ಮುಂಬೈ: ಭಾರತದ ನಂ.1 ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ (Rishabh Pant) ಐಪಿಎಲ್ 2025 ರ ಹರಾಜಿಗೆ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಅ.31 ರಂದು ಐಪಿಎಲ್ 2025 ರ ರಿಟೆನ್ಶನ್ ಗಡುವು ಕೊನೆಗೊಳ್ಳಲಿದೆ. ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಅವರನ್ನು ಅವರ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಳ್ಳುವುದಿಲ್ಲ ಎಂದು ಹೇಳಲಾಗಿದೆ.
ಟಿ20ಯಲ್ಲಿ ಪಂತ್ ನಾಯಕತ್ವದ ಗುಣಗಳ ಬಗ್ಗೆ ಡಿಸಿ ಮ್ಯಾನೇಜ್ಮೆಂಟ್ ಸಂತಸವಾಗಿಲ್ಲ ಎಂದು ವರದಿ ಹೇಳಿದೆ. ಡಿಸಿ ಈ ಬಾರಿ ನಾಯಕನ ಬದಲಾವಣೆ ಮಾಡಲು ಹೊರಟಿದೆ. ಇದು ಸಮ್ಮತಿಯಿಲ್ಲದ ಕಾರಣದಿಂದ ಅವರು ತಂಡದಿಂದ ಹೊರ ನಡೆಯಲು ತೀರ್ಮಾನಿಸಿದ್ದಾರೆ.
“ರಿಷಭ್ ಪಂತ್ ನಾಯಕತ್ವವನ್ನು ಬಯಸಿದ್ದರು, ಕೋಚ್ ಮತ್ತು ಸಹಾಯಕ ಸಿಬ್ಬಂದಿಯ ನೇಮಕಾತಿಗೆ ಸಂಬಂಧಿಸಿದಂತೆ ತಮ್ಮನ್ನು ತೊಡಗಿಸಿಕೊಳ್ಳಲು ಬಯಸಿದ್ದರು. ಆದರೆ ಡಿಸಿ ಮ್ಯಾನೇಜ್ ಮೆಂಟ್ ಗೆ ಅವರ ಟಿ20 ಆಟದ ಬಗ್ಗೆ ಸಂತಸವಾಗಲಿಲ್ಲ. ಅವರು ತಂಡವನ್ನು ಮುನ್ನಡೆಸುವುದನ್ನು ಫ್ರಾಂಚೈಸಿ ಬಯಸುತ್ತಿಲ್ಲ. ಇದು ರಾತ್ರೋರಾತ್ರಿಯ ನಿರ್ಧಾರವಾಗಿರಲಿಲ್ಲ” ಎಂದು ವರದಿ ಹೇಳಿದೆ.
“ಅಕ್ಷರ್ ಪಟೇಲ್ ನಾಯಕತ್ವಕ್ಕೆ ಉತ್ತಮ ಆಯ್ಕೆ. ಆದರೆ ಮೆಗಾ ಹರಾಜಿನಲ್ಲಿ ಇತರ ಆಯ್ಕೆಗಳನ್ನು ಹುಡುಕುವ ಬಲವಾದ ಸಾಧ್ಯತೆಯಿದೆ. ಸಾಕಷ್ಟು ನಾಯಕತ್ವದ ಆಯ್ಕೆಗಳು ಮೆಗಾ ಹರಾಜಿನಲ್ಲಿ ಪ್ರವೇಶಿಸಲು ಸಿದ್ಧವಾಗಿವೆ ಆದ್ದರಿಂದ ಕಾಯಲು ತೀರ್ಮಾನಿಸಿದೆ” ಎಂದು ವರದಿ ಹೇಳಿದೆ.