ಮುಂಬೈ: ಐಪಿಎಲ್ ಮೆಗಾ ಹರಾಜಿಗೆ (IPL Mega Auction) ಇನ್ನು ಕೇವಲ ಒಂದು ತಿಂಗಳು ಬಾಕಿ ಉಳಿದಿದೆ. ಎಲ್ಲಾ ಫ್ರಾಂಚೈಸಿಗಳು ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಹಿರಂಗ ಮಾಡಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಅದರ ನಡುವೆ ಹೆಚ್ಚು ಕುತೂಹಲಕ್ಕೆ ಕಾರಣವಾಗಿರುವುದು 43 ವರ್ಷದ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಮುಂದಿನ ಸೀಸನ್ ಆಡುತ್ತಾರಾ ಎನ್ನುವ ಬಗ್ಗೆ.
ಇತ್ತೀಚೆಗೆ ಈ ಬಗ್ಗೆ ಮಾತನಾಡಿದ್ದ ಸಿಎಸ್ ಕೆ ಸಿಎಓ ವಿಶ್ವನಾಥನ್ ಅವರು, “ಮಹೇಂದ್ರ ಸಿಂಗ್ ಧೋನಿ ಅವರು ಮುಂದುವರಿಯುವ ಬಗ್ಗೆ ಇನ್ನೂ ಖಚಿತ ಮಾಹಿತಿ ನೀಡಿಲ್ಲ” ಎಂದಿದ್ದರು.
ಇದರ ಮಧ್ಯೆ ಸಾಫ್ಟ್‌ವೇರ್ ಬ್ರಾಂಡ್ ರಿಗಿಯ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಧೋನಿ, “ಉಳಿದಿರುವ ಕೆಲವು ವರ್ಷಗಳ ಕ್ರಿಕೆಟನ್ನು ಆನಂದಿಸಲು ನಾನು ಬಯಸುತ್ತೇನೆ” ಎಂದು ಹೇಳಿದ್ದು ಮತ್ತೆ ಕುತೂಹಲಕ್ಕೆ ಕಾರಣವಾಗಿದೆ.
“ನೀವು ಕ್ರಿಕೆಟ್ ಅನ್ನು ವೃತ್ತಿಪರ ಕ್ರೀಡೆಯಂತೆ ಆಡಿದಾಗ, ಅದನ್ನು ಕೇವಲ ಆಟದಂತೆ ಆನಂದಿಸುವುದು ಕಷ್ಟವಾಗುತ್ತದೆ. ಅದನ್ನೇ ನಾನು ಮಾಡಲು ಬಯಸುತ್ತೇನೆ. ಇದು ಸುಲಭವಲ್ಲ. ಭಾವನೆಗಳು ಬರುತ್ತಲೇ ಇರುತ್ತವೆ, ಬದ್ಧತೆಗಳು ಇವೆ. ಮುಂದಿನ ಕೆಲವು ವರ್ಷಗಳ ಕಾಲ ನಾನು ಆಟವನ್ನು ಆನಂದಿಸಲು ಬಯಸುತ್ತೇನೆ” ಎಂದು ಧೋನಿ ಹೇಳಿದರು.
ಧೋನಿ ಅವರ ಮುಂದಿನ ಮಾತುಗಳು ಐಪಿಎಲ್ ಆಟ ಖಂಡಿತವಾಗಿಯೂ ಅವರ ಮನಸ್ಸಿನಲ್ಲಿದೆ ಎಂಬುದನ್ನು ಇನ್ನಷ್ಟು ಸ್ಪಷ್ಟಪಡಿಸಿದೆ.
“ನಾನು ಒಂಬತ್ತು ತಿಂಗಳ ಕಾಲ ನನ್ನನ್ನು ಫಿಟ್ ಆಗಿಟ್ಟುಕೊಳ್ಳಬೇಕು, ಇದರಿಂದ ನಾನು ಎರಡೂವರೆ ತಿಂಗಳ ಐಪಿಎಲ್‌ನಲ್ಲಿ ಆಡಬಹುದು. ನೀವು ಅದರ ಬಗ್ಗೆ ಯೋಜನೆ ಹಾಕಿಕೊಂಡಿರಬೇಕಾಗುತ್ತದೆ” ಎಂದು ಧೋನಿ ಹೇಳಿದರು.
ಐದು ವರ್ಷಗಳ ಹಿಂದೆ ಟೀಮ್ ಇಂಡಿಯಾಗೆ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರಿಂದ, ಧೋನಿಯನ್ನು ಕೇವಲ 4 ಕೋಟಿ ರೂಪಾಯಿಗೆ ಸಿಎಸ್‌ಕೆ ಅನ್‌ಕ್ಯಾಪ್ಡ್ ಆಟಗಾರನಾಗಿ ಉಳಿಸಿಕೊಳ್ಳಬಹುದು.