Advertisement
ಸ್ಮಾರ್ಟ್‌ಸಿಟಿ ಯೋಜನೆಗಳ ಬಗ್ಗೆ ಸಾಕಷ್ಟು ಅಸಮಾಧಾನ, ಆರೋಪಗಳ ನಡುವೆ ಸ್ಮಾರ್ಟ್ ಸೈಕಲ್ ಸವಾರಿ ಜನರಿಗೆ ಖುಷಿ ನೀಡಿದೆ. ಪರಿಸರ ಸ್ನೇಹಿ ಸಾರಿಗೆಗೆ ಒತ್ತು ನೀಡುವ ನಿಟ್ಟಿನಲ್ಲಿ ಶಿರೂರ ಪಾರ್ಕ್, ರವಿ ನಗರ, ವಿದ್ಯಾನಗರ, ತೋಳನ ಕೆರೆ ಭಾಗದಲ್ಲಿ 8.5 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಸೈಕಲ್ ಯೋಜನೆ ಅನುಷ್ಠಾನಗೊಳಿಸಲಾಗಿದೆ. 32 ಸೈಕಲ್ ನಿಲ್ದಾಣ (ಡಾಕಿಂಗ್ ಕೇಂದ್ರ)ಗಳಿಂದ 340 ಸೈಕಲ್‌ಗಳು ಲಭ್ಯವಿವೆ. ಇವುಗಳಲ್ಲಿ 310 ಸಾಮಾನ್ಯ ಸೈಕಲ್, 30 ಎಲೆಕ್ಟ್ರಿಕ್ ಮತ್ತು ಪೆಡಲ್ ಆಧಾರಿತ ಸೈಕಲ್‌ಗಳಿವೆ. ಕಳೆದ ಒಂದೂವರೆ ತಿಂಗಳಿನಿಂದ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ.
Related Articles
Advertisement
ಬಳಕೆದಾರ ಸ್ನೇಹಿ: ಚಿಕ್ಕಮಕ್ಕಳು, ಹಿರಿಯರು ಕೂಡ ಈ ಸೈಕಲ್‌ಗಳನ್ನು ಬಳಸಬಹುದಾಗಿದೆ. ಅಗತ್ಯಕ್ಕೆ ತಕ್ಕಂತೆ ಎತ್ತರವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬಹುದಾಗಿದೆ. ನೋಂದಣಿ, ಬಿಡುಗಡೆ, ಸವಾರಿ ಹಾಗೂ ಹಿಂದಿಸುಗಿಸುವಿಕೆ ನಾಲ್ಕು ಹಂತಗಳ ಯೋಜನೆಯಾಗಿದೆ. ಪ್ರತಿಯೊಂದು ಸೈಕಲ್‌ಗಳು ಜಿಪಿಎಸ್ ಹೊಂದಿವೆ. ಹೀಗಾಗಿ ಕಳ್ಳತನ ಅಸಾಧ್ಯ. ಜಿಯೋ ಫಿನಿಷಿಂಗ್ ಮಾಡಿರುವ ಪ್ರದೇಶದಿಂದ ಹೊರಹೋದರೂ ಇಲ್ಲಿನ ಕಾಟನ್ ಮಾರುಕಟ್ಟೆಯಸಾಂಸ್ಕೃತಿಕ ಭವನದಲ್ಲಿ ನಿರ್ಮಿಸಿರುವ ಇಂಟಿಗ್ರೇಟೆಡ್ ಕಮಾಂಡಿಂಗ್ ಕಂಟ್ರೋಲ್ ಸೆಂಟರ್‌ಗೆ ಸಂದೇಶ ರವಾನೆಯಾಗುತ್ತದೆ. ನೋಂದಣಿ ಕಾರ್ಯ ಸುಲಭ
ಸ್ಮಾರ್ಟ್ ಸೈಕಲ್‌ಗಳನ್ನು ಬೇಕಾಬಿಟ್ಟಿಯಾಗಿ ನೀಡುವುದಿಲ್ಲ. ಈ ಸೇವೆ ಪಡೆಯಬೇಕಾದರೆ ಮುಂಚಿತವಾಗಿ ನೋಂದಣಿ ಮಾಡಿಸಿ ಕಾರ್ಡ್ ಪಡೆಯಬೇಕು. ಇದಕ್ಕಾಗಿ ಸ್ಮಾರ್ಟ್ ಸಿಟಿ ಕಚೇರಿ, ತೋಳನಕೆರೆ ಮುಖ್ಯದ್ವಾರ, ನೃಪತುಂಗ ಬೆಟ್ಟ ಡಾಕಿಂಗ್ ಕೇಂದ್ರದಲ್ಲಿ ಕಾರ್ಡ್ ಪಡೆಯಬಹುದಾಗಿದೆ. 100 ರೂ. ಶುಲ್ಕವಿದ್ದು, ಈ ಹಣ ಸಂಪೂರ್ಣ ಕಾರ್ಡಿಗೆ ಜಮೆಯಾಗಲಿದೆ. ಇದಕ್ಕಾಗಿ ಮೂಲ ಆಧಾರ ಕಾರ್ಡ್ ಅಥವಾ ವಿಳಾಸ ಹೊಂದಿರುವ ದಾಖಲೆ ತೆಗೆದುಕೊಂಡು ಹೋದರೆ ಸ್ಕ್ಯಾನ್ ಮಾಡಿಕೊಂಡು ಕಾರ್ಡ್ ನೀಡುವರು. ಕಾರ್ಡ್‌ನಲ್ಲಿರುವ ಹಣ ಬಳಕೆಗೆ ಯಾವುದೇ ಕಾಲಮಿತಿ ಇರುವುದಿಲ್ಲ. ಎಲೆಕ್ಟ್ರಿಕ್ ಸೈಕಲ್ ಮೊದಲ ಪ್ರಯತ್ನ
ಯೋಜನೆಯಲ್ಲಿ ಬಳಸಿರುವ 34 ಎಲೆಕ್ಟ್ರಿಕ್‌ನೊಂದಿಗೆ ಪೆಡಲ್ ಹೊಂದಿರುವ ಸೈಕಲ್‌ಗಳು ವಿಶೇಷವಾಗಿದ್ದು, ಹಿರಿಯರು ಹೆಚ್ಚು ಇಷ್ಟಪಡುವ ಸೈಕಲ್ ಗಳಾಗಿವೆ. ಎಲೆಕ್ಟ್ರಿಕ್ ಜೊತೆಗೆ ಪೆಡಲ್ ಹೊಂದಿರುವುದರಿಂದ ಅಗತ್ಯಕ್ಕೆ ತಕ್ಕಂತೆ ಎರಡನ್ನೂ ಬಳಸಬಹುದಾಗಿದೆ. ಪ್ರತಿ ನಿಲ್ದಾಣದಲ್ಲಿ ಒಂದೊಂದು ಈ ಸೈಕಲ್‌ಗಳು ಲಭ್ಯ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಇನ್ನೂ ಸ್ಮಾರ್ಟ್‌ಸಿಟಿಗೆ ಆಯ್ಕೆಯಾಗಿರುವ ನಗರಗಳ ಪೈಕಿ ಈ ಪ್ರಯತ್ನ ಮೊದಲು. ಯೋಜನೆ ವಿಸ್ತಾರ ಸಾಧ್ಯವೇ?
ಪ್ರಮುಖವಾಗಿ ವಿದ್ಯಾರ್ಥಿಗಳು ಹಾಗೂ ಸೈಕಲ್ ಮಾರ್ಗದ ಹಿನ್ನೆಲೆಯಲ್ಲಿ ಒಂದು ಭಾಗದಲ್ಲಿ ಯೋಜನೆ ರೂಪಿಸಲಾಗಿತ್ತು. ಆದರೆ ಈ ಯೋಜನೆ ಸಾರ್ವಜನಿಕರು ಬಂದು ಹೋಗುವ ಪ್ರಮುಖ ಸ್ಥಳಗಳಾದ ಪಾಲಿಕೆ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಕ್ಕೂ ವಿಸ್ತರಿಸಿದರೆ ಮತ್ತಷ್ಟು ಅನುಕೂಲವಾಗಲಿದೆ. ಪರಿಸರ ಹಾಗೂ ಆರೋಗ್ಯದ ಬಗ್ಗೆ ಒಂದಿಷ್ಟು ಕಾಳಜಿ ಹೊಂದಿರುವ ಸಿಬ್ಬಂದಿ ಕೂಡ ಬಳಸಬಹುದಾಗಿದೆ ಎನ್ನುವ ಅಭಿಪ್ರಾಯಗಳಿವೆ. ಸಾರಿಗೆ ಸಂಪರ್ಕ ಇಲ್ಲದ ಪ್ರದೇಶ ಕೇಂದ್ರೀಕರಿಸಿ ಈ ಸೇವೆ ವಿಸ್ತರಿಸುವ ಚರ್ಚೆಗಳು ನಡೆದಿವೆ. ಪೂರ್ಣ ಪ್ರಮಾಣದಲ್ಲಿ ಆರಂಭವಾದ ಮೊದಲ ತಿಂಗಳು ಸೈಕಲ್‌ಪ್ರಿಯರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಈ ಭಾಗದ 25,000 ಸಾವಿರ ಜನರನ್ನುದ್ದೇಶಿಸಿ ಈ ಯೋಜನೆ ರೂಪಿಸಲಾಗಿದೆ. ಇತರೆಡೆಗೆ ವಿಸ್ತರಿಸಬೇಕೆನ್ನುವ ಬೇಡಿಕೆಗಳಿವೆ. ಸಾಧಕ-ಬಾಧಕಗಳ ಬಗ್ಗೆ ಚಿಂತನೆ ಮಾಡಿ ಹಂತ ಹಂತವಾಗಿ ವಿಸ್ತರಿಸಲಾಗುವುದು. ನೋಂದಣಿ ಸೇರಿದಂತೆ ಪ್ರತಿಯೊಂದು ಹಂತವೂ ಬಳಕೆದಾರರ ಸ್ನೇಹಿಯಾಗಿದೆ.
ಶಕೀಲ್ ಅಹ್ಮದ್, ವ್ಯವಸ್ಥಾಪಕ ನಿರ್ದೇಶಕ,
ಸ್ಮಾರ್ಟ್‌ಸಿಟಿ ಕಂಪನಿ ಹೇಮರಡ್ಡಿ ಸೈದಾಪುರ