Advertisement

ಊಟದ ರುಚಿ ಹೆಚ್ಚಿಸುವ ಹುಳಿಗೊಜ್ಜು , ಸಾಸಿವೆಗಳು

10:23 AM Feb 29, 2020 | mahesh |

ತುಂಬಾ ಹಸಿವೆಯಾಗಿ ಊಟಕ್ಕೆ ಕುಳಿತಾಗ, ಸಾರು, ಸಾಂಬಾರಿನಲ್ಲಿ ಊಟ ಮಾಡುವ ಮೊದಲು ಇಂಥ ಸಣ್ಣಪುಟ್ಟ ವ್ಯಂಜನಗಳನ್ನು ಬಡಿಸುತ್ತಾರೆ. ಉಪ್ಪು ಖಾರ ಹೆಚ್ಚಾಗಿರದ ಇವುಗಳು ಹಸಿದ ಹೊಟ್ಟೆಗೆ ಆಪ್ಯಾಯಮಾನವಾಗಿರುತ್ತವೆ. ಹೆಚ್ಚು ಇಂಧನದ ಆವಶ್ಯಕತೆಯೂ ಇಲ್ಲದ ಇವುಗಳನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ, ಕಡಿಮೆ ಅವಧಿಯಲ್ಲಿ ಮಾಡಿ ಮುಗಿಸಬಹುದು.

Advertisement

ಗುಳ್ಳದ ಹುಳಿ ಗೊಜ್ಜು
ಬೇಕಾಗುವ ಸಾಮಗ್ರಿ: ಗುಳ್ಳ- ಒಂದು, ಹುಣಸೆಹಣ್ಣಿನ ರಸ- 1/4 ಬಟ್ಟಲು, ಬೆಲ್ಲದ ಪುಡಿ- 1/4 ಬಟ್ಟಲು, ಉಪ್ಪು- ರುಚಿಗೆ, ಹಸಿಮೆಣಸಿನಕಾಯಿ- 2, ಇಂಗು ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ, ಒಗ್ಗರಣೆಗೆ: ಕರಿಬೇವು, ಉದ್ದಿನ ಬೇಳೆ, ಸಾಸಿವೆ, ಎಣ್ಣೆ

ತಯಾರಿಸುವ ವಿಧಾನ: ಗುಳ್ಳವನ್ನು ಬೆಂಕಿಯಲ್ಲಿ ಸುಟ್ಟರೆ ಚೆನ್ನಾಗಿರುತ್ತದೆ. ಆಗದಿದ್ದರೆ ಬೇಯಿಸಲೂಬಹುದು. ಸಿಪ್ಪೆ ತೆಗೆದು, ಹುಣಸೆಹಣ್ಣಿನ ರಸದಲ್ಲಿ ಚೆನ್ನಾಗಿ ಕಿವುಚಿ. ಹಸಿಮೆಣಸಿನ ಕಾಯಿಯನ್ನು ಒಟ್ಟಿಗೆ ಕಿವುಚಿ. ಉಪ್ಪು, ಬೆಲ್ಲದ ಪುಡಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಇಂಗಿನ ನೀರನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಕರಿಬೇವಿನೊಂದಿಗೆ ಒಗ್ಗರಣೆ ಕೊಡಿ.

ಈರುಳ್ಳಿ ಹುಳಿ ಗೊಜ್ಜು
ಬೇಕಾಗುವ ಸಾಮಗ್ರಿ: ಈರುಳ್ಳಿ- 2, ಹುಣಸೆಹಣ್ಣಿನ ರಸ- 1/4 ಬಟ್ಟಲು, ಬೆಲ್ಲದ ಪುಡಿ- 1/4 ಬಟ್ಟಲು, ಹಸಿಮೆಣಸಿನಕಾಯಿ- 2, ಉಪ್ಪು ರುಚಿಗೆ, ಇಂಗು ಸ್ವಲ್ಪ, ಒಗ್ಗರಣೆಗೆ: ಕೆಂಪು ಮೆಣಸಿನಕಾಯಿ, ಸಾಸಿವೆ, ಉದ್ದಿನಬೇಳೆ, ಕರಿಬೇವು, ಎಣ್ಣೆ- 4 ಚಮಚ. ಅರಸಿನ ಚಿಟಿಕೆ.

ತಯಾರಿಸುವ ವಿಧಾನ: ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಸಣ್ಣಗೆ ಕತ್ತರಿಸಿ. ಬಾಣಲೆಗೆ ಎಣ್ಣೆ ಹಾಕಿ, ಒಗ್ಗರಣೆ ಮಾಡಿಕೊಳ್ಳಿ. ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ ಹಸಿಮೆಣಸಿನ ಕಾಯಿಯನ್ನು ಹಾಕಿ. ಚೆನ್ನಾಗಿ ಬಾಡಿಸಿ. ಈಗ ಅದಕ್ಕೆ ಹುಣಸೆಹಣ್ಣಿನ ರಸ, ಬೆಲ್ಲದ ಪುಡಿ ಹಾಕಿ ಮಿಶ್ರ ಮಾಡಿ ಬೇಕಾಗುವಷ್ಟು ಉಪ್ಪನ್ನು ಸೇರಿಸಿ. ಇದು ದೋಸೆ, ರೊಟ್ಟಿಯ ಜೊತೆಗೂ ರುಚಿಯಾಗಿರುತ್ತದೆ.

Advertisement

ಕಲ್ಲಂಗಡಿ ಹಣ್ಣಿನ ತಿರುಳಿನ ಗೊಜ್ಜು
ಬೇಕಾಗುವ ಸಾಮಗ್ರಿ: ಕಲ್ಲಂಗಡಿ ಹಣ್ಣಿನ ತಿರುಳು- 1/2 ಹಣ್ಣಿನದ್ದು, ಹಸಿಮೆಣಸಿನಕಾಯಿ- 2, ಹುಣಸೆಹಣ್ಣಿನ ರಸ- 1/4 ಬಟ್ಟಲು, ಬೆಲ್ಲದ ಪುಡಿ- ಹುಣಸೆಹಣ್ಣಿನ ರಸದಷ್ಟು, ಉಪ್ಪು ರುಚಿಗೆ, ಇಂಗು ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ, ಒಗ್ಗರಣೆಗೆ: ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕರಿಬೇವು.

ತಯಾರಿಸುವ ವಿಧಾನ: ಮೊದಲು ಕೆಂಪು ಭಾಗದ ಹಣ್ಣನ್ನು ಕತ್ತರಿಸಿದ ನಂತರ ತಿರುಳಿನಲ್ಲಿರುವ ಹಸಿರು ಭಾಗವನ್ನು ತೆಗೆದು ಹಾಕಬೇಕು. ನಂತರ ಉಳಿದ ಬಿಳಿ ಭಾಗವನ್ನು ಸಣ್ಣಗೆ ಹಚ್ಚಿಕೊಳ್ಳಬೇಕು. ಈಗ ಒಗ್ಗರಣೆ ಇಟ್ಟು, ಅದಕ್ಕೆ ಕತ್ತರಿಸಿದ ಹಣ್ಣಿನ ತಿರುಳನ್ನು ಹಾಕಿ, ಬೇಯಲು ಬಿಡಿ. ನಂತರ ಹುಣಸೆಹಣ್ಣಿನ ರಸ, ಬೆಲ್ಲ, ಉಪ್ಪು ಹಾಕಿ ಕೈಯಾಡಿಸಿ. ನೀರನ್ನು ಹಾಕಲೇಬಾರದು. ಅದರ ನೀರಿನಲ್ಲೇ ಬೇಯುತ್ತದೆ. ಇದು ಬಿಸಿ ಅನ್ನದ ಜೊತೆ ತಿನ್ನಲು ರುಚಿಕರವಾಗಿರುತ್ತದೆ.

ಹೀರೆಕಾಯಿ ಕಲಸು
ಬೇಕಾಗುವ ಸಾಮಗ್ರಿ: ಎಳೆಯ ಹೀರೆಕಾಯಿ- 2, ತೆಂಗಿನ ತುರಿ- ಒಂದು ಬಟ್ಟಲು, ಹಸಿಮೆಣಸಿನಕಾಯಿ 1-2, ಜೀರಿಗೆ- 1/2 ಚಮಚ, ಬೆಲ್ಲ ಸ್ವಲ್ಪ, ಉಪ್ಪು ರುಚಿಗೆ, ಕರಿಬೇವು ಮತ್ತು ಒಗ್ಗರಣೆ ಸಾಮಾನು, ತುಪ್ಪ- ಒಂದು ಚಮಚ.

ತಯಾರಿಸುವ ವಿಧಾನ: ಹೀರೇಕಾಯಿಯನ್ನು ತೊಳೆದು, ಮೇಲಿನ ಸಿಪ್ಪೆಯನ್ನು ಸ್ವಲ್ಪ ತೆಗೆದು, ಪಲ್ಯದ ರೀತಿಯಲ್ಲಿ ಕತ್ತರಿಸಿ ಬೇಯಿಸಿ. ಈಗ ಮಿಕ್ಸಿ ಜಾರಿಗೆ ತೆಂಗಿನತುರಿ, ಹಸಿಮೆಣಸಿನಕಾಯಿ, ಜೀರಿಗೆ ಹಾಕಿ ಚೆನ್ನಾಗಿ ರುಬ್ಬಿ. ಬೆಂದ ಮಿಶ್ರಣಕ್ಕೆ ಉಪ್ಪು, ಬೆಲ್ಲ ಹಾಕಿ, ಕುದಿಸಿ. ನಂತರ ರುಬ್ಬಿದ ಮಿಶ್ರಣವನ್ನು ಸೇರಿಸಿ, ಮತ್ತೂಮ್ಮೆ ಕುದಿಸಿ, ತುಪ್ಪದಲ್ಲಿ ಕರಿಬೇವಿನೊಂದಿಗೆ ಒಗ್ಗರಣೆ ಕೊಡಿ.

ಬೀಟ್ರೂಟ್‌ ಸಾಸಿವೆ
ಬೇಕಾಗುವ ಸಾಮಗ್ರಿ: ಬೀಟ್ರೂಟ್‌- 1, ತೆಂಗಿನ ತುರಿ- ಒಂದು ಬಟ್ಟಲು, ಬ್ಯಾಡಗಿ ಮೆಣಸಿನಕಾಯಿ- 2, ಸಾಸಿವೆ- 2 ಚಮಚ, ಉಪ್ಪು ರುಚಿಗೆ, ಹುಳಿ ಮೊಸರು / ಹುಣಸೆಹಣ್ಣು ಸ್ವಲ್ಪ, ಒಗ್ಗರಣೆಗೆ: ತುಪ್ಪ, ಕರಿಬೇವು, ಉದ್ದಿನಬೇಳೆ, ಸಾಸಿವೆ.

ತಯಾರಿಸುವ ವಿಧಾನ: ಬೀಟ್ರೂಟ್‌ನ ಸಿಪ್ಪೆ ತೆಗೆದು, ತುರಿ ಮಣೆಯಲ್ಲಿ ತುರಿದು, ಚೆನ್ನಾಗಿ ಬೇಯಿಸಿ. ಮಿಕ್ಸಿ ಜಾರಿಗೆ ತೆಂಗಿನ ತುರಿ, ಮೆಣಸಿನಕಾಯಿ, ಸಾಸಿವೆ, ಉಪ್ಪು, ಹುಳಿ ಹಾಕಿ ರುಬ್ಬಿ, ಈ ಮಿಶ್ರಣವನ್ನು ಬೆಂದ ಬೀಟ್ರೂಟ್‌ಗೆ ಹಾಕಿ, ಕುದಿಸಿ, ಒಗ್ಗರಣೆ ಹಾಕಿ.

ಪುಷ್ಪಾ ಎನ್‌.ಕೆ. ರಾವ್‌

Advertisement

Udayavani is now on Telegram. Click here to join our channel and stay updated with the latest news.

Next