ಬೆಂಗಳೂರು: ಯುವರಾಜ್ ನನ್ನ ತಂದೆ ಕಾಲದಿಂದಲೂ ನಮ್ಮ ಕುಟುಂಬದ ಗೆಳೆಯರು, ಜ್ಯೋತಿಷಿ ಆಗಿದ್ದರು. ಸುಮಾರು 17 ವರ್ಷದಿಂದ ನಮಗೆ ಪರಿಚಯ ಇದೆ. ನನ್ನ ಅಣ್ಣನಿಗೂ, ಯುವರಾಜ್ ಗೂ ಯಾವುದೇ ಸಂಬಂಧವಿಲ್ಲ…ಇದು ಬಂಧಿತ ಯುವರಾಜ್ ಜತೆಗಿನ ವ್ಯಾವಹಾರಿಕ ಸಂಬಂಧದ ಆರೋಪದ ಕುರಿತು ಸ್ಯಾಂಡಲ್ ವುಡ್ ನಟಿ ರಾಧಿಕಾರ ಕುಮಾರಸ್ವಾಮಿ ಬುಧವಾರ(ಜನವರಿ 06, 2021) ನೀಡಿರುವ ಪ್ರತಿಕ್ರಿಯೆ.
ರಾಜಕಾರಣಿಗಳ ಹೆಸರಿನಲ್ಲಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪದಲ್ಲಿ ಯುವರಾಜ್ ನನ್ನು ಸಿಸಿಬಿ ಬಂಧಿಸಿತ್ತು. ವಿಚಾರಣೆ ವೇಳೆ ನಟಿ ರಾಧಿಕಾ ಅವರ ಖಾತೆಗೆ ಒಂದೂವರೆ ಕೋಟಿ ವರ್ಗಾವಣೆಯಾಗಿರುವ ಬಗ್ಗೆ ತಿಳಿಸಿರುವುದಾಗಿ ವರದಿಯಾಗಿತ್ತು.
ಪತ್ರಿಕಾಗೋಷ್ಠಿಯಲ್ಲಿ ರಾಧಿಕಾಕುಮಾರಸ್ವಾಮಿ ಹೇಳಿದ್ದಿಷ್ಟು:
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಧಿಕಾ, ನಮ್ಮ ತಂದೆ ನಿಧನದ ನಂತರ ನಾವು ದೆಹಲಿಯಲ್ಲಿದ್ದೇವು. ಎಲ್ಲಿಗೂ ಓಡಿ ಹೋಗಿಲ್ಲ. ನಮ್ಮ ಕುಟುಂಬದ ಪರಿಚಯದವರಾಗಿದ್ದರಿಂದ ಅವರ ಪತ್ನಿಯ ಹೆಸರಿನಲ್ಲಿರುವ ಪ್ರೊಡಕ್ಷನ್ ಹೌಸ್ ನಿಂದ ತಯಾರಾಗುವ ಸಿನಿಮಾವೊಂದರಲ್ಲಿ ನಟಿಸುವಂತೆ ಕೇಳಿಕೊಂಡಿದ್ದರು.
ಅದಕ್ಕಾಗಿ ಅವರು ನನ್ನ ಖಾತೆಗೆ ಮೊದಲು 15 ಲಕ್ಷ ರೂಪಾಯಿ ಹಾಕಿದ್ದರು. ನಂತರ ಬೇರೆ ನಿರ್ಮಾಪಕರೊಬ್ಬರ ಖಾತೆಯಿಂದ 60 ಲಕ್ಷ ರೂಪಾಯಿ ಹಣ ಬಂದಿದೆ. ಯುವರಾಜ್ ಕೊಟ್ಟಿದ್ದು ಒಂದೂವರೆ ಕೋಟಿ ಅಲ್ಲ, 15 ಲಕ್ಷ ರೂಪಾಯಿ ಅಡ್ವಾನ್ಸ್ ಹಣ ಮಾತ್ರ ಕೊಟ್ಟಿದ್ದಾರೆ ಎಂದು ರಾಧಿಕಾ ಹೇಳಿದರು. 2020ರ ಫೆಬ್ರುವರಿ, ಮಾರ್ಚ್ ನಲ್ಲಿ ನನಗೆ ಈ ಹಣ ಬಂದಿದೆ. ಒಂದು ಖಾತೆಯಿಂದ ನೇರವಾಗಿ ಹಣ ಬಂದಿದ್ದರಿಂದ ನಾನು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಯುವರಾಜ್ ಬಂಧನವಾದಾಗ ಶಾಕ್ ಆಗಿತ್ತು.
ಸಿನಿಮಾಕ್ಕೆ ಎಷ್ಟು ಸಂಭಾವನೆ ಅಂತ ಕೇಳಿದ್ದರು, ನಾನು ದಿನಾಂಕದ ಮೇಲೆ ಅವಲಂಬಿಸಿರುತ್ತದೆ ಎಂದು ಹೇಳಿದ್ದೆ. ನಾನು ಪ್ರಾಮಾಣಿಕಳಾಗಿದ್ದಾಗ ಹೆದರುವ ಅಗತ್ಯವಿಲ್ಲ. ಸಿನಿಮಾ ಬಿಟ್ಟು ಯುವರಾಜ್ ಜತೆ ಬೇರೆ ಯಾವುದೇ ವ್ಯವಹಾರ ಇರಲಿಲ್ಲವಾಗಿತ್ತು ಎಂದು ರಾಧಿಕಾ ಸ್ಪಷ್ಟನೆ ನೀಡಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವಂತೆ ನನ್ನಲ್ಲಿ ಕೇಳಿಕೊಂಡಿದ್ದರು. ಆದರೆ ರಾಜಕೀಯಕ್ಕೆ ಬರುವುದಿಲ್ಲ, ಸಿನಿಮಾದಲ್ಲಿ ನಟಿಸುವುದಾಗಿ ಹೇಳಿದ್ದರಿಂದ, ತಮ್ಮ ಪ್ರೊಡಕ್ಷನ್ ಹೌಸ್ ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡಿದ್ದರು. ಅವರ ಸಹವಾಸ ನನಗೆ ಬೇಡ, ಆದರೆ ನಮ್ಮ ತಾಯಿ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ ಎಂದರು.
ಕೇವಲ ಮಾತಿನ ಮೇಲೆ ನಾಟ್ಯ ರಾಣಿ ಶಾಂತಲಾ ಸಿನಿಮಾ ಮಾಡಲು ಒಪ್ಪಿಕೊಂಡಿದ್ದೆ, ಯಾವುದೇ ಒಪ್ಪಂದ ಮಾಡಿಕೊಂಡಿರಲಿಲ್ಲವಾಗಿತ್ತು. ಇವರಿಂದಲೇ ಹೀಗೆ ಮೋಸವಾಗುತ್ತೆ ಎಂದು ಭಾವಿಸಿರಲಿಲ್ಲ ಎಂದು ಹೇಳಿದರು.