Advertisement

ಜಿಲ್ಲಾ ಮಟ್ಟದ ಯುವಜನ ಮೇಳಕ್ಕೆ ತೆರೆ

10:23 AM Jan 27, 2019 | |

ನಾಗಮಂಗಲ: ಯುವಜನ ಮೇಳದಲ್ಲಿ ನಾಡಿನ ಸಂಸ್ಕೃತಿಯ ಅನಾವರಣ, ವೈವಿಧ್ಯಮಯ ಜಾನಪದ ಹಾಡುಗಳ ಕುಣಿತ, ನೃತ್ಯ, ಸೋಬಾನೆ ಪದಗಳ ಗಾಯನದೊಂದಿಗೆ ಜಿಲ್ಲಾ ಮಟ್ಟದ ಯುವಜನ ಮೇಳಕ್ಕೆ ಅಂತಿಮ ತೆರೆ ಬಿದ್ದಿತು.

Advertisement

ತಾಲೂಕಿನ ಕದಬಹಳ್ಳಿಯ ಶ್ರೀ ಕಾವೇಟಿ ರಂಗನಾಥ ಸ್ವಾಮಿ ದೇವಸ್ಥಾನದ ಅವರಣದಲ್ಲಿ ಎರಡು ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳ ಜಿಲ್ಲೆಯ ಯುವಕ, ಯುವತಿಯರನ್ನು ಆಕರ್ಷಿಸಿತಲ್ಲದೆ, ಸುಮಾರು 380ಕ್ಕೂ ಹೆಚ್ಚು ಕಲಾವಿದರು ಯುವಜನ ಮೇಳದಲ್ಲಿ ಭಾಗವಹಿಸಿ ಕಲಾ ಪ್ರದರ್ಶನ ನೀಡಿದರು.

ಜಿಲ್ಲೆಯ 7 ತಾಲೂಕಿನ ನಾನಾ ಗ್ರಾಮಗಳಿಂದ ಬಂದಿದ್ದ ಗ್ರಾಮೀಣ ಪ್ರತಿಭೆಗಳು ತಮ್ಮ ಕಲಾ ತಂಡಗಳೊಂದಿಗೆ ಆಗಮಿಸಿ, ಕಲಾ ಪ್ರದರ್ಶನವನ್ನು ನೀಡಿದವು, ಅಲ್ಲದೇ ಕಲಾ ಉಡುಗೆಯಿಂದಲೂ ಜನರನ್ನು ಆಕರ್ಷಿಸಿದರು, ಅಲ್ಲದೇ ಈ ಕಾರ್ಯಕ್ರಮದಲ್ಲಿ ಕದಬಹಳ್ಳಿಯ ಕಿತ್ತೂರುರಾಣಿ ಚನ್ನಮ್ಮ, ದೇವಲಾಪುರ, ಪಿ.ನೇರಲಕೆರೆ ಶಾಲಾ ಮಕ್ಕಳು ಕೂಡ ಭಾಗವಹಿಸಿ, ಗ್ರಾಮೀಣ ಭಾಗದ ಕಲೆಯನ್ನು ಪ್ರದರ್ಶಿಸಿದ್ದು ಬಹಳ ವಿಶೇಷವಾಗಿತ್ತು.

17 ಪ್ರಾಕಾರಗಳು: 15 ರಿಂದ 35 ವಯಸ್ಸಿನ ಯುವಕ, ಯುವತಿಯರು ಮೇಳದಲ್ಲಿ ಭಾಗವಹಿಸಿದ್ದರು. ಭಾವಗೀತೆ, ಲಾವಣಿ, ರಂಗಗೀತೆ, ಏಕಪಾತ್ರಭಿನಯ, ಗೀಗೀಪದ, ಕೋಲಾಟ, ಜನಪದನೃತ್ಯ, ಭಜನೆ, ಜನಪದ ಸಮೂಹ ಗೀತೆ, ಜೋಳ, ರಾಗಿ ಬೀಸುವ ಪದ, ಸೋಭಾನೆ ಪದ, ವೀರಗಾಸೆ, ವೀರಭದ್ರ ಕುಣಿತ, ಡೋಳ್ಳುಕುಣಿತ, ಸಣ್ಣಾಟ, ಯಕ್ಷಗಾನ, ಚರ್ಮವಾದ್ಯ ಮೇಳೆ ದೊಡ್ಡಾಟ( ಮೂಡಲ ಪಾಯ) ಹೀಗೆ 17 ಪ್ರಕಾರಗಳಲ್ಲಿ ಜಾನಪದ ಸಾಹಿತ್ಯ ಮೂಡಿಬಂದವು. ಮೇಳದಲ್ಲಿ ತೀರ್ಪುಗಾರರು ಸ್ಪರ್ಧಿಗಳನ್ನು ಆಯ್ಕೆ ಮಾಡಲು ಶ್ರಮಿಸಿದರು.

ಸಮಾರೋಪ: ಕ್ಷೇತ್ರ ಶಿಕ್ಷಣಾಕಾರಿ ಜಿ.ಎನ್‌. ನಾಗೇಶ್‌ ಮಾತನಾಡಿ, ನಗರೀಕರಣದಿಂದಾಗಿ ನಮ್ಮ ಪೂರ್ವಜರ ಕಲೆಗಳಾದ ಜಾನಪದ ಕಲೆಗಳು ಇಂದು ನಶಿಸುತ್ತಿವೆ, ಇವುಗಳನ್ನು ಉಳಿಸಿ, ಬೆಳೆಸುವ ಕೆಲಸವನ್ನು ನಾವೆಲ್ಲಾ ಸೇರಿ ಮಾಡಬೇಕು ಎಂದು ಹೇಳಿದರು.

Advertisement

ಸಾಹಿತಿ ಕ.ರಾ.ಕೃಷ್ಣಸ್ವಾಮಿ ವಹಿಸಿ, ಮಾತನಾಡಿ ನಮ್ಮ ಜನಪದ ಕಲೆ ಮನುಷ್ಯನಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿಯನ್ನು ಹೇಳುತ್ತದೆ, ಇಂತಹ ಕಲೆಯನ್ನು ಉಳಿಸಲು ಸರಕಾರ ಸೇರಿದಂತೆ ಜನಸಾಮಾನ್ಯರೆಲ್ಲಾ ಒಗ್ಗೂಡಬೇಕು ಎಂದು ಹೇಳಿದರು.

ಜಿಪಂ ಸದಸ್ಯ ಡಿ.ಕೆ.ಶಿವಪ್ರಕಾಶ್‌, ಸಾಹಿತಿ ಕ.ರಾ.ಕೃಷ್ಣಸ್ವಾಮಿ ಪತ್ನಿ ಲಲಿತಮ್ಮ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ನಾಗತೀಹಳ್ಳಿ ರಮೇಶ್‌, ಜನಪದ ಪರಿಷತ್‌ ಅಧ್ಯಕ್ಷ ಮಜೇಶ್‌ ಕುಮಾರ್‌, ಪ್ರೌಠಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎನ್‌.ರಮೇಶ್‌, ಯುವ ಪರಿಷತ್‌ ಪ್ರಧಾನ ಕಾರ್ಯದರ್ಶಿ ಜಿ.ಬೊಮ್ಮನಹಳ್ಳಿ ವಿಜಯ್‌ ಕುಮಾರ್‌, ಸೌಂದರ್ಯ, ಶಿಕ್ಷಕರಾದ ಎನ್‌.ಸಿ.ಶಿವಕುಮಾರ್‌, ಲಿಂಗರಾಜು ಸೇರಿದಂತೆ ಅನೇಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next