Advertisement

ಜಿಲ್ಲಾಡಳಿತ ವಿರುದ್ಧ ಜಿ.ಪಂ. ಸದಸ್ಯರ ಅಸಮಾಧಾನ

01:40 AM Dec 01, 2018 | Karthik A |

ಉಡುಪಿ: ‘ಮರಳು ಕೊರತೆ, ಸ್ಥಳೀಯರಿಂದ ಟೋಲ್‌ ಸಂಗ್ರಹ ಸೇರಿದಂತೆ ಪ್ರಮುಖ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಉಡುಪಿ ಜಿ.ಪಂ.ನ ಆಡಳಿತರೂಢ ಬಿಜೆಪಿ ಸದಸ್ಯರು ಶುಕ್ರವಾರದಂದು ನಿಗದಿಯಾದ ಜಿ.ಪಂ. ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ್ದಾರೆ. ನಿಗದಿತ ಸದಸ್ಯರ ಸಂಖ್ಯೆ ಕೊರತೆಯಿಂದ ಅರ್ಧ ತಾಸು ವಿಳಂಬವಾಗಿ ಸಭೆ ಆರಂಭವಾಯಿತು. ಈ ವೇಳೆ ಕಾಂಗ್ರೆಸ್‌ ಸದಸ್ಯರು ‘ಸಾಸ್ತಾನ ಮತ್ತು ಪಡುಬಿದ್ರಿಯ ಟೋಲ್‌ಗೇಟ್‌ಗಳಲ್ಲಿ ಸ್ಥಳೀಯರಿಗೆ ಟೋಲ್‌ ವಿನಾಯಿತಿ ನೀಡಬೇಕೆಂದು ನಡೆಯುತ್ತಿರುವ ಪ್ರತಿಭಟನೆಯನ್ನು ಉಲ್ಲೇಖೀಸಿದರು. ಅಂತಿಮ ನಿರ್ಧಾರವೇನಾಗಿದೆ?’ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನವಯುಗ ಸಂಸ್ಥೆಯ ಅಧಿಕಾರಿ ‘ಸ್ಥಳೀಯರಿಗೆ ವಿನಾಯಿತಿ ಬಗ್ಗೆ ನಿರ್ಧಾರ ಆಗಿಲ್ಲ’ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ರೇಶ್ಮಾ ಶೆಟ್ಟಿ ಅವರು ‘ಈ ಹಿಂದಿನ ಸಭೆಯಲ್ಲಿ ಸ್ಥಳೀಯರಿಂದ ಟೋಲ್‌ ಸಂಗ್ರಹಿಸುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಈಗ ಸಂಗ್ರಹಿಸುತ್ತಿದ್ದಾರೆ’ ಎಂದರು. ಇದಕ್ಕೆ ಗೀತಾಂಜಲಿ ಸುವರ್ಣ, ಪ್ರತಾಪ್‌ ಹೆಗ್ಡೆ ಮಾರಾಳಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ ಮೊದಲಾದವರು ದನಿಗೂಡಿಸಿದರು. ‘ಟೋಲ್‌ ಸಂಗ್ರಹ ಕುರಿತಾಗಿ ಕಂಪೆನಿ ಮತ್ತು ಸರಕಾರದ ನಡುವೆ ನಡೆದಿರುವ ಒಪ್ಪಂದವೇನು?’ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ ಎಂದು ವಿಪಕ್ಷದ ವಿಲ್ಸನ್‌ ರೋಡ್ರಿಗಸ್‌ ಹೇಳಿದರು.

Advertisement

ಟೋಲ್‌ ಹೆಚ್ಚಳ?
‘ಪಡುಬಿದ್ರಿ ಸೇರಿದಂತೆ ಕೆಲವು ಕಡೆ ಹೆದ್ದಾರಿಯ ಸೇತುವೆ ಹಾಗೂ ಇತರ ಕಾಮಗಾರಿಗಳು ಪೂರ್ಣಗೊಂಡಿಲ್ಲ’ ಎಂದು ಸದಸ್ಯರು ದೂರಿದರು. ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನವಯುಗ ಕಂಪೆನಿಯ ಅಧಿಕಾರಿಗಳು ‘ಕಾಮಗಾರಿ ಬಾಕಿ ಇರುವುದರಿಂದ ಈಗ ಟೋಲನ್ನು ನಿಗದಿತ ಮೊತ್ತಕ್ಕಿಂತ ಕಡಿಮೆ ಪ್ರಮಾಣದಲ್ಲಿ ವಸೂಲಿ ಮಾಡಲಾಗುತ್ತಿದೆ’ ಎಂದು ಹೇಳಿದರು. ಆಡಳಿತ ಪಕ್ಷದ ಪ್ರತಾಪ್‌ ಹೆಗ್ಡೆ ಮಾರಾಳಿ ಅವರು ‘ಜಿಲ್ಲೆಯಲ್ಲಿ ಮರಳಿನಿಂದಾಗಿ ಜನಸಾಮಾನ್ಯರಿಗೆ ತೀವ್ರ ತೊದರೆಯಾಗಿದೆ. ಟೋಲ್‌ ಸಮಸ್ಯೆಯನ್ನು ಕೂಡ ಪರಿಹರಿಸಿಲ್ಲ. ಇವೆರಡೂ ಕೂಡ ಇತ್ಯರ್ಥ ಆಗುವವರೆಗೆ ಜಿ.ಪಂ.ಸಭೆಯ ಅವಶ್ಯಕತೆ ಇದೆಯೇ?’ ಎಂದು ಪ್ರಶ್ನಿಸಿದರು.

ಈ ಸಂದರ್ಭ ಮಾತನಾಡಿದ ಕೆಲವು ಸದಸ್ಯರು ‘ಜಿಲ್ಲಾಧಿಕಾರಿಯವರು ಮರಳು ಸಮಸ್ಯೆ ಬಗೆಹರಿಸಲು ಕಾನೂನಿನ ನೆಪ ಹೇಳುತ್ತಾರೆ, ನೂರಾರು ಪೊಲೀಸರನ್ನು ನಿಯೋಜಿಸಿ ಟೋಲ್‌ ಸಂಗ್ರಹಿಸಲು ಅನುವು ಮಾಡಿಕೊಡುತ್ತಾರೆ. ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ನಮಗೂ ಗೌರವ ಕೊಡುತ್ತಿಲ್ಲ. ಜಿಲ್ಲಾಧಿಕಾರಿಯವರ ಅಸಹಕಾರದಿಂದ ಬೇಸತ್ತು ಸಭೆಯನ್ನು ಬಹಿಷ್ಕರಿಸುತ್ತಿದ್ದೇವೆ’ ಎಂದು ಹೇಳಿ ಒಬ್ಬೊಬ್ಬರೇ ಸಭೆಯಿಂದ ನಿರ್ಗಮಿಸಿದರು.


ಸುರೇಶ್‌ ಬಟವಾಡೆ, ರೋಹಿತ್‌, ರಾಘವೇಂದ್ರ ಕಾಂಚನ್‌ ಅವರು ಕೂಡ ಜಿಲ್ಲಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡು ಸಭೆಯಿಂದ ಹೊರನಡೆದರು. ಈ ಸಂದರ್ಭದಲ್ಲಿ ವಿಪಕ್ಷದ ಜನಾರ್ದನ ತೋನ್ಸೆ ಅವರು ‘ಮರಳು ಸಿಗಬೇಕು. ಸ್ಥಳೀಯರಿಂದ ಟೋಲ್‌ ಕೂಡ ಸಂಗ್ರಹ ಮಾಡಬಾರದು ಎಂಬುದು ನಮ್ಮ ನಿಲುವು ಕೂಡ ಆಗಿದೆ. ಆದರೆ ಜಿಲ್ಲಾಧಿಕಾರಿಯವರು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿಲ್ಲ. ಅವರು ಅನುಷ್ಠಾನ ಮಾಡುವ ಅಧಿಕಾರ ಮಾತ್ರ ಹೊಂದಿದ್ದಾರೆ. ನಾವು ಕೇಂದ್ರ/ ರಾಜ್ಯ ಸರಕಾರ ಮಟ್ಟದಲ್ಲಿ ಒತ್ತಾಯಿಸಿ ದರೆ ಮಾತ್ರ ಪ್ರಯೋಜನವಾದೀತು. ಸಭೆ ಬಹಿಷ್ಕಾರದಿಂದ ಪ್ರಯೋಜನವಿಲ್ಲ’ ಎಂದರು. 

ಮನವೊಲಿಕೆ ವಿಫ‌ಲ
ಸಭೆಯಿಂದ ನಿರ್ಗಮಿಸಿದ ಸದಸ್ಯರನ್ನು ವಾಪಸ್ಸು ಕರೆತರಲು ಅಧ್ಯಕ್ಷ ದಿನಕರ ಬಾಬು ಅವರು ಸಭೆಯಿಂದ ಹೊರಬಂದು ಸದಸ್ಯರ ಜತೆ ಮಾತುಕತೆ ನಡೆಸಿದರಾದರೂ ಸದಸ್ಯರು ಒಪ್ಪಲಿಲ್ಲ. ಅನಂತರ ಸಭೆಯನ್ನು ಮುಂದೂಡಲಾಯಿತು. ‘ಸಚಿವರ ಸ್ಥಾನಮಾನ ಹೊಂದಿರುವ ಜಿಲ್ಲಾ ಪಂಚಾಯತ್‌ ಅಧ್ಯಕ್ಷರು ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಆಹ್ವಾನಿತರು. ಆದರೆ ಜಿ.ಪಂ. ಸಭೆಯ ಅವಧಿಯಲ್ಲಿಯೇ ಸಮಾರಂಭ ಇಟ್ಟುಕೊಂಡು ಜಿ.ಪಂ. ಅಧ್ಯಕ್ಷರನ್ನು ಕಡೆಗಣಿಲಾಗಿದೆ’ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಹೇಳಿದರು. ಕೃಷಿ ಮತ್ತು ಕೈಗಾರಿಕೆ ಸ್ಥಾಯೀ ಸಮಿತಿ ಅಧ್ಯಕ್ಷ ಉದಯ ಎಸ್‌. ಕೋಟ್ಯಾನ್‌, ಜಿ.ಪಂ. ಸಿಇಒ ಸಿಂಧು ರೂಪೇಶ್‌, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌, ಮುಖ್ಯ ಲೆಕ್ಕಾಧಿಕಾರಿ ನಾಗೇಶ್‌ ರಾಯ್ಕರ್‌ ಉಪಸ್ಥಿತರಿದ್ದರು.

Advertisement

ಏಕಕಾಲದಲ್ಲಿ ಸಭೆ-ಸಮಾರಂಭ !
ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಅವರು ಮಾತನಾಡಿ ‘ಜಿ.ಪಂ. ಸಾಮಾನ್ಯಸಭೆ ಇರುವ ದಿನದಂದೆ ಇದೇ ಕಟ್ಟಡದ ಇನ್ನೊಂದು ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಿಗದಿ ಮಾಡಲಾಗಿದೆ. ಅಧ್ಯಕ್ಷರು, ಸದಸ್ಯರು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಮಾಡಲಾಗಿದೆ. ಇದು ಜಿ.ಪಂ.ಗೆ ಮಾಡಿರುವ ಅವಮಾನ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next