ಬೆಂಗಳೂರು: ಬಿಜೆಪಿಯ ಯುವ ಜನೋತ್ಸವ ಆಯ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ “ಯುವ ಧ್ವನಿ’ ಸರದಿ!
ಕಾಂಗ್ರೆಸ್ ನಾಯಕರು ನಡೆಸುತ್ತಿರುವ “ಪ್ರಜಾ ಧ್ವನಿ’ ಮುಂದುವರಿದ ಭಾಗವಾಗಿ ರಾಜ್ಯದ ಪ್ರಮುಖ ಕಡೆಗಳಲ್ಲಿ “ಯುವ ಧ್ವನಿ’ ಆರಂಭಿಸಲು ಯುವ ಕಾಂಗ್ರೆಸ್ ಉದ್ದೇಶಿಸಿದ್ದು, ಈ ಮೂಲಕ ಯುವ ವರ್ಗವನ್ನು ತನ್ನತ್ತ ಸೆಳೆಯಲು ಮುಂದಾಗಿದೆ.
ನಗರದಲ್ಲಿ ನಡೆದ ಎರಡು ದಿನಗಳ ಕಾಂಗ್ರೆಸ್ ರಾಷ್ಟ್ರೀಯ ಯುವ ಕಾರ್ಯಕಾರಿಣಿ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಯುವ ಕಾಂಗ್ರೆಸ್ ಈಗಾಗಲೇ ಯುವ ಸಮೂಹವನ್ನು ತಲುಪುತ್ತಿದೆ. ಇದು ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹತ್ತು ಕಡೆಗಳಲ್ಲಿ ಯುವ ಸಮ್ಮೇಳನಗಳನ್ನು ನಡೆಸಬೇಕು. ಆ ಮೂಲಕ ಯುವಕರನ್ನು ತಲುಪಬೇಕು ಎಂದು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹತ್ತು ಜಿಲ್ಲೆಗಳಲ್ಲಿ ನಡೆಯುವ ಈ ಸಮ್ಮೇಳನಗಳಿಗೆ ಸದ್ಯ ಯುವ ಧ್ವನಿ ಎಂದು ಹೆಸರಿಡಲು ಸಲಹೆ ಕೇಳಿಬಂದಿದೆ. ಇದಕ್ಕಿಂತ ಉತ್ತಮವಾದ ಹೆಸರು ಸಲಹೆ ಸಿಕ್ಕಿದರೆ ಅದನ್ನೇ ಇಡಲಾಗುವುದು. ಮೂರ್‍ನಾಲ್ಕು ಜಿಲ್ಲೆಗಳು ಸೇರಿ ಒಂದು ಕಡೆ ಸಮಾವೇಶ ನಡೆಸಲಾಗುತ್ತದೆ. ಅಲ್ಲಿ ನಿರುದ್ಯೋಗ ಸೇರಿ ಯುವಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು, ಸರಕಾರದ ವೈಫಲ್ಯಗಳು ಹಾಗೂ ಕಾಂಗ್ರೆಸ್ ಸಾಧನೆಗಳನ್ನು ಆ ವರ್ಗಕ್ಕೆ ಮನದಟ್ಟು ಮಾಡಿಕೊಡುವ ಕೆಲಸ ಆಗಲಿದೆ ಎಂದು ಯುವ ಕಾಂಗ್ರೆಸ್ ನಾಯಕರೊಬ್ಬರು ಮಾಹಿತಿ ನೀಡಿದರು.
ಬಿಜೆಪಿ ಈಗಾಗಲೇ ರಾಜ್ಯದ ಹಲವೆಡೆ ಯುವಜನೋತ್ಸವ ಹಮ್ಮಿಕೊಂಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಈ ಉತ್ಸವಕ್ಕೆ ಚಾಲನೆಯನ್ನೂ ನೀಡಲಾಯಿತು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಈಗ ಯುವ ಧ್ವನಿ ಮೂಲಕ ಆ ದೊಡ್ಡ ವರ್ಗವನ್ನು ತಲುಪಲು ಕಾರ್ಯಕ್ರಮ ರೂಪಿಸುತ್ತಿದೆ. ಮಾಸಾಂತ್ಯಕ್ಕೆ ಇದು ಆರಂಭಗೊಳ್ಳುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.