ಅಮರಾವತಿ/ಹೊಸದಿಲ್ಲಿ: ಲೋಕಸಭೆ ಚುನಾವಣೆ ಗಾಗಿ ಕಾಂಗ್ರೆಸ್ ಮಂಗಳವಾರ 17 ಅಭ್ಯರ್ಥಿಗಳ ಹೆಸರುಗಳು ಇರುವ ಮತ್ತೂಂದು ಪಟ್ಟಿ ಬಿಡುಗಡೆ ಮಾಡಿದೆ. ಈ ಪ್ರಮುಖ ಹೆಸರುಗಳೆಂದರೆ ಆಂಧ್ರ ಪ್ರದೇಶ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೈ.ಎಸ್. ಶರ್ಮಿಳಾ, ಬಿಹಾರದಿಂದ ಮೊಹಮ್ಮದ್ ಜಾವೇದ್, ತಾರೀಖ್ ಅನ್ವರ್ ಸೇರಿದ್ದಾರೆ.
ಒಡಿಶಾದಿಂದ 8, ಪಶ್ಚಿಮ ಬಂಗಾಲ ದಿಂದ 1, ಬಿಹಾರ ದಿಂದ 3, ಆಂಧ್ರ ಪ್ರದೇಶದಿಂದ 4 ಕ್ಷೇತ್ರಗಳಿಗೆ ಅಭ್ಯರ್ಥಿ ಗಳನ್ನು ಪ್ರಕಟಿಸಿದೆ. ಆಂಧ್ರಪ್ರದೇಶ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಅವರು ಕಡಪಾ ಲೋಕಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಅಲ್ಲಿ ಅವರು ತಮ್ಮ ಹತ್ತಿರದ ಬಂಧು ಅವಿನಾಶ್ ರೆಡ್ಡಿ ಅವರನ್ನು ಎದುರಿಸಲಿದ್ದಾರೆ. ಅವಿನಾಶ್ ಅವರು ಸಹೋದರ ವೈ.ಎಸ್.ಆರ್.ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದಾರೆ.
ಕಡಪಾ ಲೋಕಸಭಾ ಕ್ಷೇತ್ರದಿಂದ ತಮ್ಮ ತಂದೆ ವೈ.ಎಸ್.ರಾಜಶೇಖರ ರೆಡ್ಡಿ ಸ್ಪರ್ಧಿಸಿದ್ದನ್ನು ಶರ್ಮಿಳಾ ನೆನಪಿಸಿಕೊಂಡರು. ತಮ್ಮ ಸ್ಪರ್ಧೆಯಿಂದಾಗಿ ವೈ.ಎಸ್.ಆರ್.ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಉಂಟಾಗಲಿದೆ ಎಂದರು. ಇದರ ಜತೆಗೆ ಆಂಧ್ರಪ್ರದೇಶ ವಿಧಾನಸಭೆಗೂ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಇನ್ನು ಕೇಂದ್ರದ ಮಾಜಿ ಸಚಿವ ಎಂ.ಎಂ. ಪಲ್ಲಂ ರಾಜು ಅವರನ್ನು ಕಾಕಿನಾಡ ಕ್ಷೇತ್ರದಿಂದ ಸ್ಪರ್ಧಿಸಲು ಸೂಚಿಸಲಾಗಿದೆ. ಜತೆಗೆ ಜೆ.ಡಿ.ಸೀಲಂ ಅವರನ್ನು ಬಾಪ್ತಾಲಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ವರಿಷ್ಠ ಮಂಡಳಿ ಆದೇಶಿಸಿದೆ.
ಇದರ ಜತೆಗೆ ಬಿಹಾರದ ಕಿಶನ್‌ಗಂಜ್‌ನಿಂದ ಮೊಹಮ್ಮದ್ ಜಾವೇದ್, ಕತಿಹಾರ್‌ನಿಂದ ತಾರೀಖ್ ಅನ್ವರ್ ಅವರನ್ನು ಕಾಂಗ್ರೆಸ್ ಕಣಕ್ಕೆ ಇಳಿಸಿದೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಿಂದ ಮುನೀಶ್ ತಮಂಗ್ ಅವರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿ ಕೊಟ್ಟಿದೆ. ಈ ಮೂಲಕ ಪ್ರಧಾನ ಪ್ರತಿಪಕ್ಷ ಕಾಂಗ್ರೆಸ್ 543 ಕ್ಷೇತ್ರಗಳ ಪೈಕಿ 228 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದಂತಾಗಿದೆ. ಇದರೊಂದಿಗೆ ಚುನಾವಣೆಗೆ ಕಾಂಗ್ರೆಸ್ ಬಹುತೇಕ ಸಜ್ಜಾಗಿದೆ.