Advertisement

ಯುವಾ ಬ್ರಿಗೇಡ್‌: ನೀರುಳಿಸಲು ವೀಕೆಂಡ್‌ ವಿಥ್‌ ರೈನ್‌

07:00 PM Jul 04, 2017 | Karthik A |

ಮಹಾನಗರ: ರಾಜ್ಯಾದ್ಯಂತ 100ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಸ್ವಚ್ಛಗೊಳಿಸುವ ಮೂಲಕ ಜಲಕ್ರಾಂತಿ ಮಾಡಿದ ಯುವಾ ಬ್ರಿಗೇಡ್‌ ಈಗ ‘ಜಲ ಜನ ಸಂಪರ್ಕ ಸೇತು’ ಎಂಬ ವಿನೂತನ ಜಲಸಾಕ್ಷರ ಅಭಿಯಾನವನ್ನು ಆರಂಭಿಸಿದೆ. ಮುಂದಿನ ಬೇಸಗೆಯಲ್ಲಿ ನೀರಿನ ಕೊರತೆ ಉಂಟಾಗದಂತೆ ಜನರನ್ನು ಈಗಿಂದಲೇ ನೀರಿನ ಉಳಿತಾಯಕ್ಕೆ ಅಣಿಗೊಳಿಸುವುದು ಇದರ ಉದ್ದೇಶ. ಈ ಸಂಬಂಧ ಜಿಲ್ಲೆಯಲ್ಲಿ 5 ಸಾವಿರ ಮನೆಗಳನ್ನು ತಲುಪುವ ಗುರಿ ಹೊಂದಲಾಗಿದೆ. ಈಗಾಗಲೇ ಕೆಲವು ಪ್ಲಂಬರುಗಳನ್ನು ಸಂಪರ್ಕಿಸಿ ‘ಮಳೆ ನೀರು ಸಂರಕ್ಷಣೆಯೊಂದಿಗೆ ಈ ವಾರಾಂತ್ಯ’ ಎಂಬ ಘೋಷವಾಕ್ಯದೊಂದಿಗೆ ಮಳೆ ಕೊಯ್ಲು ಕಾರ್ಯಕ್ರಮ ನಡೆಸಲು ಯೋಜಿಸಲಾಗಿದೆ.

Advertisement


ಮಳೆ ಬಿದ್ದ ಮಾತ್ರಕ್ಕೆ ಮುಂದಿನ ಬೇಸಗೆಯಲ್ಲಿ ನೀರಿನ ಕೊರತೆ ತಪ್ಪದು. ಅದಕ್ಕಾಗಿ ಪ್ರತಿಯೊಬ್ಬರೂ ಜಲಸಾಕ್ಷರರಾಗಬೇಕು. ಈ ಹಿನ್ನೆಲೆಯಲ್ಲೇ ‘ಜಲ ಜನ ಸಂಪರ್ಕ ಸೇತು’ ಅಭಿಯಾನ ಆರಂಭಗೊಂಡಿದೆ. ‘ಇರುವ ನೀರನ್ನು ವ್ಯರ್ಥ ಮಾಡದೇ ಉಪಾಯದಿಂದ ಬಳಸಲು ಪ್ರೇರೇಪಿಸಲು ಈ ಅಭಿಯಾನ. ವಾರದ ಕೊನೆಯ ದಿನದಂದು ಮನೆ ಮನೆಗಳಿಗೆ ತೆರಳಿ ಕರಪತ್ರ ಹಂಚಿ ಕಾರ್ಯಕರ್ತರು ನೀರು ಸಂರಕ್ಷಿಸಲು ಅರಿವು ಮೂಡಿಸುತ್ತಿದ್ದಾರೆ. ಸಾರ್ವಜನಿಕರೂ ಇದರಲ್ಲಿ ಪಾಲ್ಗೊಳ್ಳಬಹುದು’ ಎನ್ನುತ್ತಾರೆ ಯುವಾ ಬ್ರಿಗೇಡ್‌ನ‌ ನಿತ್ಯಾನಂದ ವಿವೇಕವಂಶಿ.

ಕರಪತ್ರದಲ್ಲೇನಿದೆ?
ಸ್ನಾನ ಮಾಡಲು ನೀರನ್ನು ವ್ಯರ್ಥ ಮಾಡದೇ ಒಂದು ಬಕೆಟ್‌ಗೆ ಸೀಮಿತಗೊಳಿಸೋಣ. ವಾಟರ್‌ ಪ್ಯೂರಿಫಯರ್‌ನಿಂದ ಹೊರ ಬರುವ ನೀರನ್ನು ಸಿಂಕ್‌ಗೆ ಬಿಡದೇ ಪಾತ್ರೆ ತೊಳೆಯಲು ಬಳಸೋಣ. ಸೋರುತ್ತಿರುವ ನಲ್ಲಿಗಳನ್ನು ಮತ್ತು ಫ್ಲಶ್‌ ಟ್ಯಾಂಕ್‌ಗಳನ್ನು ತತ್‌ಕ್ಷಣ ದುರಸ್ತಿ ಮಾಡಿಸೋಣ. ಶೌಚಾಲಯದ ಬಳಕೆಗೆ ಕಮೋಡ್‌ಗಿಂತ ಇಂಡಿಯನ್‌ ಟಾಯ್ಲೆಟ್‌ ಬಳಸೋಣ. ಸಂಪ್‌ ಅಥವಾ ಕೊಳವೆ ಬಾವಿಯಿಂದ ನೀರನ್ನು ಓವರ್‌ ಹೆಡ್‌ ಟ್ಯಾಂಕ್‌ಗೆ ಪಂಪ್‌ ಮಾಡುವಾಗ ಟ್ಯಾಂಕ್‌ ತುಂಬಿ ಸುರಿಯದಂತೆ ಎಚ್ಚರ ವಹಿಸೋಣ – ಇತ್ಯಾದಿ ಸಲಹೆಗಳಿವೆ.

ಪ್ರಧಾನಿ ಗಮನ ಸೆಳೆದ ಕಲ್ಯಾಣಿ ಸ್ವಚ್ಛತೆ
ಯುವಾ ಬ್ರಿಗೇಡ್‌ ಎರಡೂವರೆ ವರ್ಷಗಳಿಂದ ರಾಯಚೂರು, ಗದಗ, ಮೈಸೂರು ಸೇರಿದಂತೆ ಒಟ್ಟು 100ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸಿದೆ. ಇಂತಹ ಕಲ್ಯಾಣಿಗಳಲ್ಲಿ ಜೀವಜಲ ತುಂಬಿ ಅಲ್ಲಿನ ಜನಜೀವನಕ್ಕೆ ಸಹಾಯವಾಗಿದೆ. ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲೂ ಉಲ್ಲೇಖೀಸಿ ಶ್ಲಾಘಿಸಿದ್ದರು.

ತಮಿಳು – ಕನ್ನಡಿಗರ ಬೆಸೆಯಲು ‘ಮೈಟ್ರೀ’
ಕಾವೇರಿ ಜಲಾನಯನದಲ್ಲಿ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳಲ್ಲಿ ಜಲ ಕದನ ನಡೆಯದಂತೆ ಜಾಗೃತಿ ಮೂಡಿಸಿ ತಮಿಳುನಾಡಿನ ಯುವ ಜನರನ್ನೂ ಸೇರಿಸಿಕೊಂಡು ಕುಶಾಲನಗರದಲ್ಲಿ ಈ ಹಿಂದೆ ‘ಮೈಟ್ರೀ’ ಕಾವೇರಿ ಸ್ವಚ್ಛತೆ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ತಮಿಳು -ಕನ್ನಡಿಗರ ಮತ್ತು ಭೂಮಿ – ಆಕಾಶಗಳ ನಡುವಣ ಮರದ ಸಂಬಂಧ ಎಂಬ ಧ್ಯೇಯೋದ್ದೇಶದೊಂದಿಗೆ ಕಾವೇರಿ ಸ್ವಚ್ಛತೆ ನಡೆಸಿತ್ತು.

Advertisement

ಮಳೆ ಕೊಯ್ಲು, ಜಲಮರುಪೂರಣ
ಜಿಲ್ಲೆಯಲ್ಲಿ ಸುಮಾರು 5 ಸಾವಿರ ಮನೆಗಳಿಗೆ ಜಲ ಜನ ಕಾರ್ಯಕ್ರಮದ ಬಗ್ಗೆ ತಿಳಿಸುವ ಕರಪತ್ರ ತಲುಪಿಸಲಾಗುವುದು. ಈಗಾಗಲೇ ಕೆಲ ಪ್ಲಂಬರುಗಳನ್ನು ಸಂಪರ್ಕಿಸಿದ್ದು, ವಾರಾಂತ್ಯದಲ್ಲಿ ಕೆಲವೆಡೆ ಮಳೆ ಕೊಯ್ಲು, ಜಲಮರುಪೂರಣ ಕಾರ್ಯಕ್ರಮ ನಡೆಸುವ ಬಗ್ಗೆ ಯೋಜನೆ ಹಾಕಿಕೊಂಡಿದ್ದೇವೆ. ಶಾಲೆಗಳಲ್ಲಿ ಮಕ್ಕಳಿಗೆ ಜಲ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕಿದೆ.
– ತಿಲಕ್‌ ಶಿಶಿಲ, ಜಿಲ್ಲಾ ಸಹ ಸಂಚಾಲಕ,ಯುವಾಬ್ರಿಗೇಡ್‌

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next