ಮುಂಬೈ: ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಗೆ (IPL) ಮರಳುವುದು ಬಹುತೇಕ ಖಚಿತವಾಗಿದೆ. ಆಟಗಾರನಾಗಿ ಹಲವು ಸೀಸನ್ ಆಡಿದ್ದ ಯುವರಾಜ್ ಈ ಬಾರಿ ಕೋಚ್ (Coach) ಆಗಿ ಮರಳಲಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕೆಲ ದಿನಗಳ ಹಿಂದೆಯೇ ಸುದ್ದಿಯಾಗಿತ್ತು. ಗುಜರಾತ್ ಟೈಟಾನ್ಸ್ (Gujarat Titans) ತಂಡಕ್ಕೆ ಆಶಿಶ್ ನೆಹ್ರಾ ಬದಲಿಗೆ ಯುವರಾಜ್ ಸಿಂಗ್ ಅವರು ಕೋಚ್ ಆಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಆದರೆ ಇದೀಗ ಯುವಿ ಈ ಹಿಂದೆ ಆಡಿದ್ದ ತಂಡಕ್ಕೆ ಕೋಚ್ ಆಗಲಿದ್ದಾರೆ ಎನ್ನಲಾಗಿದೆ.
ರಿಷಭ್ ಪಂತ್ ಅವರು ನಾಯಕರಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚಿಂಗ್ ಹುದ್ದೆಗೆ ಯುವರಾಜ್ ಸಿಂಗ್ ಅವರನ್ನು ಪರಿಗಣಿಸಲಾಗಿದೆ ಎಂದು ವರದಿಯಾಗಿದೆ. ಕಳೆದ ಆರು ಸೀಸನ್ ಗಳಲ್ಲಿ ಕೋಚ್ ಆಗಿದ್ದ ಆಸೀಸ್ ದಿಗ್ಗಜ ರಿಕಿ ಪಾಂಟಿಂಗ್ ಅವರನ್ನು ಈ ಬಾರಿ ಫ್ರಾಂಚೈಸಿ ಹುದ್ದೆಯಿಂದ ಕೆಳಕ್ಕಿಳಿಸಿತ್ತು.
ಸೌರವ್ ಗಂಗೂಲಿ ಅವರನ್ನು ಡೆಲ್ಲಿ ಸಹ ಸಹಾಯಕ ಸಿಬ್ಬಂದಿಯ ಭಾಗವಾಗಿ ಹೊಂದಿದ್ದರೂ, ಅವರು ಹೊಸ ಸೀಸನ್ ಆರಂಭದ ಮೊದಲು ಪಾಂಟಿಂಗ್ ಗೆ ಬದಲಿಯಾಗಿ ವೈಟ್-ಬಾಲ್ ಕ್ರಿಕೆಟ್ ನಲ್ಲಿ ಭಾರತದ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳಲ್ಲಿ ಒಬ್ಬರಾದ ಯುವರಾಜ್ ಸಿಂಗ್ ಅವರನ್ನು ನೇಮಿಸಿಕೊಳ್ಳಲು ಬಯಸುತ್ತಿದೆ ಎಂದು ವರದಿಯಾಗಿದೆ.
ಶುಭಮನ್ ಗಿಲ್, ಅಭಿಷೇಕ್ ಶರ್ಮಾ ಅವರಂತಹ ಆಟಗಾರರು ಉನ್ನತ ಮಟ್ಟಕ್ಕೇರಲು ಸಹಾಯ ಮಾಡಿರುವ ಯುವರಾಜ್ ಸಿಂಗ್ ಅವರ ಹೆಸರು ಇದೀಗ ಪ್ರಮುಖವಾಗಿ ಕೇಳಿ ಬರುತ್ತಿದೆ.
ಈ ಹಿಂದಿನ ವರದಿಗಳಿಗೆ ವಿರುದ್ದವಾಗಿ ಆಶಿಶ್ ನೆಹ್ರಾ ಅವರು ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಜತೆಗೆ ಮುಂದುವರಿಯಲಿದ್ದಾರೆ ಎಂದು ವರದಿ ಹೇಳಿದೆ.