Advertisement
Related Articles
Advertisement
ಬೇಂದ್ರೆಯವರು ಹಾಗೆನ್ನಲೂ ಕಾರಣವಿತ್ತು. ಏನೆಂದರೆ, 1955ರಲ್ಲಿ ಎಸ್.ಎಸ್ ವೈ ದ್ಯ ಎಂಬುವರು, ತಮ್ಮ ಮಿತ್ರರೊಂದಿಗೆ ಸೇರಿ ವಿಜಯಶ್ರೀ ಲಾಂಛನದಲ್ಲಿ ಒಂದು ಸಿನಿಮಾ ನಿರ್ಮಾಣಕ್ಕೆ ಮುಂದಾದರು. ಅದಕ್ಕೆ ಕಥೆ ಒದಗಿಸುವಂತೆ ಬೇಂದ್ರೆಯವರನ್ನೇ ವಿನಂತಿಸಿದರು. ಬೇಂದ್ರೆಯವರ ಕಥೆ ಆಧರಿಸಿ ತಯಾರಾದ ಚಿತ್ರವೇ “ವಿಚಿತ್ರ ಪ್ರಪಂಚ’. ಈ ಚಿತ್ರಕ್ಕೆ ದತ್ತ ಕುಮಾರ ಎಂಬ ಹೆಸರಿನಲ್ಲಿ ಬೇಂದ್ರೆಯವರು ಸಂಭಾಷಣೆ ಬರೆದರು. ಏಳು ಗೀತೆಗಳನ್ನೂ ಬರೆದರು. ಪುರುಷೋತ್ತಮ ಅನ್ನುವವರ ಸಂಗೀತ ಹಾಗೂ ಭಾಳಾ ಗಜಬರ್ ಅವರ ನಿರ್ದೇಶನ ಈ ಚಿತ್ರಕ್ಕಿತ್ತು. ನಿರ್ಮಾಪಕ, ನಿರ್ದೇಶಕರು, ಒಂದೆರಡು ಸಂದರ್ಭದಲ್ಲಿ ಬೇಂದ್ರೆಯವರ ಸಂಭಾಷಣೆಯನ್ನು ತಮಗೆ ಬೇಕಾದಂತೆ ತಿದ್ದಿಕೊಂಡಿದ್ದರು.
ಈ ಘಟನೆಯಿಂದ ಬೇಸರಗೊಂಡಿದ್ದ ಬೇಂದ್ರೆ- “ನೀವು ಸಿನಿಮಾದ ಮಂದಿ ಸಾಹಿತ್ಯವನ್ನು ಹೇಗೆ ಹೇಗೋ ಬಳಸಿಕೊಂಡು ವಿರೂಪ ಮಾಡಿಬಿಡ್ತೀರಿ. ಹಾಗಾಗಿ “ಯುಗಾದಿ’ ಪದ್ಯ ಬಳಸಲು ನಾನು ಅನುಮತಿ ಕೊಡಲಾರೆ’ ಎಂದು “ಕುಲವಧು’ ಚಿತ್ರತಂಡದವರಿಗೆ ಹೇಳಿ ಬಿಟ್ಟಿದ್ದಾರೆ. ಆದರೆ, ಬೇಂದ್ರೆಯವರನ್ನು ಒಪ್ಪಿಸಲೇಬೇಕು ಎಂದು ನಿರ್ಧರಿಸಿದ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್, ಹಾರ್ಮೋನಿಯಂ ತೆಗೆದುಕೊಂಡು ಮದ್ರಾಸಿನಿಂದ ಸೀದಾ ಸಾಧನಕೇರಿಯಲ್ಲಿದ್ದ ಬೇಂದ್ರೆಯವರ ಮನೆಗೇ ಹೋದರಂತೆ. ನಂತರ, ತಾವು ಬಂದ ಉದ್ದೇಶ ತಿಳಿಸಿ, ಮೊದಲು ಟ್ಯೂನ್ ಕೇಳಿಸಿದರಂತೆ. ಆಗಷ್ಟೇ ಮದುವೆಯಾಗಿ ಗಂಡನ ಮನೆಗೆ ಬಂದ ನಾಯಕಿ, ಹಬ್ಬದ ಸಡಗರದಲ್ಲಿ ಈ ಹಾಡು ಹಾಡುವಂತೆ ಚಿತ್ರೀಕರಿಸ್ತೇವೆ. ಈ ಕಾರಣದಿಂದಲೇ “ನಿದ್ದೆಗೊಮ್ಮೆ ನಿತ್ಯ ಮರಣ’ ಚರಣವನ್ನು ಬಳಸಿಲ್ಲ. ನೀವು ಬರೆದಿರೋದ್ರಲ್ಲಿ ಒಂದಕ್ಷರ ಕೂಡ ಬದಲಿಸುವುದಿಲ್ಲ. ಈ ಹಾಡು ಬಳಸಿಕೊಳ್ಳಲು ದಯವಿಟ್ಟು ಒಪ್ಪಿಗೆ ಕೊಡಿ ಸಾರ್ ಎಂದು ಕೋರಿದರಂತೆ. ಅಷ್ಟಕ್ಕೇ ಸುಮ್ಮನಾಗದೆ, ಇಡೀ ಗೀತೆಯನ್ನು ಹಾರ್ಮೋನಿಯಂ ನುಡಿಸುತ್ತಾ ಹಾಡಿಯೂ ತೋರಿಸಿದರಂತೆ. ಥೇಟ್ ಜೋಗುಳದಂತಿದ್ದ ಆ ಮಧುರ ಸಂಯೋಜನೆಗೆ ಮಾರುಹೋದ ಬೇಂದ್ರೆಯವರು ಖುಷಿಯಿಂದ ಜಿ.ಕೆ. ವಿ ಅವರ ಹೆಗಲು ತಟ್ಟಿ, ಬಾಯಿಗೆ ಕಲ್ಲು ಸಕ್ಕರೆ ಹಾಕಿ-“ನೀ ಕೇಳಿಸಿದೆಯಲ್ಲ? ಅದೀಗ ನಿಜವಾದ ಯುಗಾದೀನೋ ತಮ್ಮಾ…’ ಎಂದು ಉದ್ಗರಿಸಿದರಂತೆ!
“ಕುಲವಧು’ ಚಿತ್ರ ತೆರೆಕಂಡು 55 ವರ್ಷ ಕಳೆದಿವೆ. ಕಳೆದ 55 ವರ್ಷಗಳಿಂದ ಒಂದು ವರ್ಷವೂ ತಪ್ಪದೆ ಯುಗಾದಿ ಹಬ್ಬದ ದಿನ ಆಕಾಶವಾಣಿಯ ಎಲ್ಲ ಕೇಂದ್ರಗಳಿಂದ “ಯುಗ ಯುಗಾದಿ ಕಳೆದರೂ…’ ಹಾಡು ಪ್ರಸಾರವಾಗುತ್ತಿದೆ. ಬಹುಶಃ ಮುಂದಿನ 55 ವರ್ಷವೂ ಈ ಪರಂಪರೆ ಮುಂದುವರಿಯುತ್ತದೆ.
ಎ.ಆರ್. ಮಣಿಕಾಂತ್