ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ “ಯುವರತ್ನ’ ರಿಲೀಸ್ ಆಗೋದಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇದೇ ಏ. 1ರಂದು “ಯುವರತ್ನ’ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ.
ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಕಳೆದ ಕೆಲ ದಿನಗಳಿಂದ ಒಂದರ ಹಿಂದೊಂದು ಹಾಡು ಗಳನ್ನು ಬಿಡುಗಡೆ ಮಾಡುತ್ತಿದೆ. ಸದ್ಯ ಚಿತ್ರತಂಡ, ಚಿತ್ರದ “ಪಾಠಶಾಲಾ…’ ಎಂಬ ಮತ್ತೂಂದು ಹಾಡನ್ನು ಬುಧವಾರ ಬಿಡುಗಡೆ ಮಾಡಿದೆ.
ಯುವಕರ ಕಾಲೇಜು ದಿನಗಳ ಬ್ಯಾಕ್ ಡ್ರಾಪ್‌ನಲ್ಲಿ ಇಟ್ಟುಕೊಂಡು ಮಾಡಿರುವ ಈ ಹಾಡು ಯುವ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಹಿತ್ಯವಿರುವ ಈ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ಎಸ್. ತಮನ್ ಚಿತ್ರದ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ.
ಇದನ್ನೂ ಓದಿ:ಎರಡು ತಿಂಗಳಲ್ಲಿ ಬಿಡುಗಡೆಯಾಯ್ತು 30 ಸಿನಿಮಾ!
“ದೇಶಕ್ಕೆ ಯೋಧ ನಾಡಿಗೆ ರೈತ, ಬಾಳಿಗೆ ಗುರು ಒಬ್ಬ ತಾನೇ… ಅಕ್ಷರ ಕಲಿಸೋ, ಅಜ್ಞಾನ ಅಳಿಸೋ, ಅವನೂನು ಅನ್ನದಾತನೇ…’ ಎನ್ನುವ ಸಾಲುಗಳಿಂದ ಶುರುವಾಗುವ ಈ ಹಾಡಿನಲ್ಲಿ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ, ವರನಟ ಡಾ. ರಾಜಕುಮಾರ್, ಅಬ್ದುಲ್ ಕಲಾಂ ಸೇರಿದಂತೆ ಖ್ಯಾತನಾಮರ ಫೋಟೋಗಳು ಹಾಡಿನಲ್ಲಿ ಕಾಣಿಸಿಕೊಂಡಿದೆ. ಶಿಕ್ಷಣ, ಗುರು-ಶಿಷ್ಯರ ಸಂಬಂಧ ಕುರಿತಾದ ಸಾಲುಗಳಿರುವ ಸಾಹಿತ್ಯದಲ್ಲಿ ಪುಟ್ಟಣ್ಣ ಕಣಗಾಲ್ – ವಿಷ್ಣುವರ್ಧನ್, ರಾಮಕೃಷ್ಣ ಪರಮಹಂಸ – ಸ್ವಾಮಿ ವಿವೇಕಾನಂದ, ಹಂಸಲೇಖ – ವಿ. ಮನೋಹರ್, ಕಾಶಿನಾಥ್ – ಉಪೇಂದ್ರ, ಸಂಗೀತ ಮಾಂತ್ರಿಕ ಇಳಯರಾಜ – ಎ.ಆರ್. ರೆಹಮಾನ್, ಕ್ರಿಕೆಟ್ ದಿಗ್ಗಜ ರಾಮಕಾಂತ್ ಅಚ್ರೇಕರ್ – ಸಚಿನ್ ತೆಂಡೂ ಲ್ಕರ್, ಬ್ಯಾಡ್ಮಿಂಟನ್ ತಾರೆ ಗೋಪಿಚಂದ್ – ಪಿ. ವಿಸಿಂಧು ಹೀಗೆ ಅನೇಕ ಸಾಧಕ ಗುರು-ಶಿಷ್ಯರ ಜೋಡಿಯನ್ನು ತೆರೆಮೇಲೆ ತೋರಿಸಲಾಗಿದೆ.
“ಸೋಲ್ ಆಫ್ ಯುವರತ್ನ’ ಎಂದೇ ಕರೆಯಲಾಗುತ್ತಿರುವ “ಯುವರತ್ನ’ ಚಿತ್ರದ “ಪಾಠಶಾಲಾ’ ಹಾಡಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಹಾಡು ನಿಧಾನವಾಗಿ ಪುನೀತ್ ರಾಜಕುಮಾರ್ ಅಭಿಮಾನಿಗಳ ಮನಗೆಲ್ಲುತ್ತಿದೆ.