ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ಕ್ಕೆ ಮೊದಲು ನವೆಂಬರ್ ತಿಂಗಳಿನಲ್ಲಿ ಮೆಗಾ ಹರಾಜು ನಡೆಯಲಿದೆ. ಎಲ್ಲಾ ಫ್ರಾಂಚೈಸಿಗಳು ಇದಕ್ಕೆ ಬೇಕಾದ ತಯಾರಿ ಮಾಡುತ್ತಿವೆ. ಫ್ರಾಂಚೈಸಿಗಳು ತಮ್ಮಲ್ಲಿ ತಮ್ಮಲ್ಲಿ ಉಳಿಸಿಕೊಳ್ಳಬೇಕಾದ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಯತ್ನದಲ್ಲಿದೆ. ಅಕ್ಟೋಬರ್ 31ಕ್ಕೆ ಎಲ್ಲಾ ಫ್ರಾಂಚೈಸಿಗಳು ತಮ್ಮ ರಿಟೆನ್ಶನ್ ಪಟ್ಟಿಯನ್ನು ಪ್ರಕಟ ಮಾಡಬೇಕಾಗಿದೆ.
ಭಾರತದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರು ಈ ಬಾರಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನೊಂದಿಗೆ ಮುಂದುವರಿಯಲಿದ್ದಾರೆಯೇ ಎನ್ನುವ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ.
ಹೊಸ ಐಪಿಎಲ್ ಧಾರಣ ನಿಯಮಗಳ (Retention Rules) ಪ್ರಕಾರ, ಸಿಎಸ್‌ಕೆ ಧೋನಿಯನ್ನು 4 ಕೋಟಿ ರೂ.ಗೆ ‘ಅನ್‌ಕ್ಯಾಪ್ಡ್ ಆಟಗಾರ’ ಆಗಿ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದಾಗ್ಯೂ, ಆಟಗಾರನ ಅಥವಾ ಫ್ರಾಂಚೈಸ್ ನ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಸ್ಪೋರ್ಟ್ಸ್ ತಕ್ ನ ವರದಿಯ ಪ್ರಕಾರ ಧೋನಿ ಇಲ್ಲಿಯವರೆಗೂ ತಂಡಕ್ಕೆ ತಮ್ಮ ಲಭ್ಯತೆಯನ್ನು ಖಚಿತಪಡಿಸಿಲ್ಲ. ಅ. 29 ಅಥವಾ 30 ರಂದು ಮಹೇಂದ್ರ ಸಿಂಗ್ ಧೋನಿ ಸಿಎಸ್‌ಕೆ ಅಧಿಕಾರಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಅ. 31 ಫ್ರಾಂಚೈಸಿಗಳು ತಮ್ಮ ರಿಟೆನ್ಶನ್ ಪಟ್ಟಿಯನ್ನು ಸಲ್ಲಿಸಲು ಅಧಿಕೃತ ಅಂತಿಮ ದಿನಾಂಕವಾಗಿದೆ.
ಅ.28 ರವರೆಗೆ ಧೋನಿ ಯಾವುದೇ ಮೀಟಿಂಗ್ ಗೆ ಲಭ್ಯವಿರುವುದಿಲ್ಲ. ಚರ್ಚೆಯ ನಂತರ ಅವರನ್ನು ಉಳಿಸಿಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಧೋನಿ ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
ಐಪಿಎಲ್ 2025 ರ ಮೆಗಾ ಹರಾಜು ಸಮೀಪಿಸುತ್ತಿರುವಂತೆ ಧೋನಿ ಅವರು ತಮ್ಮ ಲಭ್ಯತೆಯ ಬಗ್ಗೆ ಖಚಿತ ಮಾಹಿತಿ ನೀಡಲಿದ್ದಾರೆ ಎಂದು ಸಿಎಸ್ ಕೆ ಸಿಇಒ ವಿಶ್ವನಾಥನ್ ಭರವಸೆ ಹೊಂದಿದ್ದಾರೆ.
“ನಾವು ಧೋನಿಯಿಂದ ಇದುವರೆಗೂ ಯಾವುದೇ ಖಚಿತ ಉತ್ತರ ಪಡೆದಿಲ್ಲ. ಆದರೂ ಅವರು ನಮಗಾಗಿ ಆಡುವುದನ್ನು ಮುಂದುವರಿಸಲು ನಾವು ಬಯಸುತ್ತೇವೆ. ಅವರು ಅ. 31ರ ಮೊದಲು ಖಚಿತಪಡಿಸುತ್ತಾರೆ ಎಂದು ಭಾವಿಸುತ್ತೇವೆ” ಎಂದು ವಿಶ್ವನಾಥನ್ ಇಎಸ್ ಪಿಎನ್ ಕ್ರಿಕ್ ಇನ್ಫೋ ಗೆ ತಿಳಿಸಿದರು.
ಈ ಬಾರಿ ಐಪಿಎಲ್ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಅದರ ಪ್ರಕಾರ ಐದು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತನಾದ ಯಾವುದೇ ಆಟಗಾರರರನ್ನು ಅನ್ ಕ್ಯಾಪ್ಡ್ ಎಂದು ಪರಿಗಣಿಸಬಹುದು. ಹೀಗಾಗಿ ಮಹೇಂದ್ರ ಸಿಂಗ್ ಧೋನಿ ಅವರು ಈ ಬಾರಿ ಮುಂದುವರಿಯಲು ಒಪ್ಪಿದರೆ ಅವರನ್ನು ಅನ್ ಕ್ಯಾಪ್ಡ್ ಆಟಗಾರ ಪಟ್ಟಿಯಲ್ಲಿ 4 ಕೋಟಿ ರೂ ಗೆ ಸಿಎಸ್ ಕೆ ಉಳಿಸಿಕೊಳ್ಳಲಿದೆ.