Advertisement

ಬಿಆರ್‌ಎಸ್ ಶಾಸಕರ ವಿರುದ್ಧ ಹೇಳಿಕೆ; ವೈಎಸ್ ಶರ್ಮಿಳಾ ಪೊಲೀಸ್ ವಶಕ್ಕೆ

05:18 PM Feb 19, 2023 | Team Udayavani |

ಹೈದರಾಬಾದ್: ಬಿಆರ್‌ಎಸ್ ಶಾಸಕ ಬಾನೋತ್ ಶಂಕರ್ ನಾಯ್ಕ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮೊಕದ್ದಮೆ ದಾಖಲಿಸಿರುವ ವೈಎಸ್‌ಆರ್ ತೆಲಂಗಾಣ ಪಕ್ಷದ (ವೈಎಸ್‌ಆರ್‌ಟಿಪಿ) ಅಧ್ಯಕ್ಷೆ ವೈಎಸ್ ಶರ್ಮಿಳಾ ಅವರನ್ನು ಮಹಬೂಬಾಬಾದ್ ಜಿಲ್ಲೆಯಲ್ಲಿ ಭಾನುವಾರ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ವಶಕ್ಕೆ ಪಡೆಯಲಾಗಿದೆ.

Advertisement

ಸ್ಥಳೀಯ ಬಿಆರ್‌ಎಸ್ ಮುಖಂಡರೊಬ್ಬರ ದೂರಿನ ಆಧಾರದ ಮೇಲೆ ಶರ್ಮಿಳಾ ವಿರುದ್ಧ ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶರ್ಮಿಳಾ ಅವರು ಶನಿವಾರ ಮಹಬೂಬಾಬಾದ್ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜ್ಯಾದ್ಯಂತ ಪಾದಯಾತ್ರೆ ‘ಪ್ರಜಾ ಪ್ರಸ್ಥಾನ’ದಲ್ಲಿ ತಮ್ಮ ಹೇಳಿಕೆಗಳ ಮೂಲಕ ಎಸ್‌ಟಿ ಸಮುದಾಯಕ್ಕೆ ಸೇರಿದ ಶಾಸಕರನ್ನು ಅವಮಾನಿಸಿದ್ದಾರೆ ಎಂದು ಅವರು ದೂರು ನೀಡಿದ್ದಾರೆ.

ಶರ್ಮಿಳಾ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಬಿಆರ್‌ಎಸ್ ಪಕ್ಷದವರು ಪ್ರತಿಭಟನೆ ನಡೆಸಿದ ಕಾರಣ, ಕಾನೂನು ಸುವ್ಯವಸ್ಥೆಯನ್ನು ಉಲ್ಲೇಖಿಸಿ ಅವರು ಪಾದಯಾತ್ರೆಗೆ ಅನುಮತಿಯನ್ನು ರದ್ದುಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ನಾವು ಅವರನ್ನು ತಡೆಯುವ ಸಲುವಾಗಿ ಕಸ್ಟಡಿಗೆ ತೆಗೆದುಕೊಂಡಿದ್ದೇವೆ ಮತ್ತು ಅವರ ಸುರಕ್ಷತೆಗಾಗಿ ಹೈದರಾಬಾದ್‌ಗೆ ಸ್ಥಳಾಂತರಿಸಲಾಗುತ್ತಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

Advertisement

ಅವಿಭಜಿತ ಆಂಧ್ರಪ್ರದೇಶದ ಮಾಜಿ ಸಿಎಂ ವೈಎಸ್ ರಾಜಶೇಖರ ರೆಡ್ಡಿ ಅವರ ಪುತ್ರಿ ಮತ್ತು ಪ್ರಸ್ತುತ ಆಂಧ್ರ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ಶರ್ಮಿಳಾ ಅವರ ಪಾದಯಾತ್ರೆ ಪ್ರಸ್ತುತ 3,800 ಕಿಮೀ ಕ್ರಮಿಸಿದ್ದು, ಖಮ್ಮಂ ಜಿಲ್ಲೆಯ ಪಲೈರ್ ತಲುಪಿದಾಗ 4,111 ಕಿಮೀಗಳನ್ನು ಪೂರ್ಣಗೊಳಿಸಲಿದೆ.

ಮಾರ್ಚ್ 5 ರಂದು ಪಾಲೇರ್‌ನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದ್ದು, ಪಾದಯಾತ್ರೆಯು ಅದ್ದೂರಿಯಾಗಿ ಮುಕ್ತಾಯಗೊಳ್ಳಲಿದೆ. ಪಾದಯಾತ್ರೆಯು ಅಕ್ಟೋಬರ್ 20, 2021 ರಂದು ಚೇವೆಲ್ಲಾದಿಂದ ಪ್ರಾರಂಭವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next