ಸಿಂದಗಿ: ಗ್ರಾಮೀಣ ಪ್ರದೇಶದ ಯುವಕ, ಯುವತಿಯರು ಸಂಘಟಿಕರಾಗಿ ಗ್ರಾಮದ ಸ್ವಚ್ಛತೆ ಹಾಗೂ ಅಭಿವೃದ್ಧಿಗಾಗಿ ಶ್ರಮಿಸಲು ಕಂಕಣಬದ್ಧರಾಗಿ ನಿಲ್ಲಬೇಕು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯ ಅಧಿಕಾರಿ ಡಿ. ದಯಾನಂದ ಕರೆ ನೀಡಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ನೆಹರು ಯುವ ಕೇಂದ್ರ, ಜಿ.ಪಿ. ಪೋರವಾಲ ಕಲಾ, ವಾಣಿಜ್ಯ ಮತ್ತು ವಿ.ವಿ. ಸಾಲಿಮಠ
ವಿಜ್ಞಾನ ಮಹಾವಿದ್ಯಾಲಯದ ಎನೆಸ್ಸೆಸ್ ಘಟಕದ ವತಿಯಿಂದ ನಡೆದ ಸಿಂದಗಿ ತಾಲೂಕು ಮಟ್ಟದ ಯುವ ಸಂಘಗಳ ಅಭಿವೃದ್ಧಿ ಪ್ರಚಾರ ಅಂದೋಲನ ಯುವ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರಕಾರ ಯುವ ಜನತೆಯ ಶಕ್ತಿ ಸದ್ಭಳಕೆ ಮಾಡಿಕೊಳ್ಳಲು ಸಾಕಷ್ಟು ಯೋಜನೆ ಅನುಷ್ಠಾನಕ್ಕೆ ತಂದಿದೆ. ಬಯಲು ಶೌಚಾಲಯ ಮುಕ್ತ ಗ್ರಾಮ ಮಾಡಲಿಕ್ಕೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಕಲೆ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಕ್ರೀಡೆಯಲ್ಲಿ ಸಕ್ರೀಯವಾಗಿ ಭಾಗವಹಿಸಿ ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು. ಇಲಾಖೆಯಿಂದ ಯುವ ಸಂಘಗಳಿಗೆ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸಲಾಗುವುದು. ಈ ಯೋಜನೆಗಳ ಪ್ರಯೋಜನವನ್ನು ಯುವ ಸಂಘಟನೆಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಾಲೂಕು ಕ್ರೀಡಾಧಿಕಾರಿ ಈಶ್ವರಕುಮಾರ ಲಕ್ಕೊಂಡ ಮಾತನಾಡಿ, ಪ್ರತಿ ವರ್ಷ ಯುವಕರಲ್ಲಿ ಕ್ರೀಡಾಸಕ್ತಿ ಬೆಳೆಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಗರ ಹಾಗೂ ಹೋಬಳಿ ಮಟ್ಟದಲ್ಲಿ ಗ್ರಾಮೀಣ ಕ್ರೀಡೋತ್ಸವ ಹಮ್ಮಿಕೊಳ್ಳಲಾಗುತ್ತದೆ. ಗ್ರಾಮೀಣ ಕ್ರೀಡೆಗಳಾದ ಹಗ್ಗ ಜಗ್ಗಾಟ, ಮೂರು ಕಾಲಿನ ಓಟ, ಸಾಮೂಹಿಕ ರಸ್ತೆ ಓಟ, ಸ್ಲೋ ಸೈಕಲ್ ರೇಸ್, ಚಿಣ್ಣಿ ದಾಂಡು, ಸಂಗೀತ ಕುರ್ಚಿ, ಕುಂಟಾಟ, ರಂಗೋಲಿಯಲ್ಲಿ ಮಕ್ಕಳು ಆಸಕ್ತಿ ತೋರಿಸಬೇಕು ಎಂದರು.
ಪ್ರಾಧ್ಯಾಪಕ ಡಾ| ಪ್ರಕಾಶ ಲಮಾಣಿ ಮಾತನಾಡಿ, ಸರಕಾರದ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯುವಕರಿಗೆ ತಲುಪಿಸುವ ಜವಾಬ್ದಾರಿ ಸಂಘಗಳ ಮೇಲಿದ್ದು ಸಂಘಗಳು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ದೇಶವನ್ನು ಪ್ರಗತಿಯತ್ತ ಸಾಗಿಸಬೇಕಾಗಿದೆ ಎಂದರು. ತಾಲೂಕು ಕ್ರೀಡಾಧಿಕಾರಿ ಈಶ್ವರಕುಮಾರ ಲಕ್ಕೊಂಡ, ಮುರುಗೇಶ ಹಿಟ್ಟಿ, ರಮೇಶ ಪೂಜಾರ, ಪೊ| ವಿ.ಆರ್. ಪಾಟೀಲ, ಅಧ್ಯಕ್ಷತೆ ವಹಿಸಿದ್ದ ತಾಪಂ ವ್ಯವಸ್ಥಾಪಕ ಮುರುಗೇಶ ನಾರಾಯಣ ಮಾತನಾಡಿದರು. ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಯುವಕ, ಯುವತಿ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.