ಮುಂಬೈ: ನಗರದ ಬಾಂದ್ರಾ ಟರ್ಮಿನಸ್ ನಿಲ್ದಾಣದಲ್ಲಿ (Bandra Terminus station) ರವಿವಾರ (ಅ.27) ನಡೆದ ಕಾಲ್ತುಳಿತದ ಘಟನೆಯಲ್ಲಿ ನಂತರ ಕನಿಷ್ಠ ಒಂಬತ್ತು ಜನರು ಗಾಯಗೊಂಡಿದ್ದಾರೆ. ಬಾಂದ್ರಾ-ಗೋರಖ್‌ಪುರ ಎಕ್ಸ್‌ಪ್ರೆಸ್ ರೈಲು (Bandra-Gorakhpur Express) ಹೊರಡುವ ಮುನ್ನ ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ ಬೆಳಿಗ್ಗೆ 5.56 ಕ್ಕೆ ಈ ಘಟನೆ ಸಂಭವಿಸಿದೆ.
ಗಾಯಾಳುಗಳನ್ನು ಭಾಭಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ದೀಪಾವಳಿಗೆ ಮುಂಚಿತವಾಗಿ ಹಬ್ಬದ ವಿಪರೀತ ಜನಜಂಗುಳಿಯ ಕಾರಣದಿಂದ ಕಾಲ್ತುಳಿತ ಸಂಭವಿಸಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (BMC) ತಿಳಿಸಿದೆ. ಏಳು ಜನರ ಸ್ಥಿತಿ ಸ್ಥಿರವಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.
ಗಾಯಗೊಂಡವರನ್ನು ಶಭೀರ್ ಅಬ್ದುಲ್ ರೆಹಮಾನ್ (40), ಪರಮೇಶ್ವರ ಸುಖದರ್ ಗುಪ್ತಾ (28), ರವೀಂದ್ರ ಹರಿಹರ ಚುಮಾ (30), ರಾಮಸೇವಕ ರವೀಂದ್ರ ಪ್ರಸಾದ್ ಪ್ರಜಾಪತಿ (29), ಸಂಜಯ್ ತಿಲಕ್ರಂ ಕಾಂಗೇ (27), ದಿವ್ಯಾಂಶು ಯೋಗೇಂದ್ರ ಯಾದವ್ (18), ಮೊಹಮ್ಮದ್ ಶರೀಫ್ ಶೇಖ್ (25), ಇಂದ್ರಜಿತ್ ಸಹಾನಿ (19) ಮತ್ತು ನೂರ್ ಮೊಹಮ್ಮದ್ ಶೇಖ್ (18) ಎಂದು ಗುರುತಿಸಲಾಗಿದೆ.
ಬೆಳಗ್ಗೆ ಬಾಂದ್ರಾದಿಂದ ಗೋರಖ್‌ಪುರಕ್ಕೆ ಚಲಿಸುವ ರೈಲು 22921 ಸಂಖ್ಯೆಯ ಸಂಖ್ಯೆ ಪ್ಲಾಟ್‌ಫಾರ್ಮ್ ಒಂದನ್ನು ತಲುಪಿತು. ಪ್ರಯಾಣಿಕರ ದೊಡ್ಡ ಗುಂಪು ರೈಲು ಏರಲು ಮುಂದಾದಾಗ ಘಟನೆ ನಡೆದಿದೆ. ಪ್ಲಾಟ್‌ಫಾರ್ಮ್ ನೆಲದ ಮೇಲೆ ರಕ್ತ ಹರಿದಿದ್ದು, ರೈಲ್ವೆ ಪೊಲೀಸರು ಮತ್ತು ಇತರ ಪ್ರಯಾಣಿಕರು ಗಾಯಗೊಂಡವರಿಗೆ ಸ್ಟ್ರೆಚರ್‌ಗಳ ಮೂಲಕ ಸಾಗಿಸಿದರು.
ರೈಲ್ವೆ ಅಧಿಕಾರಿಯೊಬ್ಬರು ಗಾಯಗೊಂಡ ಪ್ರಯಾಣಿಕರನ್ನು ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ಸೆರೆಯಾಗಿದೆ. ಮತ್ತೊಂದು ಕ್ಲಿಪ್‌ನಲ್ಲಿ ಇಬ್ಬರು ಪುರುಷರು ಪ್ಲಾಟ್‌ಫಾರ್ಮ್ ನೆಲದ ಮೇಲೆ ಮಲಗಿರುವುದನ್ನು ತೋರಿಸಿದರು, ಅವರ ಬಟ್ಟೆಗಳು ರಕ್ತದಿಂದ ಕೂಡಿದ್ದವು. ಹತ್ತಿರದಲ್ಲಿ, ಒಬ್ಬ ವ್ಯಕ್ತಿಯು ಬೆಂಚಿನ ಮೇಲೆ ಕುಳಿತಿದ್ದು ಆತನ ಅಂಗಿ ಹರಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.