ಕಟಪಾಡಿ : ಉದ್ಯಾವರ ಗ್ರಾಮದ ಪಿತ್ರೋಡಿ ಎಂಬಲ್ಲಿನ ಪಾಪನಾಶಿನಿ ಹೊಳೆಯಲ್ಲಿ ಕಪ್ಪೆ ಚಿಪ್ಪು ಹೆಕ್ಕಲು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆಯು ಮಾ.15ರಂದು ನಡೆದಿದೆ.
ನಾಪತ್ತೆಯಾದ ಯುವಕನನ್ನು ಶಿರ್ವ ಪಂಜಿಮಾರು ನಿವಾಸಿ ಸುಮಂತ್ (22) ಎಂದು ಗುರುತಿಸಲಾಗಿದೆ.
ನಾಪತ್ತೆಯಾದ ಯುವಕ ಸುಮಂತ್ ಎಲೆಕ್ಟ್ರೀಶಿಯನ್ ವೃತ್ತಿ ಮಾಡುತ್ತಿದ್ದು ತನ್ನ ಮಾವನಾದ ಸಂತೋಷ್ ಕುಮಾರ್ ಜೊತೆಯಾಗಿ ಉದ್ಯಾವರ ಗ್ರಾಮ ಪಂಚಾಯತ್ ಕಚೇರಿಯ ಬಳಿಯ ಹೊಟೇಲು ವ್ಯಾಪಾರಿ ಸಂಬಂಧಿ ಉದಯ್ ಮೂಲ್ಯ ಎಂಬವರೊಂದಿಗೆ ಕಪ್ಪೆಚಿಪ್ಪು ಹೆಕ್ಕಲು ಪಿತ್ರೋಡಿಯ ಪಾಪನಾಶಿನಿ ಹೊಳೆಯ ಕಡೆಗೆ ತೆರಳಿದ್ದರು.
ಸುಮಂತ್ ಮತ್ತು ಸಂತೋಷ್ ಕುಮಾರ್ ಇಬ್ಬರು ಮಾತ್ರ ಕಪ್ಪೆ ಚಿಪ್ಪು ಹೆಕ್ಕಲು ಹೊಳೆಗೆ ಇಳಿದಿದ್ದು, ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಕೊಚ್ಚಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಇದನ್ನು ಗಮನಿಸಿದ ಸ್ಥಳೀಯರು ಸಂತೋಷ್ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಹೊಳೆಯ ನೀರಿನ ಉಬ್ಬರದಲ್ಲಿ ಸುಮಂತ್ ರಕ್ಷಣೆ ಸಾಧ್ಯವಾಗಲಿಲ್ಲ.
ಇದನ್ನೂ ಓದಿ :ವೈರಮುಡಿ ಉತ್ಸವ: ಹೊರ ರಾಜ್ಯ, ಜಿಲ್ಲೆಯ ಭಕ್ತಾಧಿಗಳಿಗೆ ನಿರ್ಬಂಧ, ಸರಳವಾಗಿ ಆಚರಿಸಲು ನಿರ್ಧಾರ
ಸ್ಥಳೀಯ ಈಜು ತಜ್ಞರು, ಮಲ್ಪೆಯ ಮುಳುಗು ತಜ್ಞ ಈಶ್ವರ್, ಜಿಲ್ಲಾ ಅಗ್ನಿಶಾಮಕದಳದ ಸಿಬಂದಿಯವರು ನಾಪತ್ತೆಯಾದ ಯುವಕನಿಗಾಗಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.
ಕಾಪು ಪಿ.ಎಸ್.ಐ. ರಾಘವೇಂದ್ರ ಸಿ.ಹಾಗೂ ಆರಕ್ಷಕ ಸಿಬಂದಿಯವರು ಘಟನಾ ಸ್ಥಳದಲ್ಲಿದ್ದು ಕಾರ್ಯಾಚರಣೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ.