ಮಹಾನಗರ: ಭಾರತ ಜಗತ್ತಿನಲ್ಲೇ ಅತೀ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ದೇಶ. ಪ್ರಸ್ತುತ ಕಾಲಘಟ್ಟದಲ್ಲಿ ಯುವ ಜನತೆ ವಿಪುಲ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡಾಗ ಉಜ್ವಲ ಭವಿಷ್ಯ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಭಾರತ ಬೀಡಿ ಸಮೂಹದ ಎಕ್ಸ್‌ಕ್ಯೂಟಿವ್ ಡೈರೆಕ್ಟರ್ ಅನಂತ ಜಿ. ಪೈ ಹೇಳಿದರು.
ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘ ತನ್ನ 80ನೇ ವರ್ಷಾಚರಣೆಯ 11ನೇ ಕಾರ್ಯಕ್ರಮವಾಗಿ ನ. 25ರಂದು ನಗರದ ಸಿ.ವಿ. ನಾಯಕ್ ಸಭಾಂಗಣದಲ್ಲಿ ಆಯೋಜಿಸಿದ್ದ ಯುವ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಭಾರತೀಯರು ಉನ್ನತ ಸಾಧನೆಗಳನ್ನು ದಾಖಲಿಸುತ್ತಿದ್ದಾರೆ. ನಿರ್ದಿಷ್ಟ ಗುರಿ, ಸಾಧಿಸುವ ಛಲ ಮತ್ತು ಕಠಿನ ಪರಿಶ್ರಮ ವಿದ್ದಾಗ ಸಾಧಕರಾಗಿ ಮೂಡಿಬರಲು ಸಾಧ್ಯವಾಗುತ್ತದೆ ಎಂದರು. ಡೆರಿಕ್ ಚೆಸ್ ಅಕಾಡೆಮಿಯ ಅಧ್ಯಕ್ಷ ಪ್ರಸನ್ನ ರಾವ್ ಮಾತನಾಡಿ, ಯುವಜನತೆ ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು. ವಿಶೇಷ ಅತಿಥಿಯಾಗಿದ್ದ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಕನ್ನಡ ಚಲನಚಿತ್ರದ ನಟಿ ಪ್ರಕೃತಿ ಅವರನ್ನು ಸಮ್ಮಾನಿಸಲಾಯಿತು. ಕಾರ್ಯಕ್ರಮ ಸಂಯೋಜಕ ಕಸ್ತೂರಿ ಬಾಲಕೃಷ್ಣ ಪೈ ಪ್ರಸ್ತಾವಿಸಿದರು.
ಸಂಘದ ಅಧ್ಯಕ್ಷ ಡಾ| ಕಸ್ತೂರಿ ಮೋಹನ ಪೈ ಸ್ವಾಗತಿಸಿ, 80 ವರ್ಷಗಳ ಹಿಂದೆ ಸಮುದಾಯದ ಸೇವೆಯ ಉದ್ದೇಶದೊಂದಿಗೆ ಸ್ಥಾಪನೆಗೊಂಡ ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘ ಜಾತಿ ಮತ ಬೇಧವಿಲ್ಲದೆ ಅನೇಕ ಸಮಾಜಮುಖೀ ಕಾರ್ಯಗಳೊಂದಿಗೆ ಸಾರ್ಥಕತೆಯ ಹಾದಿಯಲ್ಲಿ ಮುನ್ನಡೆಯುತ್ತಾ ಬಂದಿದೆ. ವಸತಿ ರಹಿತರಿಗೆ ವಸತಿ ವ್ಯವಸ್ಥೆ, ಸಾವಿರಾರು ಬಡ ರೋಗಿಗಳಿಗೆ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಕೊಂಕಣಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನೂರಾರು ಕಾರ್ಯಕ್ರಮಗಳನ್ನು ನಡೆಸಿದೆ ಎಂದರು.
ಗೌರವ ಜಂಟಿ ಕಾರ್ಯದರ್ಶಿ ಡಾ| ಎ. ರಮೇಶ ಪೈ ವಂದಿಸಿದರು. ಗೌರವ ಖಜಾಂಚಿ ಜಿ. ವಿಶ್ವನಾಥ ಭಟ್, ಪಿಆರ್‌ಒ ಪಿ. ಸುರೇಶ್ ಶೆಣೈ, ಪ್ರಭಾಕರ ಬಾಳಿಗ, ಸುರೇಂದ್ರ ಆಚಾರ್ಯ, ಬಿ.ಆರ್. ಶೆಣೈ ಉಪಸ್ಥಿತರಿದ್ದರು. ಪ್ರೌಢಶಾಲಾ, ಪ.ಪೂ. ಕಾಲೇಜು ಹಾಗೂ ವೃತ್ತಿಪರ ಕಾಲೇಜು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.