ಹೊಸದಿಲ್ಲಿ: “ವರ್ಲ್ಡ್ ಲೆಫ್ಟ್ ಹ್ಯಾಂಡರ್ ಡೇ’ಯಾದ ಗುರುವಾರ ಭಾರತೀಯ ಕ್ರಿಕೆಟ್ ಹೀರೋ ಯುವರಾಜ್ ಸಿಂಗ್ ವಿಶ್ವದ ಎಡಗೈ ಸಾಧಕರಿಗೆ ಗೌರವ ಸಲ್ಲಿಸಿದ್ದಾರೆ. ಸ್ವತಃ ಲೆಫ್ಟ್ ಹ್ಯಾಂಡ್ ಬ್ಯಾಟ್ಸ್‌ಮನ್ ಆಗಿರುವ ಯುವರಾಜ್, ಈ ಸಂದರ್ಭದಲ್ಲಿ ತನ್ನೊಂದಿಗೆ ಆಡಿದ ನಾಲ್ಕು ಮಂದಿ ನೆಚ್ಚಿನ ಎಡಗೈ ಕ್ರಿಕೆಟಿಗರನ್ನು ಹೆಸರಿಸಿದ್ದಾರೆ. ಇವರೆಂದರೆ ವೆಸ್ಟ್ ಇಂಡೀಸಿನ ಬ್ರಿಯಾನ್ ಲಾರಾ, ಆಸ್ಟ್ರೇಲಿಯದ ಆ್ಯಡಂ ಗಿಲ್‌ಕ್ರಿಸ್ಟ್, ಮ್ಯಾಥ್ಯೂ ಹೇಡನ್ ಮತ್ತು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ.
“ಕ್ರಿಕೆಟಿನ ಖ್ಯಾತ ಎಡಗೈ ಸಾಧಕರಿಗೆ ನನ್ನ ಕಡೆಯಿಂದ ಗೌರವವನ್ನು ಸಮರ್ಪಿಸುತ್ತಿದ್ದೇನೆ. ಈ ಗೋಲ್ಡನ್ ಲಿಸ್ಟ್‌ಗೆ ನಿಮ್ಮ ನೆಚ್ಚಿನ ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಸೇರಿಸಿ ನನ್ನೊಂದಿಗೆ ಹಂಚಿಕೊಳ್ಳಿ’ ಎಂಬುದಾಗಿ ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.