Advertisement

ಫ್ರೆಂಚ್‌ ಓಪನ್‌ : ಸ್ಲೊವೇನಿಯಾದ ಜಿದಾನ್ಸೆಕ್‌ ಸೆಮಿಗೆ ಲಗ್ಗೆ

12:46 AM Jun 09, 2021 | Team Udayavani |

ಪ್ಯಾರಿಸ್‌ : ಸ್ಲೊವೇನಿಯಾದ ತಮಾರ ಜಿದಾನ್ಸೆಕ್‌ ಫ್ರೆಂಚ್‌ ಓಪನ್‌ ವನಿತಾ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ಗೆ ಲಗ್ಗೆ ಇಡುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಅವರು ಗ್ರಾನ್‌ಸ್ಲಾಮ್‌ ಕೂಟವೊಂದರಲ್ಲಿ ಈ ಹಂತಕ್ಕೆ ಏರಿದ ಸ್ಲೊವೇನಿಯಾದ ಮೊದಲ ಆಟಗಾರ್ತಿ ಆಗಿದ್ದಾರೆ.

Advertisement

ಮಂಗಳವಾರದ ಜಿದ್ದಾಜಿದ್ದಿ ಕ್ವಾರ್ಟರ್‌ ಫೈನಲ್‌ ಕಾಳಗದಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ ಜಿದಾನ್ಸೆಕ್‌ 7-5, 4-6, 8-6 ಅಂತರ ದಿಂದ ಸ್ಪೇನಿನ ಪೌಲಾ ಬಡೋಸಾ ಅವರನ್ನು ಮಣಿಸಿದರು. 2 ಗಂಟೆ, 26 ನಿಮಿಷಗಳ ಕಾಲ ಇವರ ಸ್ಪರ್ಧೆ ಸಾಗಿತು. ಇದಕ್ಕೂ ಮುನ್ನ ಜಿದಾನ್ಸೆಕ್‌ ದ್ವಿತೀಯ ಸುತ್ತು ಪ್ರವೇಶಿಸಿದ್ದೇ ಅತ್ಯುತ್ತಮ ಸಾಧನೆಯಾಗಿತ್ತು. 7ನೇ ಶ್ರೇಯಾಂಕದ ಬಿಯಾಂಕಾ ಆ್ಯಂಡ್ರೂಸ್ಕಾ ಅವರನ್ನು ಉರುಳಿಸುವ ಮೂಲಕ ಜಿದಾನ್ಸೆಕ್‌ ಅಭಿಯಾನ ಆರಂಭಿಸಿದ್ದರು.

ಪಾವ್ಲುಚೆಂಕೋವಾ ಎದುರಾಳಿ
ಗುರುವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ತಮಾರ ಜಿದಾನ್ಸೆಕ್‌ ರಶ್ಯದ ಅನಾಸ್ತಾಸಿಯ ಪಾವ್ಲುಚೆಂಕೋವಾ ಅವರನ್ನು ಎದುರಿಸಲಿದ್ದಾರೆ. ತೀವ್ರ ಪೈಪೋಟಿ ಯಿಂದ ಕೂಡಿದ ದಿನದ ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಪಾವ್ಲುಚೆಂಕೋವಾ ಕಜಾಕ್‌ಸ್ಥಾನದ ಎಲೆನಾ ರಿಬಾಕಿನಾ ಅವರನ್ನು 6-7 (2-7), 6-2, 9-7 ಅಂತರದಿಂದ ಸೋಲಿಸಿದರು. ಪಾವ್ಲುಚೆಂಕೋವಾ ಅವರಿಗೂ ಇದು ಮೊದಲ ಗ್ರಾನ್‌ಸ್ಲಾಮ್‌ ಸೆಮಿಫೈನಲ್‌ ಆಗಿದ್ದು, ಹೋರಾಟ ತೀವ್ರ ಕುತೂಹಲ ಮೂಡಿಸಿದೆ.

ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ಸ್‌
ಹಾಲಿ ಚಾಂಪಿಯನ್‌ಗಳಾದ ರಫೆಲ್‌ ನಡಾಲ್‌ ಮತ್ತು ಐಗಾ ಸ್ವಿಯಾಟೆಕ್‌ ಫ್ರೆಂಚ್‌ ಓಪನ್‌ ಪಂದ್ಯಾವಳಿಯನ್ನು ಗೆಲುವಿನ ಓಟ ಮುಂದುವರಿಸಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.

ಪೋಲೆಂಡ್‌ನ‌ 8ನೇ ಶ್ರೇಯಾಂಕಿತ ಆಟಗಾರ್ತಿ ಐಗಾ ಸ್ವಿಯಾಟೆಕ್‌ ಉಕ್ರೇನಿನ ಮಾರ್ಟಾ ಕಾಸ್ಟ್‌ ಯುಕ್‌ ಸವಾಲನ್ನು ದಿಟ್ಟ ರೀತಿಯಲ್ಲಿ ಎದುರಿಸಿ 6-3, 6-4 ಆಂತರದ ನೇರ ಸೆಟ್‌ ಗೆಲುವು ದಾಖಲಿಸಿದರು. ಇದರೊಂದಿಗೆ ಸ್ವಿಯಾಟೆಕ್‌ ಫ್ರೆಂಚ್‌ ಓಪನ್‌ನಲ್ಲಿ ಸತತ 22 ಸೆಟ್‌ಗಳನ್ನು ಗೆದ್ದಂತಾಯಿತು.

Advertisement

ಕ್ವಾರ್ಟರ್‌ ಫೈನಲ್‌ನಲ್ಲಿ ಸ್ವಿಯಾಟೆಕ್‌ ಎದುರಾಳಿ ಗ್ರೀಕ್‌ನ ಮರಿಯಾ ಸಕ್ಕರಿ. ಅವರು ಅಮೆರಿಕದ ಸೋಫಿಯಾ ಕೆನಿನ್‌ ವಿರುದ್ಧ 6-1, 6-3 ಅಂತರದ ಮೇಲುಗೈ ಸಾಧಿಸಿದರು.

ನಡಾಲ್‌ ವರ್ಸಸ್‌ ಶಾರ್ಟ್ಸ್ಮನ್‌
“ಕ್ಲೇ ಕೋರ್ಟ್‌ ಕಿಂಗ್‌’ ರಫೆಲ್‌ ನಡಾಲ್‌ ಇಟಲಿಯ ಯುವ ಟೆನಿಸಿಗ ಜಾನಿಕ್‌ ಸಿನ್ನರ್‌ ಅವರನ್ನು 7-5, 6-3, 6-0 ಅಂತರದಿಂದ ಪರಾಭವಗೊಳಿಸಿದರು. ಆರ್ಜೆಂಟೀನಾದ ಡೀಗೊ ಶಾರ್ಟ್ಸ್ಮನ್‌ ಇವರ ಮುಂದಿನ ಎದುರಾಳಿ.

Advertisement

Udayavani is now on Telegram. Click here to join our channel and stay updated with the latest news.

Next