Advertisement
ಅಲ್ತಾಫ್ ಖಾನ್ ಸೋಮವಾರ ಜೆಡಿಎಸ್ ಸೇರಿದ್ದು, ಪಕ್ಷದ ಧ್ವಜ ನೀಡುವ ಮೂಲಕ ಬರಮಾಡಿಕೊಂಡ ಮಾಜಿ ಪ್ರಧಾನಿ ದೇವೇಗೌಡ, ಚಾಮರಾಜಪೇಟೆ ಕ್ಷೇತ್ರದಿಂದ ಅಲ್ತಾಫ್ ಖಾನ್ ಅವರೇ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಇನ್ನೊಂದೆಡೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಜೆಡಿಎಸ್ ಪಾಲಿಕೆ ಸದಸ್ಯ ಇಮ್ರಾನ್ ಪಾಷ ಅವರನ್ನೂ ಸಮಾಧಾನಪಡಿಸಿದ್ದಾರೆ.
Related Articles
Advertisement
ಟಿಕೆಟ್ ಆಕಾಂಕ್ಷಿಯಾಗಿದ್ದ ಇಮ್ರಾನ್ ಪಾಷ ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷಆರ್.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಜಮೀರ್ ವಿರುದ್ಧ ಅಲ್ತಾಫ್ ವಾಗ್ಧಾಳಿ: “ಅವರು ದೇವೇಗೌಡರನ್ನು ತಂದೆ ಎಂದರು. ಜೆಡಿಎಸ್ ಪಕ್ಷ ತನ್ನ ತಾಯಿ ಎಂದರು. ಆದರೆ ಈಗ ಅದೇ ತಂದೆ, ತಾಯಿಯನ್ನು ಬಿಟ್ಟು ಹೋಗಿದ್ದಾರೆ. ಇಂಥವರು ಕ್ಷೇತ್ರದ ಜನರಿಗೆ ನಿಷ್ಠರಾಗಿರುತ್ತಾರೆ ಎಂದು ಏನು ಗ್ಯಾರಂಟಿ?’ ಎನ್ನುವ ಮೂಲಕ ಅಲ್ತಾಫ್ ಖಾನ್, ಮಾಜಿ ಶಾಸಕ ಜಮೀರ್ ಅಹಮದ್ ವಿರುದ್ಧ ಕಿಡಿ ಕಾರಿದರು.
ಜೆ.ಪಿ.ಭವನದಲ್ಲಿ ಸೋಮವಾರ ಜೆಡಿಎಸ್ ಸೇರಿದ ನಂತರ ಮಾತನಾಡಿದ ಅಲ್ತಾಫ್ ಖಾನ್, “ಜೆಡಿಎಸ್ ತಾಯಿ ಎಂದು ಹೇಳುತ್ತಲೇ ಮೋಸ ಮಾಡಿದವರಿಗೆ ದೇವರು ಪಾಠ ಕಲಿಸುತ್ತಾನೆ,’ ಎಂದರು.
ಸಿಕ್ಕವರಿಗೆಲ್ಲಾ ಕಿಸ್ ಕೊಡ್ತಾರೆ!: “ಜಮೀರ್ ಈಗ ಸಿಕ್ಕ ಸಿಕ್ಕವರಿಗೆ ಕಿಸ್ ಕೊಡುವುದನ್ನು ರೂಢಿಸಿಕೊಂಡಿದ್ದಾರೆ. ಅವರದ್ದು ಎಂತಹ ನಡತೆ ಎಂದರೆ ಸಿಕ್ಕಿದರೆ ಕಿಸ್, ಇಲ್ಲವೆಂದರೆ ಆರು ತಿಂಗಳು ಮಿಸ್. ಇಂತಹ ಕಿಸ್ ಮಿಸ್ ಶಾಸಕರು ನಮ್ಮ ಕ್ಷೇತ್ರದಲ್ಲಿದ್ದರು. ಅವರಿಗೆ ನಾನು ಚಾಲೆಂಜ್ ಮಾಡುತ್ತೇನೆ. ನಾನು ಚಾಮರಾಜಪೇಟೆಯ ಮಣ್ಣಿನ ಮಗ.
ನೀನು ನಾಲ್ಕೂವರೆ ಅಡಿ ಇದೀಯಾ, ನಾನು ಆರು ಅಡಿಗೆ ಒಂದಿಂಚು ಕಮ್ಮಿ. ಆರಡಿ ದೊಡ್ಡದೋ, ನಾಲ್ಕೂವರೆ ಅಡಿ ದೊಡ್ಡದೋ ಚುನಾವಣೆಯಲ್ಲಿ ನೋಡೇ ಬಿಡೋಣ ಎಂದು,’ ಸವಾಲು ಹಾಕಿದರು. “ಕಚೇರಿ ತೆರೆಯಲು ಬಾಡಿಗೆ ನಂದು, ಅಡ್ವಾನ್ಸ್ ನಂದು. ನಿನ್ನ ಕೈ ಹಿಡೀತೀನಿ, ಕಾಲು ಹಿಡೀತೀನಿ, ನನ್ನ ಪರವಾಗಿ ಕೆಲಸ ಮಾಡು’ ಎಂದು ಜಮೀರ್ ಅಹಮದ್ ಬೇಡಿಕೊಂಡ ವೀಡಿಯೋ ನನ್ನಲ್ಲಿದೆ. ಅದನ್ನು ಬಿಡುಗಡೆ ಮಾಡುತ್ತೇನೆ.
ನೀನು (ಜಮೀರ್ ಅಹಮದ್) 300 ಕೋಟಿ ರೂ. ಹೇಗೆ ಮಾಡಿದೆ, ಬಡವರ ಹತ್ತು ಅಂಗಡಿ ಮಾರಾಟ ಮಾಡಿದ್ದು ಸೇರಿ ಎಲ್ಲ ದಾಖಲೆ ನನ್ನ ಬಳಿ ಇದ್ದು ಅದನ್ನೂ ಬಿಡುಗಡೆ ಮಾಡುತ್ತೇನೆ. ಅದೇ ರೀತಿ ಅಖಂಡ ಶ್ರೀನಿವಾಸ ಮೂರ್ತಿ ಯಾರಧ್ದೋ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿರುವ ದಾಖಲೆಯೂ ಇದ್ದು, ಅದನ್ನೂ ಬಹಿರಂಗಗೊಳಿಸುತ್ತೇನೆ ಎಂದು ಹೇಳಿದರು.