ಈಗಾಗಲೇ 7.50 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಅದನ್ನು ಹೆಚ್ಚಿಸಲು ಶ್ರಮಿಸುವುದಾಗಿ ಅವರು ತಿಳಿಸಿದರು.
ಉಚಿತ ಶಿಕ್ಷಣ
ಝೈಬುನ್ನೀಸಾ ಸಹೋದರ ಮತ್ತು ಸಹೋದರಿಗೆ ಪಿಯುಸಿ ವರೆಗೆ ಉಚಿತ ಶಿಕ್ಷಣ ನೀಡಲು ಉಪ್ಪಿನಂಗಡಿಯ ಅರಫಾ ವಿದ್ಯಾ ಸಂಸ್ಥೆ ಒಪ್ಪಿಕೊಂಡಿದ್ದು, ಫೆ. 1ರಂದು ಅವರು ವಿದ್ಯಾ ಸಂಸ್ಥೆಗೆ ಸೇರಿದ್ದಾರೆ. ಆ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುವುದಾಗಿ ಸಚಿವರು ಹೇಳಿದರು.
ಸಚಿವರೊಂದಿಗೆ ಕೆಡಿಪಿ ಸದಸ್ಯ ಅಶ್ರಫ್ ಬಸ್ತಿಕಾರ್, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಶೀಫ್, ಸಮದ್ ಸೋಂಪಾಡಿ, ವಕ್ಫ್ ಸಲಹಾ ಸಮಿತಿ ಸದಸ್ಯರಾದ ನಝೀರ್ ಮಠ, ನೂರುದ್ದೀನ್ ಸಾಲ್ಮರ, ಕಡಬ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ನಾಸಿರ್ ಕೋಲ್ಪೆ, ಅರಫಾ ವಿದ್ಯಾ ಸಂಸ್ಥೆಯ ನಿರ್ದೇಶಕ ಶಫಿಕ್ ಅರಫಾ, ಬೆದ್ರೋಡಿ ಜುಮಾ ಮಸೀದಿ ಕಾರ್ಯದರ್ಶಿ ಫಾರೂಕ್ ಬೆದ್ರೋಡಿ ಮತ್ತಿತರರು ಉಪಸ್ಥಿತರಿದ್ದರು.