Advertisement

ವಿಜಯಪುರ: ಕಡಿಮೆ ವೆಚ್ಚದಲ್ಲಿ ಐವಿಎಫ್ ಚಿಕಿತ್ಸೆ: ಡಾ|ವರ್ಷಾ

04:46 PM Jun 18, 2024 | Team Udayavani |

ಉದಯವಾಣಿ ಸಮಾಚಾರ
ವಿಜಯಪುರ: ಮಕ್ಕಳಿರದೇ ಸಂಕಟ ಅನುಭವಿಸುತ್ತಿರುವ ದಂಪತಿಗೆ ಮಗುವನ್ನು ಹೊಂದುವ ಕನಸು ನನಸಾಗಿಸಲು ಕಡಿಮೆ
ವೆಚ್ಚದಲ್ಲಿ ಮಕ್ಕಳ ಭಾಗ್ಯ ಪಡೆಯಲು ಸಾಧ್ಯವಿದೆ. ಕನೇರಿ ಕಾಡಸಿದ್ದೇಶ್ವರ ಶ್ರೀಗಳು ತಮ್ಮ ಮಠದ ಆಸ್ಪತ್ರೆಯಿಂದ ಐವಿಎಫ್‌ ತಂತ್ರಜ್ಞಾನದಲ್ಲಿ ಪ್ರಣಾಳ ಶಿಶು (ಟೆಸ್ಟ್‌ ಟ್ಯೂಬ್‌ ಬೇಬಿ ಕೇಂದ್ರ) ಯೋಜನೆ ರೂಪಿಸಿದ್ದಾರೆ.

Advertisement

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಆಸ್ಪತ್ರೆಯ ಮಾಹಿತಿ ನೀಡಿದ ಕನೇರಿಮಠದ ಐವಿಎಫ್‌ ಕೇಂದ್ರದ ಮುಖ್ಯಸ್ಥೆ ಡಾ|ವರ್ಷಾ ಪಾಟೀಲ, ಜೂ.23ರಂದು ವಿಜಯಪುರ ನಗರದ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 4ರವರೆಗೆ ಉಚಿತ ತಪಾಸಣಾ ಶಿಬಿರ ನಡೆಯಲಿದೆ. ಜೂ.30ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಕಳೆದ ಎರಡೂವರೆ ವರ್ಷದ ಹಿಂದೆ ಮಹಾರಾಷ್ಟ್ರದ ಕನೇರಿ ಕಾಡಸಿದ್ದೇಶ್ವರ ಮಠದ ಜನನಿ ಬಂಜೆತನ ನಿವಾರಣೆ ಕೇಂದ್ರದಲ್ಲಿ
ಆಧುನಿಕ ತಂತ್ರಜ್ಞಾನದ ಐವಿಎಫ್‌ ಪದ್ಧತಿಯಲ್ಲಿ ಸಂತಾನ ಪಡೆಯುವ ಯೋಜನೆ ರೂಪಿಸಿದ್ದಾಗಿ ತಿಳಿಸಿದ್ದಾರೆ.

ಸಾಮಾನ್ಯವಾಗಿ ಐವಿಎಫ್‌ ಪ್ರಣಾಳ ಶಿಶು ಪದ್ಧತಿಯಲ್ಲಿ ಮಕ್ಕಳನ್ನು ಪಡೆಯುವ ಬಂಜೆತನ ಎದುರಿಸುವ ದಂಪತಿ 3-4 ಲಕ್ಷ ರೂ. ಮೀರಿದ ಭಾರಿ ವೆಚ್ಚದ ಚಿಕಿತ್ಸೆ ಪಡೆದರೂ ಮಕ್ಕಳನ್ನು ಪಡೆಯುವ ಸಾಫಲ್ಯತೆ ಪಡೆಯಲು ಸಾಧ್ಯವಾಗಿಲ್ಲ. ಆದರೆ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ, ಊಟ-ವಸತಿ, ವೈದ್ಯಕೀಯ ವೆಚ್ಚ, ಔಷಧ ಸೇರಿದಂತೆ ಸಂತಾನ ಭಾಗ್ಯ ಪಡೆಯುವವರೆಗೆ
ಕೇವಲ 75 ಸಾವಿರ ರೂ. ಖರ್ಚಿನಲ್ಲಿ ಪ್ರಣಾಳಶಿಶು ಯೋಜನೆ ಅನುಷ್ಠಾನ ಮಾಡಲಾಗಿದೆ ಎಂದು ವಿವರ ನೀಡಿದರು.

ಕಳೆದ ಒಂದು ವರ್ಷದಲ್ಲಿ ನಮ್ಮ ಜನನಿ ಆಸ್ಪತ್ರೆಯಲ್ಲಿ 150 ಪ್ರಣಾಳ ಶಿಶು ಚಿಕಿತ್ಸಾ ವಿಧಾನದಲ್ಲಿ ಈಗಾಗಲೇ 44 ಮಕ್ಕಳು ಜನಿಸಿವೆ. ಇನ್ನೂ 200ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪ್ರಣಾಳಶಿಶು ಅಳವಡಿಕೆ ಬಾಕಿ ಇದೆ. ಕೇಂದ್ರ ಸರ್ಕಾರದ ಕಾನೂನು ಅನ್ವಯ ಪ್ರಣಾಳ ಶಿಶು ಯೋಜನೆ ಅನುಷ್ಠಾನದ ಇಡಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಅನುಷ್ಠಾನ ಮಾಡುತ್ತಿದ್ದೇವೆ ಎಂದರು.

Advertisement

ಕನೇರಿ ಕಾಡಸಿದ್ದೇಶ್ವರ ಶ್ರೀಗಳು ಬಡವರು ಕಡಿಮೆ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನ ಸೌಲಭ್ಯದೊಂದಿಗೆ ಬಂಜೆತನ ನಿವಾರಣೆ
ಮಾಡಿಕೊಳ್ಳುವ ಯೋಜನೆ ರೂಪಿಸಲು ಮುಂದಾಗಿದ್ದರು. ಈ ಹಂತದಲ್ಲಿ ಕಳೆದ ಮೂರು ದಶಕಗಳ ಕಾಲ ಬಂಜೆತನ ನಿವಾರಣೆ ವೈದ್ಯಕೀಯ ಸೇವೆ ನೀಡಿರುವ ನಾನು ಶ್ರೀಗಳು ಬಡವರ ಪರ ಹೊಂದಿರುವ ಕಾಳಜಿಗೆ ಕೈಜೋಡಿಸಲು ಮುಂದಾಗಿದ್ದಾಗಿ ವಿವರಿಸಿದರು.

ಕೇವಲ 75 ಸಾವಿರ ರೂ. ವೆಚ್ಚದಲ್ಲಿ ಭಾರಿ ವೆಚ್ಚದ ಪ್ರಣಾಳ ಶಿಶು ಯೋಜನೆ ಮೂಲಕ ಬಂಜೆತನ ನಿವಾರಿಸುವುದು ಅಸಾಧ್ಯವೆಂದು ಅನುಮಾನ ವ್ಯಕ್ತಪಡಿಸುವ ಸಾಧ್ಯತೆ ಇಲ್ಲದಿಲ್ಲ. ಆದರೆ ತುಟ್ಟಿ ವೆಚ್ಚದ ಔಷಧಿಯನ್ನು ವಿಶೇಷ
ರಿಯಾಯ್ತಿ ದರದಲ್ಲಿ ನಮ್ಮ ಆಸ್ಪತ್ರೆಗೆ ಪೂರೈಸಲು ಔಷಧ ಪೂರೈಕೆ ಕಂಪನಿಗಳು ಮುಂದೆ ಬಂದಿದೆ. ಹೀಗಾಗಿ ಕಡಿಮೆ ವೆಚ್ಚದಲ್ಲಿ ಪ್ರಣಾಳ ಶಿಶು ವೈದ್ಯಕೀಯ ಸೇವೆ ನೀಡಲು ಸಾಧ್ಯವಾಗಿದೆ ಎಂದು ವಿವರಿಸಿದರು.

ಇದಲ್ಲದೇ ಮಾಜಿ ಸಚಿವೆ, ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ದಂಪತಿ ತಮ್ಮ ಸೇವಾ ಸಂಸ್ಥೆಗಳಿಂದ ಜನನಿ ಕೇಂದ್ರಕ್ಕೆ ನೆರವು ನೀಡಲು ಮುಂದೆ ಬಂದಿದ್ದಾರೆ. ಪರಿಣಾಮ ಸಾಮಾನ್ಯವಾಗಿ ಐವಿಎಫ್‌
ತಂತ್ರಜ್ಞಾನದಲ್ಲಿ ಮಕ್ಕಳನ್ನು ಪಡೆಯುವ ವೆಚ್ಚದಲ್ಲಿ ಶೇ.80 ಕಡಿಮೆ ಹಣದಲ್ಲಿ ಬಂಜೆತನ ನಿವಾರಣೆ ಸಾಧ್ಯವಾಗುತ್ತಿದೆ ಎಂದು ವಿವರ ನೀಡಿದರು.

ಆಧುನಿಕ ಜೀವನ ಶೈಲಿ, ಬದುಕಿನ ಒತ್ತಡಗಳಿಂದಾಗಿ ಯುವಜನರ ದೇಹದಲ್ಲಿ ಸಂತಾನೋತ್ಪತ್ತಿಗೆ ವ್ಯತಿರಿಕ್ತ ಪರಿಣಾಮ
ಉಂಟಾಗುತ್ತಿವೆ. ಹಲವು ಕಡೆಗಳಲ್ಲಿ ಬಂಜೆತನ ನಿವಾರವಣೆಗಾಗಿ ಹತ್ತಾರು ಲಕ್ಷ ರೂ. ವೆಚ್ಚ ಮಾಡಿ ನಮ್ಮ ಬಳಿಗೆ ಬಂದವರು ಕಡಿಮೆ ವೆಚ್ಚದಲ್ಲಿ ಮಕ್ಕಳನ್ನು ಪಡೆದಿದ್ದಾರೆ ಎಂದು ವಿವರಿಸಿದರು.

ತಮ್ಮ ಕೇಂದ್ರದಲ್ಲಿ ಕೇವಲ ಒಂದೂವರೆ ವರ್ಷದಲ್ಲಿ ಶೇ.75ಕ್ಕಿಂತ ಹೆಚ್ಚು ಯಶಸ್ಸು ಹೊಂದಿದ್ದು, ಆಯುರ್ವೇದ ಹಾಗೂ
ಅಲೋಪತಿ ಎರಡೂ ರೀತಿಯ ವೈದ್ಯಕೀಯ ಪದ್ಧತಿ ಚಿಕಿತ್ಸಾ ವಿಧಾನ ಅನುಸರಿಸುತ್ತಿರುವುದಾಗಿ ಹೇಳಿದರು.

ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಶ್ರೀಗಳು, ಬುರಣಾಪುರದ ಯೋಗೇಶ್ವರಿ ಮಾತಾಜಿ, ಜೆಎಸ್‌ಎಸ್‌ ಆಸ್ಪತ್ರೆಯ ವೈದ್ಯ ಡಾ.ಸಂತೋಷ ತುಮಕೂರು ಮಾತನಾಡಿದರು. ಬಂಜೆತನ ನಿವಾರಣೆಗಾಗಿ ಉಚಿತ ತಪಾಸಣಾ ಶಿಬಿರದ
ಮಾಹಿತಿಗಾಗಿ ಐವಿಎಫ್‌ ಯೋಜನೆಯಲ್ಲಿ ಕನೇರಿ ಜನನಿ ಪ್ರಣಾಳ ಶಿಶು ಕೇಂದ್ರದ ಮೊ.7070191008, ದೂ.0231-2671774
ಸಂಖ್ಯಗೆ ಸಂಪರ್ಕಿಸುವಂತೆ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next