Advertisement

ZAP-X Radiosurgery; ಬ್ರೈನ್‌ ಟ್ಯೂಮರ್‌ ನೋವುರಹಿತ ಚಿಕಿತ್ಸೆಗೆ ಝ್ಯಾಪ್‌- ಎಕ್ಸ್‌

03:56 PM Jun 17, 2024 | Team Udayavani |

ಮೆದುಳಿನಲ್ಲಿ ಗೆಡ್ಡೆ (ಬ್ರೈನ್ ಟ್ಯೂಮರ್‌ )ಯಾದರೆ ತಮ್ಮ ಜೀವನ ಮುಗಿದೇ ಹೋಯಿತು ಅಂದುಕೊಳ್ಳುವವರು ಬಹಳ ರೋಗಿಗಳು. ಎಷ್ಟು ಇದರ ಪೀಡನೆಯಿಂದ ಬಳಲುತ್ತಾರೋ ಇದರ ಆಪರೇಷನ್‌ ಕೂಡಾ ಅಷ್ಟೇ ಕಠಿಣ. ಈ ಸಮಸ್ಯೆಯಿಂದ ಬಳಲುವ ಹಲವು ರೋಗಿಗಳು ಆಪರೇಷನ್‌ ಟೇಬಲ್‌ ಮೇಲೆ ಕೊನೆಯುಸಿರೆಳೆದ ಹಲವು ಪ್ರಕರಣಗಳೂ ಇವೆ. ಆದರೆ, ಇದೀಗ ಇಡೀ ಮಾನವ ಕುಲಕ್ಕೆ ಒಂದು ಒಳ್ಳೆ ಸುದ್ದಿ ದೊರಕಿದೆ. ಕೇವಲ ಯಂತ್ರದಲ್ಲಿ 30 ನಿಮಿಷಗಳ ಕಾಲ ಮಲಗುವುದರಿಂದ ಮೆದುಳಿನ ಗೆಡ್ಡೆಯನ್ನು ಗುಣಪಡಿಸಬಹುದಾದಂತಹ ಅತ್ಯದ್ಭುತ ತಂತ್ರಜ್ಞಾನ ಹಾಗೂ ಚಿಕಿತ್ಸೆ ಭಾರತದಲ್ಲಿ ಪ್ರಾರಂಭಗೊಂಡಿದೆ.

Advertisement

ಹೌದು, ಮೆದುಳಿನ ಗೆಡ್ಡೆಯ ಸಮಸ್ಯೆಯಿಂದ ಮುಕ್ತಿ ನೀಡಿ, ರೋಗಿಗಳಿಗೆ ಮರುಜೀವ ಒದಗಿಸುವ ಉದ್ದೇಶದಿಂದ ದೆಹಲಿಯ ಇಂದ್ರಪ್ರಸ್ಥ ಅಪೊಲೋ ಆಸ್ಪತ್ರೆಯಲ್ಲಿ ದಕ್ಷಿಣ ಏಷ್ಯಾದ ಮೊದಲ ಝ್ಯಾಪ್‌- ಎಕ್ಸ್‌ ಯಂತ್ರ ಸ್ಥಾಪನೆಗೊಂಡಿದೆ. ಮೆದುಳಿನ ಯಾವ ಭಾಗದಲ್ಲಿ ಗೆಡ್ಡೆ ಮಾರ್ಪಾಡುಗೊಂಡಿದೆಯೋ ಅದನ್ನು ಸರಿಯಾಗಿ ಪತ್ತೆ ಹಚ್ಚಿ ಆ ಪ್ರದೇಶಕ್ಕೆ ವಿಕಿರಣವನ್ನು ನಿಖರವಾಗಿ ತಲುಪಿಸುವ ಮೂಲಕ ಗೆಡ್ಡೆಯನ್ನು ನಿರ್ಮೂಲನೆ ಮಾಡುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಮೆದುಳಿನ ಯಾವ ಭಾಗದಲ್ಲಿ ಗೆಡ್ಡೆಯಿದೆಯೋ ಆ ಭಾಗಕ್ಕೆ ಯಂತ್ರವು ಹೆಚ್ಚಿನ-ತೀವ್ರತೆಯ, ಕೇಂದ್ರೀಕೃತ ವಿಕಿರಣವನ್ನು ಒಂದು ಮಿಲಿ ಮೀಟರ್‌ಗಿಂತಲೂ ಕಡಿಮೆ ನಿಖರತೆಯೊಂದಿಗೆ ತಲುಪಿಸುತ್ತದೆ. ಸಾಮಾನ್ಯ ಶಸ್ತ್ರಚಿಕಿತ್ಸೆಯಲ್ಲಿ ಮೆದುಳಿನಲ್ಲಿರುವ ಗೆಡ್ಡೆಯ ಸುತ್ತಮುತ್ತಲಿನ ಅಂಗಾಂಶಗಳು ಕೂಡಾ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ, ಝ್ಯಾಪ್‌ ಎಕ್ಸ್‌ನಿಂದ ಮಾಡಲಾಗುವ ವಿಕಿರಣ ಚಿಕಿತ್ಸೆಯುವ ಮೆದುಳಿನ ಇತರ ಯಾವುದೇ ಅಂಗಾಂಶಗಳು ಹಾನಿಯಾಗದಂತೆ ತಡೆಯುತ್ತದೆ. ಇದು ಗೆಡ್ಡೆಯನ್ನು ನಾಶಗೊಳಿಸುವುದರಿಂದ ಕ್ರಮೇಣ ನೈಸರ್ಗಿಕವಾಗಿ ಗೆಡ್ಡೆ ಅಳಿದು ಹೋಗುತ್ತದೆ.

ಯಂತ್ರದ ಪ್ರಯೋಜನಗಳೇನು?

Advertisement

ಸಾಮಾನ್ಯವಾಗಿ ಮೆದುಳಿನ ಗೆಡ್ಡೆ ಶಸ್ತ್ರಚಿಕಿತ್ಸೆಯ ವೇಳೆ ರೋಗಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿ, ಬಳಿಕ ಶಸ್ತ್ರಚಿಕಿತ್ಸೆಯ ಮುನ್ನ ಅರಿವಳಿಕೆ ನೀಡಲಾಗುತ್ತದೆ. ಆದರೆ, ಡಾ| ಜಾನ್‌ ಅಡ್ಲರ್‌ ರಚನೆ ಮಾಡಿದ ಯಂತ್ರದ ಮೂಲಕ ನೀಡುವ ಚಿಕಿತ್ಸೆಯಲ್ಲಿ ರೋಗಿಗಳು ಆಸ್ಪತ್ರೆಗೆ ದಾಖಲಾಗಬೇಕಿಲ್ಲ, ಅರಿವಳಿಕೆ ಪಡೆಯಬೇಕಾದ ಅಗತ್ಯವೂ ಇಲ್ಲ. ಚಿಕಿತ್ಸೆಯ ನಂತರದ ಚೇತರಿಕೆಯೂ ಬೇಕಾಗಿಲ್ಲ. ಈ ಚಿಕಿತ್ಸೆಯನ್ನು ಕೇವಲ 30 ನಿಮಿಷದಿಂದ ಗರಿಷ್ಠ ಒಂದುವರೆ ಗಂಟೆಗಳ ಕಾಲ ಒಂದೇ ಅವಧಿಯಲ್ಲಿ ಮಾಡಲಾಗುತ್ತದೆ. ಗೆಡ್ಡೆ ತುಂಬಾ ದೊಡ್ಡದಾಗಿದ್ದರೆ ಅಥವಾ ಮೆದುಳಿನಲ್ಲಿನ ಪ್ರಮುಖ ರಚನೆಗಳ ಹತ್ತಿರದಲ್ಲಿದ್ದಾಗ ಮಾತ್ರ ಚಿಕಿತ್ಸೆಗೆ ಹೆಚ್ಚಿನ ಸಮಯ ಪಡೆದುಕೊಳ್ಳುತ್ತದೆ. ಈ ಚಿಕಿತ್ಸೆಯು ಮೆದುಳು, ಮೆದುಳು ಬಳ್ಳಿ, ಆಪ್ಟಿಕ್‌ ನರಗಳು ಹಾಗೂ ದೇಹದ ವಿವಿಧ ಭಾಗಗಳನ್ನು ನಿಯಂತ್ರಿಸುವ ಅಂಗಾಂಶಗಳಿಗೆ ಯಾವುದೇ ತೊಂದರೆಯಾಗದಂತೆ ರಕ್ಷಿಸುತ್ತದೆ.

ಯಾರಿಗೆ ಅಗತ್ಯತೆಯಿದೆ ಈ ಚಿಕಿತ್ಸೆ?

ಈ ವಿಶಿಷ್ಠ ಚಿಕಿತ್ಸೆಯು 3ಹಿ3ಹಿ3ಸೆಂ.ಮೀ. ಗಿಂತ ಕಡಿಮೆ ಗಾತ್ರದ ಗೆಡ್ಡೆಯನ್ನು ಹೊಂದಿರುವವರಿಗೆ ಇದು ಉಪಯುಕ್ತವಾಗಿದೆ. ಯಂತ್ರವು ಗೆಡ್ಡೆಗಳಿಗೆ ಚಿಕಿತ್ಸೆ ನೀಡುವುದಲ್ಲದೆ, ಇದು ಮೆದುಳಿನಲ್ಲಿನ ಆಳವಾದ ಗಾಯಗಳು ಅಥವಾ ಅಪಧಮನಿಯ ವಿರೂಪತೆಗೆ ಚಿಕಿತ್ಸೆ ನೀಡಬಲ್ಲದು. ಆದರೆ, ಎಲ್ಲ ಬಗೆಯ ಗೆಡ್ಡೆಗಳಿಗೆ ಹಾಗೂ ದೊಡ್ಡ ಗಾತ್ರದ ಗೆಡ್ಡೆಗಳಿಗೆ ಇದರಿಂದ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಸಣ್ಣ ಗಾತ್ರದ ಹಾಗೂ ಮೆದುಳಿನ ಆಳದಲ್ಲಿರುವ ಗೆಡ್ಡೆಗಳಿಗೆ ಈ ಚಿಕಿತ್ಸೆಯು ಬಹಳಷ್ಟು ಸಹಕಾರಿ. ಅಲ್ಲದೇ, ಮೆದುಳಿನ ಒಳಗಡೆ ಗಾಯ ಅಥವಾ ಹಾನಿ ಹಾಗೂ ಅಪಧಮನಿಯ ವಿರೂಪತೆಗೆ ಚಿಕಿತ್ಸೆ ನೀಡಬಲ್ಲದು.

ಚಿಕಿತ್ಸಾ ವೆಚ್ಚ ಎಷ್ಟು?

ಝ್ಯಾಪ್‌ – ಎಕ್ಸ್‌ನಲ್ಲಿ ನಡೆಸುವ ಚಿಕಿತ್ಸೆಯ ವೆಚ್ಚವು ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗೆ ಸಮನಾಗಿರುತ್ತದೆ. ಭಾರತದ ಹೊರಗೆ ಇದರ ಬೆಲೆ ಸುಮಾರು 4000 ಡಾಲರ್‌.

ಇತರ ರೇಡಿಯೋ ಥೆರಪಿಗಳಿಗಿಂತ ಇದು ಹೇಗೆ ಭಿನ್ನ?

ರೇಡಿಯೊಥೆರಪಿಯಲ್ಲಿ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ನೀಡಲು ವಿಕಿರಣದ ಶಕ್ತಿಯನ್ನು ಬಳಸಿಕೊಳ್ಳಲಾಗುತ್ತದೆ. ಆದರೆ, ಇದು ಹೆಚ್ಚು ಪ್ರಸರಣಗೊಳ್ಳುತ್ತದೆ ಮತ್ತು ಗೆಡ್ಡೆಯು ಮೆಟಾಸ್ಟಾಸಿಸ್‌ (ಸ್ಥಾನಾಂತರ) ಆಗಿರುವ ಸನ್ನಿವೇಶಗಳಲ್ಲಿ ಸಹಾಯಕವಾಗಿದೆ. ಝ್ಯಾಪ್‌- ಎಕ್ಸ್‌ನಂತಹ ತಂತ್ರಜ್ಞಾನಗಳು ವಿಕಿರಣವನ್ನು ನಿರ್ದಿಷ್ಟ ಬಿಂದುವಿಗೆ ಕೇಂದ್ರೀಕರಿಸಲು ಭೂತಗನ್ನಡಿಯನ್ನು ಬಳಸುವುದಕ್ಕೆ ಸಮಾನವಾಗಿದೆ ಹಾಗೂ ಇದರ ತೀವ್ರತೆಯು ತುಂಬಾ ವಿಭಿನ್ನವಾಗಿದೆ. ಈ ಚಿಕಿತ್ಸೆಯ ಇತರ ಪ್ರಯೋಜನವೆಂದರೆ, ಪ್ರತ್ಯೇಕ ಕಾಂಕ್ರೀಟ್‌ ಕಟ್ಟಡದಲ್ಲಿ ವಿಕಿರಣಶೀಲ ಮೂಲವನ್ನು ಇರಿಸುವ ಅಗತ್ಯವಿಲ್ಲ. ಇದರ ಚಿಕಿತ್ಸೆಯ ಸಮಯದಲ್ಲಿ ಒಬ್ಬ ವ್ಯಕ್ತಿಯು ರೋಗಿಯೊಂದಿಗೆ ಇದ್ದರೂ ಅವರಿಗೆ ಯಾವುದೇ ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ.

ಲಕ್ಷಗಟ್ಟಲೆ ಜನರು ಪ್ರಯೋಜನ ಪಡೆಯಬಹುದು

ಯುಎಸ್‌ನಲ್ಲಿ ರೇಡಿಯೋ ಸರ್ಜರಿಯು ನರ ಶಸ್ತ್ರಚಿಕಿತ್ಸಕರು ಮಾಡುವ ಅತ್ಯಂತ ಸಾಮಾನ್ಯ ಚಿಕಿತ್ಸೆಯಾಗಿದ್ದರೂ ಜಾಗತಿಕವಾಗಿ 10 ರೋಗಿಗಳ ಪೈಕಿ ಒಬ್ಬರಿಗಿಂತಲೂ ಕಡಿಮೆ ಜನರು ಇದನ್ನು ಮಾಡಿಸಿಕೊಳ್ಳುತ್ತಾರೆ. ಈ ಅಂತರವಂತೂ ಬಹಳಷ್ಟು ದೊಡ್ಡದು. ಪ್ರಪಂಚದ ಎಲ್ಲ ದೇಶಗಳ ಜನರನ್ನು ಗಮನದಲ್ಲಿಟ್ಟುಕೊಂಡು ಈ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ. ಭಾರತದಲ್ಲಿ ಲಕ್ಷಗಟ್ಟಲೆ ಜನರು ಈ ಚಿಕಿತ್ಸೆಯಿಂದ ಪ್ರಯೋಜನ ಪಡೆಯಬಹುದು. -ಡಾ| ಜಾನ್‌ ಅಡ್ಲರ್‌, ಯಂತ್ರದ ರಚನೆಕಾರ ಮತ್ತು ಝ್ಯಾಪ್‌ ಸರ್ಜಿಕಲ್‌ನ ಸಿಇಒ

ಆಸ್ಪತ್ರೆಗೆ ದಾಖಲಾಗಬೇಕಿಲ್ಲ

ಈ ಹಿಂದೆ ಮೆದುಳಿನ ಗೆಡ್ಡೆಯನ್ನು ತೆಗೆಯಲು ತಜ್ಞ ವೈದ್ಯರ ತಂಡದಿಂದ ಗಂಟೆಗಳ ಕಾಲ ಆಪರೇಷನ್‌ ನಡೆಸಿದ ಬಳಿಕ ಯಶಸ್ಸು ಕಾಣುತ್ತಿದ್ದರು. ಮೆದುಳಿನ ಇತರ ಯಾವುದೇ ನರಗಳಿಗೆ ತೊಂದರೆಯಾಗದಂತೆ ಈ ಶಸ್ತ್ರಚಿಕಿತ್ಸೆ ಮಾಡಬೇಕಾದ್ದರಿಂದ ಇದು ಬಹಳಷ್ಟು ಅಪಯಕಾರಿ ಕೂಡ. ಈ ಆಪರೇಷನ್‌ ತಜ್ಞ ವೈದ್ಯರಿಗೂ ಎಷ್ಟು ಸವಾಲಿನ ಕೆಲಸವೋ, ರೋಗಿಗಳು ಕೂಡಾ ಅಷ್ಟೇ ಪೀಡನೆ ಅನುಭವಿಸಬೇಕಾದ ಅನಿವಾರ್ಯತೆ ಕೂಡಾ ಇಲ್ಲಿತ್ತು. ಆದ್ರೆ, ಝ್ಯಾಪ್‌- ಎಕ್ಸ್‌ ಯಂತ್ರದ ಮೂಲಕ ನಡೆಯುವ ಚಿಕಿತ್ಸೆ ಮಾತ್ರ ಸಂಪೂರ್ಣ ನೋವು ರಹಿತವಾಗಿದ್ದು, ಇತರ ಶಸ್ತ್ರಚಿಕಿತ್ಸೆಗಿಂತ ಭಿನ್ನವಾಗಿರುವುದರಿಂದ ಆಸ್ಪತ್ರೆಯಲ್ಲೇ ದಾಖಲಾಗಬೇಕಾದ ಅನಿವಾರ್ಯತೆಯೂ ಬಹಳಷ್ಟಿಲ್ಲ.

 

ಪೂಜಾ ಆರ್‌. ಹೆಗಡೆ, ಮೇಲಿನಮಣ್ಣಿಗೆ

Advertisement

Udayavani is now on Telegram. Click here to join our channel and stay updated with the latest news.

Next