Advertisement

ವೃದ್ಧನಿಗೆ ಊಟ ಕೊಟ್ಟ ಪೊಲೀಸರು

10:05 PM Apr 04, 2020 | Sriram |

ಚಂಡೀಗಢ: ದೇಶ ಸಂಕಷ್ಟದಲ್ಲಿದೆ. ದಿನೇದಿನೇ ನಮ್ಮೆದುರು ನಿಂತಿರುವ ಕೋವಿಡ್ 19ಎಂಬ ಸವಾಲು ದೊಡ್ಡದಾಗುತ್ತಲೇ ಇದೆ. ಇಂತಹ ಹೊತ್ತಿನಲ್ಲಿ ದೊಡ್ಡವರು ಸಣ್ಣವರೆನ್ನದೇ ಜನ ತೋರುತ್ತಿರುವ ದೊಡ್ಡತನ, ನಮ್ಮ ಕಣ್ಣಾಲಿಗಳನ್ನು ತೇವಗೊಳಿಸುತ್ತದೆ. ಭಾರತದ ಮಾಜಿ ಕ್ರಿಕೆಟಿಗರಾದ ಯುವರಾಜ್‌ ಹಾಗೂ ಹರ್ಭಜನ್‌ ಸಿಂಗ್‌ ಅಂತಹ ಒಂದೆರಡು ಘಟನೆಗಳನ್ನು ಟ್ವೀಟ್‌ ಮಾಡಿದ್ದಾರೆ.

Advertisement

ಪ್ರಸ್ತುತ ಕೋವಿಡ್ 19ವನ್ನು ಎದುರಿಸುತ್ತಿರುವ ದೊಡ್ಡ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಕಾದಾಡುತ್ತಿರುವವರು ವೈದ್ಯರು, ದಾದಿಯರು. ಅವರನ್ನು ಬಿಟ್ಟರೆ, ಪೊಲೀಸರದ್ದೇ ದೊಡ್ಡ ಕೊಡುಗೆ. ಹಗಲುರಾತ್ರಿಯೆನ್ನದೇ ತಮ್ಮ ಆರೋಗ್ಯದ ಕಾಳಜಿಯನ್ನೂ ಮಾಡದೇ ಪೊಲೀಸರು ಜನರು ರಸ್ತೆಗಿಳಿಯದಂತೆ ಇಡೀ ದೇಶಾದ್ಯಂತ ಪ್ರಯತ್ನಿಸುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಸ್ವತಃ ಅವರೇ ಊಟ ಮಾಡಿರುತ್ತಾರೆ ಎಂಬ ಖಾತ್ರಿಯಿಲ್ಲ. ಅಥವಾ ಅವರು ಯಾವೆಲ್ಲ ಆರೋಗ್ಯದ ಸಮಸ್ಯೆಯ ನಡುವೆ ಹೋರಾಡುತ್ತಾರೋ ಗೊತ್ತಿಲ್ಲ. ಅದರ ಮಧ್ಯೆ ಯುವರಾಜ್‌ ಈ ಘಟನೆ ವಿವರಿಸಿದ್ದಾರೆ.

ಏನದು ಘಟನೆ ?
ಈ ಘಟನೆ ಉತ್ತರ ಭಾರತದಲ್ಲಿ ನಡೆದಿದೆ. ಎಂದಿನಂತೆ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿದ್ದ ಕೆಲ ಪೊಲೀಸರು, ರಸ್ತೆ ಬದಿ ಅಶಕ್ತರಾಗಿ ಕುಳಿತಿದ್ದ ವೃದ್ಧರೊಬ್ಬರಿಗೆ (ಬಹುಶಃ ಭಿಕ್ಷುಕ) ಬೈಕ್‌ನಲ್ಲಿ ತಮಗಾಗಿ ಇಟ್ಟುಕೊಂಡಿದ್ದ ಊಟವನ್ನು ನೀಡಿದ್ದಾರೆ. ಕುಡಿಯಲು ನೀರೂ ಕೊಟ್ಟಿದ್ದಾರೆ. ಅವರೇನು ಸಾಮಾಜಿಕ ತಾಣದಲ್ಲಿ ಹಾಕಬೇಕು, ಜನಪ್ರಿಯರಾಗಬೇಕೆಂಬ ಉದ್ದೇಶದಿಂದ ಹೀಗೆ ಮಾಡಿಲ್ಲ. ಅದು ಅವರ ಚರ್ಯೆಗಳಿಂದಲೇ ತಿಳಿಯುತ್ತದೆ. ಒಂದು ಮನುಷ್ಯಸಹಜ ಮುಗ್ಧತೆ ಅಲ್ಲಿ ಕಾಣುತ್ತಿದೆ. ಅದನ್ನು ಯುವಿ ಕೂಡ ಕೊಂಡಾಡಿದ್ದಾರೆ.

ವೃದ್ಧೆಗೆ ನೆರವಾದ ಆ ವ್ಯಕ್ತಿ ಉಳಿದವರಿಗೆ ಸ್ಫೂರ್ತಿ
ಈ ಘಟನೆಯನ್ನು ಹೇಳಿದ್ದು ಇನ್ನೊಬ್ಬ ಕ್ರಿಕೆಟಿಗ ಹರ್ಭಜನ್‌ ಸಿಂಗ್‌. ಇದು ಬಹುಶಃ ಪಂಜಾಬ್‌ನಲ್ಲಿ ನಡೆದಿದ್ದು. ಸಿಖ್‌ ವ್ಯಕ್ತಿಯೊಬ್ಬ ಕೋವಿಡ್ 19 ದಿಂದ ತತ್ತರಿಸಿರುವ ಅಜ್ಜಿಯೊಬ್ಬರಿಗೆ ಒಂದಷ್ಟು ಸಹಾಯ ಮಾಡಿದ್ದಾರೆ. ಈ ಪರಿಸ್ಥಿತಿಯಲ್ಲಿ ಸ್ವಲ್ಪ ಹಣ ಕೊಟ್ಟು, ಆಕೆಯನ್ನು ತಬ್ಬಿಕೊಂಡು ಸಂತೈಸಿದ್ದಾರೆ. ಈ ದಾರುಣ ಸ್ಥಿತಿಯಲ್ಲಿ ಜನರಿಗೆ ನಮ್ಮವರು ಅಂತ ಬೇಕಾಗುತ್ತದೆ. ನಮ್ಮ ದುಃಖವನ್ನು ಕೇಳಬಲ್ಲ, ನಮಗೆ ಸ್ಪಂದಿಸಬಲ್ಲ ವ್ಯಕ್ತಿಗಳ ನಿರೀಕ್ಷೆಯಲ್ಲಿರುತ್ತಾರೆ. ಅದರಲ್ಲೂ ಅಶಕ್ತರು, ವೃದ್ಧರು ಬಹುತೇಕ ಏಕಾಂಗಿಗಳಾಗಿರುತ್ತಾರೆ. ಅಜ್ಜಿಯನ್ನು ಸಂತೈಸಿದ ಆ ಸಿಖ್‌ ವ್ಯಕ್ತಿ ದೇಶದ ಕೋಟ್ಯಂತರ ಜನರಿಗೆ ಸ್ಫೂರ್ತಿ.

Advertisement

Udayavani is now on Telegram. Click here to join our channel and stay updated with the latest news.

Next