ಉಡುಪಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿ.ಪಂ. ಮತ್ತು ತಾ.ಪಂ. ಕ್ಷೇತ್ರ ಪುನರ್ವಿಂಡನೆ ಕಾರ್ಯ ಭರದಿಂದ ನಡೆಯುತ್ತಿದ್ದರೆ ಹಾಲಿ ಸದಸ್ಯರು ತಮ್ಮ ರಾಜಕೀಯ ಚೈತ್ರಯಾತ್ರೆ ಮುಂದೇನು ಎಂದು ಚಿಂತನೆ ನಡೆಸುತ್ತಿದ್ದಾರೆ. ಎಪ್ರಿಲ್ ಅಂತ್ಯದವರೆಗೆ ಜಿ.ಪಂ. ಮತ್ತು ತಾ.ಪಂ. ಆಡಳಿತದ ಅವಧಿ ಇದೆ. ಅಷ್ಟರೊಳಗೆ ಚುನಾವಣೆ ನಡೆಯಬೇಕು. ಇದಕ್ಕಾಗಿ ಪೂರ್ವಭಾವಿ ಸಿದ್ಧತೆಗಳು ನಡೆಯುತ್ತಿವೆ.
ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರು ಉದ್ಯಾವರ ಜಿ.ಪಂ. ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇದು ಪರಿಶಿಷ್ಟ ಜಾತಿ ಮೀಸಲಾತಿಯ ಕ್ಷೇತ್ರವಾಗಿದೆ. ಮೀಸಲಾತಿಯು ಬದಲಾವಣೆ ಆಗಲಿರುವ ಕಾರಣ ಈ ಕ್ಷೇತ್ರಕ್ಕೆ ಬೇರೆ ಮೀಸಲಾತಿ ಬರುವ ಸಾಧ್ಯತೆ ಇದೆ. ಹೀಗಾದರೆ ದಿನಕರ ಬಾಬು ಅವರು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಲೂಬಹುದು, ಅಲ್ಲಿನ ಸ್ಥಳೀಯ ಉಮೇದುವಾರರು ಇದ್ದರೆ ದಿನಕರ ಬಾಬು ಅವರಿಗೆ ಮತ್ತೆ ಸ್ಪರ್ಧಿಸುವುದು ತಡೆಯಾಗಲೂಬಹುದು.
ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿಯವರು ನಿವೃತ್ತಿ ಬಯಸುವ ಹಾಲಿ ಆಡಳಿತ ಮಂಡಳಿಯ 26 ಸದಸ್ಯರಲ್ಲಿ ಏಕೈಕ ಸದಸ್ಯೆ. ಇವರು ಪ್ರತಿನಿಧಿಸುತ್ತಿರುವ ಕ್ಷೇತ್ರ ಬ್ರಹ್ಮಾವರ. ಅವರಿಗೆ ಈಗ 74 ವರ್ಷ ವಯಸ್ಸು. “ಇನ್ನು ನನಗೆ ಚುನಾವಣೆ ಸ್ಪರ್ಧೆ ಬೇಡ. 40 ವರ್ಷ ರಾಜಕೀಯ ಕ್ಷೇತ್ರದಲ್ಲಿದ್ದೆ. ಈಗ ಮಕ್ಕಳೂ ಬೇಡವೆನ್ನುತ್ತಿದ್ದಾರೆ. ಮುಂದೆ ಮಹಿಳಾ ಮಂಡಲದಂತಹ ಕ್ಷೇತ್ರಗಳಲ್ಲಿ ಮಾತ್ರ ಇರುತ್ತೇನೆ’ ಎಂಬ ಅಭಿಪ್ರಾಯ ಅವರದು.
ಬೈಂದೂರು ಈಗಿರುವ ಜಿ.ಪಂ. ಕ್ಷೇತ್ರಗಳಲ್ಲಿ ಒಂದು. ಆದರೆ ಈಗಾಗಲೇ ಬೈಂದೂರು ಪಟ್ಟಣ ಪಂಚಾಯತ್ ಆಗಿ ಘೋಷಣೆಯಾಗಿದೆ. ಆದ್ದರಿಂದ ಈ ವ್ಯಾಪ್ತಿಯಲ್ಲಿರುವ ಮತದಾರರು ಜಿ.ಪಂ. ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಈ ಲೆಕ್ಕಾಚಾರದಲ್ಲಿ ಬಾಬು ಶೆಟ್ಟಿ, ಸುರೇಶ ಬಟವಾಡಿ, ಶಂಕರ ಪೂಜಾರಿಯವರಿಗೆ ಜಿ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ. ಆದರೆ ಇದೊಂದು ಗಂಭೀರ ಸಮಸ್ಯೆಯಲ್ಲ. ಇವರು ಬೇರೆ ಗ್ರಾಮಾಂತರದ ಮತಗಟ್ಟೆಗಳಲ್ಲಿ ಹೆಸರು ನೋಂದಾಯಿಸಬಹುದು.
ಬಾಬು ಶೆಟ್ಟಿಯವರು ವಂಡ್ಸೆ ಕ್ಷೇತ್ರದ ಸದಸ್ಯರು. ಇವರ ಹೆಸರು ಮತದಾರರ ಪಟ್ಟಿಯಲ್ಲಿರುವುದು ಬೈಂದೂರಿನಲ್ಲಿ. “ಪಕ್ಷ ಅವಕಾಶ ಕೊಟ್ಟರೆ ಬೇರೆಡೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ ಸ್ಪರ್ಧಿಸಬಹುದು’ ಎನ್ನುತ್ತಾರೆ ಶೆಟ್ಟಿಯವರು. ಸುರೇಶ ಬಟವಾಡಿಯವರು ಶಿರೂರು ಜಿ.ಪಂ. ಕ್ಷೇತ್ರದವರು. ಈ ಕ್ಷೇತ್ರದಲ್ಲಿದ್ದ ಪಡುವರಿ ಗ್ರಾಮವು ಬೈಂದೂರು ಪ.ಪಂ.ಗೆ ಹೋಗಿದೆ. ಇವರ ಮತ ಕ್ಷೇತ್ರ ಪಡುವರಿ. ಶಂಕರ ಪೂಜಾರಿ ಅವರು ಬೈಂದೂರು ಜಿ.ಪಂ. ಕ್ಷೇತ್ರದವರು. ಯಡ್ತರೆ, ಬೈಂದೂರು ಗ್ರಾಮವು ಪ.ಪಂ.ಗೆ ಹೋಗಿರುವುದರಿಂದ ಇವರೂ ಪಕ್ಕದಲ್ಲಿ ಸೃಷ್ಟಿಯಾಗಬಹುದಾದ ಕೊಲ್ಲೂರು ಕ್ಷೇತ್ರಕ್ಕೂ ಸ್ಪರ್ಧಿಸಬಹುದು. ಸುರೇಶ ಬಟವಾಡಿ ಮತ್ತು ಶಂಕರ ಪೂಜಾರಿ ಅವರೂ ಅಗತ್ಯವಿದ್ದರೆ ಗ್ರಾಮಾಂತರದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಸ್ಪರ್ಧಿಸಬಹುದು.
ಕ್ಷೇತ್ರಗಳು 30ಕ್ಕೇರಲಿವೆ :
ಕ್ಷೇತ್ರ ಬದಲಾವಣೆ ಮಾಡಬೇಕಾದರೆ ಆಕಾಂಕ್ಷಿಗಳಿಗೆ ಇನ್ನೊಂದು ವರದಾನವಿದೆ. ಇದೆಂದರೆ ಇದುವರೆಗೆ ಇದ್ದ 26 ಜಿ.ಪಂ. ಕ್ಷೇತ್ರಗಳು ಮುಂದೆ 30ಕ್ಕೇರಲಿವೆ. ಹೀಗಾಗಿ ಮೀಸಲಾತಿ ಬದಲಾದರೂ ಕ್ಷೇತ್ರಗಳು ಹೆಚ್ಚಿಗೆ ಆಗುವುದರಿಂದ ಅವಕಾಶಗಳು ಹೆಚ್ಚಿಗೆ ಇವೆ. ಮೀಸಲಾತಿ ಬದಲಾದಾಗ ಅದಕ್ಕೆ ಸೂಕ್ತ ಅಭ್ಯರ್ಥಿಗಳೂ ಪಕ್ಷಕ್ಕೆ ಅಗತ್ಯವಾಗುತ್ತದೆ. ಹೀಗಾಗಿ ಅದೇ ಕ್ಷೇತ್ರದಿಂದ ಹಾಲಿ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ಸಿಗುವುದು ಕಷ್ಟಸಾಧ್ಯ.