ಸಿದ್ದಾಪುರ: ದೇಶದ ರಕ್ಷಣೆಗೆ ಪ್ರತಿಯೊಬ್ಬರು ಜಾತಿ, ಧರ್ಮ, ಭಾಷೆ ಬಿಟ್ಟು ಒಗ್ಗಟ್ಟಾಗಬೇಕು. ದೇಶದ ರಕ್ಷಣೆಗಾಗಿ ಹೋರಾಡಿದವರಿಗಾಗಿ ಒಂದು ಗ್ರಾಮದಲ್ಲಿ ಕಾರ್ಗಿಲ್ ವಿಜಯೋತ್ಸವ ನಡೆದರೇ ಸಾಲದು. ದೇಶದ ಮೇಲಿನ ಅಭಿಮಾನದ ಸಂಕೇತವಾಗಿ ಎಲ್ಲೆಡೆ ವಿಜಯೋತ್ಸವ ನಡೆದಾಗ ದೇಶದ ರಕ್ಷಣೆಗೆ ದುಡಿದ ಯೋಧರಿಗೆ ನಿಜವಾದ ಗೌರವ ಸಲ್ಲುತ್ತದೆ. ಸಂಘಟನೆಯ ಮೂಲಕ ಯುವಕರು ಸಮಾಜ ಹಾಗೂ ದೇಶಸೇವೆಗಾಗಿ ದುಡಿಯಬೇಕು ಎಂದು ಹಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಲಾಡಿ ಸರ್ವೋತ್ತಮ ಹೆಗ್ಡೆ ಅವರು ಹೇಳಿದರು.
ಅವರು ಹಾಲಾಡಿ ಗ್ರಾಮದ ಮೂದೂರಿ ಮೈತ್ರಿ ಯುವಕ ಮಂಡಲದ ವತಿಯಿಂದ ನಡೆದ ಕಾರ್ಗಿಲ್ ವಿಜಯೋತ್ಸವ ಹಾಗೂ ನಿವೃತ್ತ ಸೈನಿಕರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಚೈತ್ರಾ ಕುಂದಾಪುರ ಅವರು ಪ್ರಧಾನ ಭಾಷಣ ಮಾಡಿ, ಭಾರತೀಯರಲ್ಲಿ ದೇಶ ಹಾಗೂ ಸೈನಿಕರ ಮೇಲಿನ ಮನೋಸ್ಥಿತಿ ಬದಲಾಗಬೇಕು. ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬಿಸುವಂತಹ ಕಾರ್ಯ ನಡೆಯಬೇಕು. ದೇಶದ ರಕ್ಷಣೆಗಾಗಿ ಪ್ರತಿಯೊಂದು ಗ್ರಾಮದ ಒಬ್ಬ ಯುವಕನಾದರೂ ಸೈನಿಕನಾಗಿ ಸೇವೆ ಸಲ್ಲಿಸಲು ಮುಂದೆ ಬರಬೇಕು. ದೇಶದ ರಕ್ಷಣೆಗಾಗಿ ಕಠಿನ ಪರಿಸ್ಥಿತಿಯಲ್ಲಿ ಗಡಿ ಕಾಯುವ ಯೋಧರಿಗೆ ಯೋಗ್ಯ ಸ್ಥಾನ, ಮಾನ, ಗೌರವ ದೊರೆಯ ಬೇಕು. ದೇಶದ ರಕ್ಷಣೆಗಾಗಿ ವೀರ ಮರಣ ಹೊಂದಿದ ಯೋಧರಿಗೆ ಸಲ್ಲಿಸುವ ಗೌರವ ಶ್ರೇಷ್ಠವಾಗಿದೆ. ಯುವ ಜನತೆ ದೇಶದ ರಕ್ಷಣೆಗಾಗಿ ದುಡಿಯುವ ಗುರಿ ಹೊಂದ ಬೇಕು ಎಂದರು.
ಮೈತ್ರಿ ಯುವಕ ಮಂಡಲ ಅಧ್ಯಕ್ಷ ಗಂಗಾಧರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಯಾಗಿ ಅರುಣ ಕುಮಾರ ಹಾಲಂಬಿ ಗೋರಾಜೆ, ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಸೇನಾಧಿಕಾರಿ ಅನಂದ ಶೆಟ್ಟಿ ಆವರ್ಸೆ ಹಾಗೂ ನಾಡಾ³ಲು ಗ್ರಾಮದ ವೀರ ಯೋಧ ದಿ| ಉದಯ ಪೂಜಾರಿ ಅವರ ಪರವಾಗಿ ಅವರ ತಂದೆ ಬೀರ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ಕಾರ್ಗಿಲ್ ವಿಜಯೋತ್ಸವ ಪ್ರಯುಕ್ತ ದೇಶ ರಕ್ಷಣೆಗಾಗಿ ವೀರ ಮರಣ ಹೊಂದಿದ ಯೋಧರ ಭಾವಚಿತ್ರಗಳ ಮುಂದೆ ದೀಪ ಬೆಳಗಿ, ಪುಷಾºರ್ಚನೆ ಮೂಲಕ ನಮನ ಸಲ್ಲಿಸಲಾಯಿತು.
ಯುವಕ ಮಂಡಲದ ಸುಧೀರ ಸ್ವಾಗತಿಸಿದರು. ಶಶಿಧರ ಶೆಟ್ಟಿ ಚೇರ್ಕಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು. ಸೂರ್ಯನಾರಾಯಣ ವಂದಿಸಿದರು.