ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪದವಿ ಪೂರೈಸಿದ ವಿದ್ಯಾ ವಂತ ನಿರುದ್ಯೋಗಿಗಳು ಸರ್ಕಾರದ 5ನೇ ಗ್ಯಾರಂಟಿ ಯಾದ ಯುವನಿಧಿ ಪಡೆಯಲು ತಮ್ಮ ಹೆಸರು ನೋಂದಾಯಿಸಿಕೊಂಡರೂ ಯುವನಿಧಿ ತಮ್ಮ ಖಾತೆಗೆ ಡಿಬಿಟಿ ಮೂಲಕ ಬರಲು ಮಾರ್ಚ್ ಅಥವಾ ಎಪ್ರಿಲ್ ತಿಂಗಳವರೆಗೂ ಕಾಯಲೇಬೇಕು.
ಹೌದು, ವಿದ್ಯಾವಂತ ನಿರುದ್ಯೋಗಿ ಗಳಿಗೆ ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿರುವ 5ನೇ ಗ್ಯಾರಂಟಿ ಯುವ ನಿಧಿ ಯೋಜನೆಗೆ ಜಿಲ್ಲೆಯಲ್ಲಿ ಪದವಿ ಪೂರೈಸಿದ ನಿರುದ್ಯೋಗಿಗಳು ಹೆಸರು ನೋಂದಾಯಿಸಿದರೂ ಯುವನಿಧಿ ಸದ್ಯಕ್ಕೆ ಬರುವುದಿಲ್ಲ. ರಾಜ್ಯ ಸರ್ಕಾರ 2022-23ನೇ ಸಾಲಿನಲ್ಲಿ ಪದವಿ ಪೂರೈಸಿದ ವಿದ್ಯಾವಂತ ನಿರುದ್ಯೋಗಿಗಳನ್ನು ಯುವ ನಿಧಿಗೆ ಅರ್ಹರೆಂದು ಪರಿಗಣಿಸಿದೆ. ಜೊತೆಗೆ ಪದವಿ ಪೂರೈಸಿ 180 ದಿನ ಕಳೆದರೂ ಉದ್ಯೋಗ ಸಿಗದವರಿಗೆ ಯುವನಿಧಿಗೆ ಅರ್ಹರೆಂದು ಷರತ್ತು ವಿಧಿಸಿದೆ. ಹೀಗಾಗಿ ಜಿಲ್ಲೆಯ ಬಹುತೇಕ ಪದವಿ ಕಾಲೇಜುಗಳು ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ವ್ಯಾಪ್ತಿಗೆ ಒಳಪಡಿಸಿದ್ದು ಬೆಂಗಳೂರು ಉತ್ತರ ವಿವಿ ಕಳೆದ ಸೆಪ್ಪಂಬರ್, ಅಕ್ಟೋಬರ್‌ನಲ್ಲಿ ಪದವಿ ಪರೀಕ್ಷೆಗಳನ್ನು ಮುಗಿಸಿದೆ. ಆದ್ದರಿಂದ ಪದವಿ ಪೂರೈಸಿ 180 ದಿನ ಕಳೆಯಬೇಕಾದರೆ ಬರುವ ಮಾರ್ಚ್ ಅಂತ್ಯ ಅಥವಾ ಏಪ್ರಿಲ್‌ವರೆಗೂ ಕಾಯಬೇಕಿರು ವುದರಿಂದ ಯುವನಿಧಿಗೆ ಹೆಸರು ನೋಂದಾಯಿಸಿ ಕೊಂಡಿರುವ ಫಲಾನುಭವಿಗಳು ಯುವನಿಧಿಗಾಗಿ ಇನ್ನೂ 2, 3 ತಿಂಗಳ ಕಾಯಬೇಕಿದೆ.
ಜಿಲ್ಲೆಯ ಉದ್ಯೋಗ ಹಾಗೂ ಕೌಶಲ್ಯಾಭಿವೃದ್ದಿ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಕೇವಲ ಪಾಲಿಟೆಕ್ನಿಕ್ ಹಾಗೂ ಐಟಿಐ ಓದಿರುವ ವಿದ್ಯಾರ್ಥಿ ಗಳಿಗೆ ಮಾತ್ರ ಸರ್ಕಾರದಿಂದ ಯುವನಿಧಿ ಸಿಕ್ಕಿದೆ. ಆದರೆ ಪದವಿ ಪೂರೈಸಿದ ವಿದ್ಯಾವಂತ ನಿರುದ್ಯೋಗಿ ಗಳು 180 ದಿನ ಕಳೆದ ಬಳಿಕ ಅರ್ಹರಾಗಲಿದ್ದಾರೆ. ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯವು ಕಳೆದ ಸೆಪ್ಪಂಬರ್ ಹಾಗೂ ಅಕ್ಟೋಬರ್‌ನಲ್ಲಿ ಪದವಿ ಪರೀಕ್ಷೆ ಮುಗಿಸಿರುವುದರಿಂದ ಇನ್ನೂ ಕನಿಷ್ಠ 2, 3 ತಿಂಗಳ ಕಳೆದ ಬಳಿಕವಷ್ಟೇ ಯುವನಿಧಿ ನೋಂದಾಯಿತರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮೆಗೊಳ್ಳಲಿದೆ.
ಹೀಗಾಗಿ ಯುವನಿಧಿಗೆ ತಮ್ಮ ಹೆಸರು ನೋಂದಾಯಿಸಿಕೊಂಡಿರುವ ಪದವೀ ಧರರು ಯುವನಿಧಿಗೆ ಇನ್ನಷ್ಟು ತಿಂಗಳ ಕಾಲ ಕಾಯಬೇಕಿದೆ.
ಸರ್ಕಾರ ಆದೇಶದ ಪ್ರಕಾರ ಪದವಿ ಪೂರೈಸಿ 180 ದಿನಗಳು ಕಳೆದ ಬಳಿಕವಷ್ಟೇ ಯುವ ನಿಧಿಗೆ ಅರ್ಹರು. ಆದ್ದರಿಂದ ಜಿಲ್ಲೆಯಲ್ಲಿ ಯುವ ನಿಧಿಗೆ ನೋಂದಾಯಿಸಿಕೊಂಡಿರುವ ವಿದ್ಯಾವಂತ ನಿರುದ್ಯೋಗಿಗಳಿಗೆ ಮಾರ್ಚ್ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಯುವ ನಿಧಿ ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಆಗಲಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಯುವನಿಧಿ ಸಿಕ್ಕಿದೆ ಎಂಬುದರ ಮಾಹಿತಿ ನಮ್ಮ ಬಳಿ ಇಲ್ಲ. ಕೇಂದ್ರ ಕಚೇರಿಯಿಂದ ಪಡೆಯಬೇಕಿದೆ.
●ಎಂ.ಪ್ರಸಾದ್, ಜಿಲ್ಲಾ ಉದ್ಯೋಗಾಧಿಕಾರಿ
– ಕಾಗತಿ ನಾಗರಾಜಪ್ಪ