ಬೆಂಗಳೂರು: ಸಚಿವ ಜಮೀರ್ ಅಹಮದ್ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿರುವುದು ರಾಜಕೀಯ ವಲಯಗಳಲ್ಲಿ ಕುತೂಹಲ ಮೂಡಿಸಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಕುಟಂಬದ ಬಗ್ಗೆ ರಾಜಕೀಯ ವಾಗ್ಧಾಳಿ ನಡೆಸಿದ್ದ ಜಮೀರ್ ಬಹುಕಾಲದ ನಂತರ ಮತ್ತೆ ಗೌಡರನ್ನು ಭೇಟಿಯಾಗಿದ್ದಾರೆ.
ಗುರುವಾರ ಬೆಳಗ್ಗೆ ಪದ್ಮನಾಭನಗರ ನಿವಾಸಕ್ಕೆ ಆಗಮಿಸಿದ ಜಮೀರ್ ಅಹಮದ್ ದೇವೇಗೌಡರ ಜತೆ ಕೆಲಹೊತ್ತು ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದು ಕಾಂಗ್ರೆಸ್ ಹಾಗೂ ಜೆಡಿಎಸ್ ವಲಯದಲ್ಲಿ ನಾನಾ ರೀತಿಯ ವಿಶ್ಲೇಷಣಗಳಿಗೆ ಕಾರಣವಾಗಿದೆ. ಭೇಟಿ ಸಂದರ್ಭದಲ್ಲಿ ಟಿಪ್ಪು ಜಯಂತಿ ಆಚರಣೆ, ಉಪ ಚುನಾವಣೆ ಫಲಿತಾಂಶ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು ಎಂದು ಹೇಳಲಾಗಿದೆ.
ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ನಂತರ ರಾಜಕೀಯವಾಗಿಯೂ ದೂರ ಆಗಿದ್ದ ಜಮೀರ್ ಅಹಮದ್ ಇತ್ತೀಚೆಗೆ ನಡೆದ ಉಪ ಚುನಾವಣೆ ಸಂದರ್ಭದಲ್ಲಿ ರಾಮನಗರ, ಮಂಡ್ಯ ಸೇರಿದಂತೆ ಐದು ಕ್ಷೇತ್ರಗಳ ಜಂಟಿ ಪ್ರಚಾರ ಸಂದರ್ಭದಲ್ಲಿ ದೇವೇಗೌಡರು ಕುಮಾರಸ್ವಾಮಿ ಜತೆ ಕಾಣಿಸಿಕೊಂಡಿದ್ದರು. ಅದಾದ ನಂತರ ಇಂದು ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದರು.
ದೇವೇಗೌಡರ ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಜಮೀರ್ ಅಹಮದ್, ದೇವೇಗೌಡರು ನಮ್ಮ ನಾಯಕರು. ದೀಪಾವಳಿ ಶುಭಾಶಯ ಕೋರಲು ಬಂದಿದೆ. ರಾಜಕೀವಯ ವಿದ್ಯಮಾನ ಸೇರಿ ಹಲವು ವಿಚಾರ ಚರ್ಚಿಸಿದೆವು. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ. ಬಿಜೆಪಿ ದೂರ ಇಡುವುದು ನಮ್ಮ ಗುರಿ ಎಂದು ಹೇಳಿದರು.
ಜೆಡಿಎಸ್ ಮೂಲಕ ರಾಜಕೀಯ ಪ್ರವೇಶಿಸಿ ಉಪ ಚುನಾವಣೆ ಸೇರಿ ಮೂರು ಬಾರಿ ಶಾಸಕರೂ ಆಗಿದ್ದ ಜಮೀರ್ ಅಹಮದ್ ಎಚ್.ಡಿ.ಕುಮಾರಸ್ವಾಮಿ ಹಾಗೂ ದೇವೇಗೌಡರ ಕುಟುಂಬಕ್ಕೆ ಆಪ್ತರಾಗಿದ್ದರು. ಆದರೆ, ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರಿಂದ ಪಕ್ಷದಿಂದ ಅಮಾನತು ಮಾಡಲಾಗಿತ್ತು. ಆ ನಂತರ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿ ಸಿದ್ದರಾಮಯ್ಯ ಅವರ ಜತೆ ಗುರುತಿಸಿಕೊಂಡಿದ್ದರು.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಜೆಡಿಎಸ್ ವಿರುದ್ಧ ವಾಗ್ಧಾಳಿ ನಡೆಸಿದ್ದ ಅವರು ನಂತರ ನಡೆದ ಬೆಳವಣಿಗೆಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡಬೇಕಾದ ಆನಿವಾರ್ಯತೆ ಉಂಟಾದಾಗ ಕುಮಾರಸ್ವಾಮಿ ಸಂಪುಟದಲ್ಲಿ ಕಾಂಗ್ರೆಸ್ ಕೋಟಾದಡಿ ಸಚಿವ ಸ್ಥಾನ ಸಹ ಪಡೆದರು.ಬಿಜೆಪಿ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಹೋರಾಟ. ಹೀಗಾಗಿ, ಸಮ್ಮಿಶ್ರ ಸರ್ಕಾರ ರಚನೆ ತಪ್ಪಲ್ಲ ಎಂದು ಸಮರ್ಥಿಸಿಕೊಂಡಿದ್ದರು.