Advertisement
ಕಾಂಗ್ರೆಸ್ ಟಿಕೆಟ್ ಸಿಗದೆ ನಿರಾಶರಾಗಿದ್ದ ವೈ.ಎಸ್.ವಿ. ದತ್ತ ಅವರನ್ನು ಮರಳಿ ಜೆಡಿಎಸ್‌ಗೆ ಸೇರಿಸಿಕೊಳ್ಳಲು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಇಷ್ಟವಿರಲಿಲ್ಲ. ಆದರೆ ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಸಚಿವ ಎಚ್. ಡಿ. ರೇವಣ್ಣ ಮತ್ತು ಪುತ್ರ ಪ್ರಜ್ವಲ್ ರೇವಣ್ಣ ಅವರು, ಯಗಟಿಯಲ್ಲಿರುವ ದತ್ತ ಅವರ ನಿವಾಸಕ್ಕೆ ತೆರಳಿ ಪಕ್ಷಕ್ಕೆ ಸೇರಿಸಿಕೊಂಡಿರುವುದು ಮಾತ್ರವಲ್ಲದೆ ಕಡೂರಿನ ಅಭ್ಯರ್ಥಿ ಅವರೇ ಎಂದು ಘೋಷಣೆ ಮಾಡಿದ್ದಾರೆ.
Related Articles
Advertisement
ಇದನ್ನು ಅಲ್ಲಗೆಳೆದಿರುವ ಎಚ್.ಡಿ. ರೇವಣ್ಣ, ಎಚ್.ಡಿ. ದೇವೇಗೌಡರೇ ಕರೆ ಮಾಡಿ ಕುಮಾರಸ್ವಾಮಿ ಜತೆ ನಾನು ಮಾತನಾಡಿದ್ದೇನೆ. ನಾನು ಇರುವವರೆಗೂ ದತ್ತ ಕೈ ಬಿಡಬೇಡಿ. ಅವರೇ ನಮ್ಮ ಪಕ್ಷದ ಅಭ್ಯರ್ಥಿ, ನಾನೂ ನಾಮಪತ್ರ ಸಲ್ಲಿಸಲು ಬರುತ್ತೇನೆ ಎಂದು ಹೇಳಿದರು. ಹೀಗಾಗಿ ನಾವೇ ಬಂದಿದ್ದೇವೆ, ದೇವೇ ಗೌಡರ ಆದೇಶ ಪಾಲಿಸಿದ್ದೇವೆ ಎಂದು ತಿಳಿಸಿದ್ದಾರೆ.
ವೈ.ಎಸ್.ವಿ. ದತ್ತ ಕಾಂಗ್ರೆಸ್‌ಗೆ ಹೋಗಿದ್ದರು. ರಾಜಕಾರಣದಲ್ಲಿ ಇವೆಲ್ಲಾ ಸಾಮಾನ್ಯ. ಆದರೆ ತಾಯಿ ಮನೆ -ತಂದೆ ಮನೆ ಇರುತ್ತದೆ. ಐವತ್ತು ವರ್ಷ ಅವರಿದ್ದ ಮನೆ ಇದೇ. ಈಗ ಮತ್ತೆ ವಾಪಸ್ ಬಂದಿದ್ದಾರೆ ಎಂದು ಸಮರ್ಥನೆ ನೀಡಿದ್ದಾರೆ. ಮೂಲಗಳ ಪ್ರಕಾರ ಎಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರು ದತ್ತ ಮರಳಿ ಜೆಡಿಎಸ್‌ಗೆ ಬರಲು ಆಸಕ್ತಿ ವಹಿಸಿ ದೇವೇಗೌಡರ ಬಳಿ ಕಳುಹಿಸಿದ್ದರು.
ಹಾಸನ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಕಡೂರು ಕೂಡ ಬರುವುದರಿಂದ ದತ್ತ ಅವರನ್ನು ಮತ್ತೆ ಜೆಡಿಎಸ್‌ಗೆ ಸೇರಿಸಿಕೊಳ್ಳಲು ಎಚ್.ಡಿ. ರೇವಣ್ಣ ಪಟ್ಟು ಹಿಡಿದು ಒಪ್ಪಿಗೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.