Advertisement
ಮಾವಿನ ತೋರಣ ಕಟ್ಟುವುದು, ಕಲಶವನ್ನು ಇಡುವುದು ಜತೆಗೆ ಹೋಳಿಗೆ ಹಾಗೂ ಪಚ್ಚಡಿ ಎನ್ನುವ ಖಾದ್ಯದ ತಯಾರಿಕೆಯು ಈ ದಿನ ನಡೆಯುತ್ತದೆ. ಪಚ್ಚಡಿಯು ಸಿಹಿ, ಖಾರ,ಹುಳಿ, ಕಹಿಯ ಮಿಶ್ರಣವಾಗಿದ್ದು ಸಂತೋಷವನ್ನು, ಜೀವನೋತ್ಸಹಾವನ್ನು, ಕಷ್ಟವೊದಗುವ ಬಗೆಯನ್ನು ಜತೆಗೆ ಅದನ್ನು ಸಮರ್ಥವಾಗಿ ಎದುರಿಸುವ ಬಗೆಯನ್ನೂ ಸಂಕೇತಿಸುತ್ತದೆ. ಇದೊಂದು ಖಾದ್ಯವು ಜೀವನವನ್ನೇ ಪ್ರತಿನಿಧಿಸುತ್ತದೆ.
Related Articles
Advertisement
ಹಬ್ಬದಾಚರಣೆಗಿಲ್ಲಿ ಬಡವ-ಬಲ್ಲಿದನೆನ್ನದೆ ಎಲ್ಲರೂ ಶುಭದಿನವೆಂದು ಹೊಸಕಾರ್ಯವನ್ನು ಇದೇ ದಿನ ಆರಂಭಿಸುವರು. ಬೇವು-ಬೆಲ್ಲ ನೀರಿನ ಸ್ನಾನ, ಬೇವು-ಬೆಲ್ಲದ ಸೇವನೆ ಜತೆಗೆ ಹೊಸಬಟ್ಟೆ ಈ ದಿನದ ಇನ್ನೊಂದು ಪ್ರಮುಖ ವಿಶೇಷತೆಯಾಗಿದೆ. ಬೆಲ್ಲ ಸಿಹಿನೀಡಿದರೆ, ಬೇವಿನ ಕಹಿ ಆರೋಗ್ಯವನ್ನೇ ನೀಡುತ್ತದೆ. ಎಲ್ಲದುದರ ಸ್ವೀಕಾರದಲ್ಲೂ ಸಮಾನತೆಯಿರಲಿ ಎನ್ನುವುದೇ ಈ ಹಬ್ಬದ ಆಶಯವಾಗಿದೆ.
ಈ ಹಬ್ಬದ ಮಾರನೇ ದಿನ “ವರ್ಷ ತೊಡಕು’ ಆಚರಿಸಲಾಗುತ್ತದೆ. ದೇವರಲ್ಲೊಂದು ಕೋರಿಕೆಯ ಮೂಲಕ ಸುಖ-ಶಾಂತಿ ಕೇಳಿಕೊಳ್ಳಲು ಇದೊಂದು ದಿನವಷ್ಟೇ. ಆ ದಿನ ಏನು ದೊರಕುವುದೋ ವರ್ಷಪೂರ್ತಿ ಅದೇ ಹಸನಾಗಿರುತ್ತದೆ ಎನ್ನುವುದು ಪೂರ್ವಜರ ನಂಬಿಕೆಯಾಗಿದೆ.
ಪ್ರಕೃತಿಯು ಹಳೆಯದೆಲ್ಲವ ಕಳೆದು ಮತ್ತೆ ಹಸುರಾಗುವ ಕಾಲದ ಆರಂಭದ ದಿನವಿದು. ಅದನ್ನು ಸಡಗರದಾಚರಣೆಯ ಮೂಲಕ ಆಹ್ವಾನಿಸಿಕೊಂಡು ಖುಷಿಪಡುವುದಿಲ್ಲಿ ಮುಖ್ಯವಾಗುತ್ತದೆ. ಹಳೆಯ ಕಹಿಯೆಲ್ಲವ ಮರೆತು ಮನೆಯ ಮಕ್ಕಳು/ಹಿರಿಯರು ಹಲವು ನೆರೆಹೊರೆಯವರಿಗೆ ಬೇವು-ಬೆಲ್ಲವ ಹಂಚುವ ಮೂಲಕ ಮತ್ತೆ ಅಲ್ಲಿ ಸಾಮರಸ್ಯ ನೆಲೆಸುತ್ತದೆ. ನೆಮ್ಮದಿಯ ಜತೆಗೆ ಸಂತಸ ನೂರ್ಮಡಿಯಾಗುತ್ತದೆ.
ಹಸುರು ಮರಗಳ ಚಿಗುರು ಆರಂಭವಾಗುವ ಈ ಪರ್ವಕಾಲದಲ್ಲಿ ಒಡೆದ ಮನಸ್ಸುಗಳೂ ಬೆಸೆಯಲಿ, ಕಷ್ಟವ ಎದುರಿಸಲು ಶಕ್ತಿ ದೊರಕಲಿ, ಮನ-ಮನದ ನಡುವೆಯಿರುವ ಅಹಂಕಾರ ಅಳಿಯಲಿ, ಪ್ರೀತಿ ನೆಲೆಸಲಿ, ಆರೋಗ್ಯ ಉಳಿಯಲಿ ಎಂಬ ಸದಾಶಯವನ್ನೊಳಗೊಂಡ ಹಬ್ಬದ ಕುರಿತು ಮುಂದಿನ ಪೀಳಿಗೆಗೂ ತಿಳಿಸಿ ಹೇಳುವುದು ನಮ್ಮ ಕರ್ತವ್ಯವಾಗಿದೆ.
ವಿನಯಾ ಕೌಂಜೂರು