Advertisement

 ಜಲ ಸಂರಕ್ಷಣೆಯ ಕಾರ್ಯಕ್ಕೆ ಯುವಕ ಮಂಡಲ ಬೆಂಬಲ

03:19 PM Jan 13, 2018 | Team Udayavani |

ಸುಳ್ಯ : ಬಿರು ಬೇಸಗೆಯಲ್ಲಿಯು ಗುಡ್ಡದಿಂದ ಒರತೆ ರೂಪದಲ್ಲಿ ಒಸರುವ ನೀರು ಬುವಿಯೊಳಗೆ ಇಳಿದರೆ ಹೇಗೆ ಎಂಬ ಯೋಚನೆ ಮೂಡಿದ್ದ ಯುವಕರಿಗೆ. ಸದುದ್ದೇಶದ ಸಂಗತಿ ಎಂದು ಅದಕ್ಕೆ ಕೈ ಜೋಡಿ ಸಿದ್ದು ಕೃಷಿ ಕುಟುಂಬಗಳು. ಪರಿಣಾಮ ಕನಕಮಜಲಿನ ಕಾರಿಂಜೆಯಲ್ಲಿ ಗುಡ್ಡೆಯಿಂದ ಹರಿದು ಪೋಲಾಗುತ್ತಿದ್ದ ಜಲಧಾರೆ ಹೊಂಡದೊಳಗೆ ಇಂಗಿ ಅಂತರ್‌ ಜಲ ಹೆಚ್ಚಿಸುವ ಕಾಯಕವಿಲ್ಲಿ ಸದ್ದಿಲ್ಲದೇ ಸಾಗುತ್ತಿದೆ..!

Advertisement

ಕನಕಮಜಲು ಗ್ರಾಮದ ಕಾರಿಂಜೆ ಸಿಆರ್‌ಸಿ ಕಾಲನಿ ಗುಡ್ಡಭಾಗದಿಂದ ಸುರಂಗದ ಮೂಲಕ ಬೇಸಗೆ ಕಾಲದಲ್ಲಿಯು ನೀರಿನ ಒರತೆ ತಪ್ಪುವುದಿಲ್ಲ. ಸ್ಥಳೀಯ ಆರು ಕುಟುಂಬಗಳು ರಬ್ಬರ್‌ ತೋಟ¨ಕೆಳಭಾಗದ ಸುರಂಗದ ಬಳಿಯಿಂದ ಪೈಪ್‌ ಅಳವಡಿಸಿ, ಕೃಷಿ ತೋಟಕ್ಕೆ ಬೇಸಗೆ ಕಾಲದಲ್ಲಿ ನೀರು ಬಳಸಿಕೊಂಡದ್ದು ಇದೆ. 2 ವರ್ಷದ ಹಿಂದೆ ಎಲ್ಲ ಮನೆಗಳಿಗೆ ನೀರಿನ ಪ್ರತ್ಯೇಕ ವ್ಯವಸ್ಥೆ ಆದ ಅನಂತರ ಈ ನೀರು ಸದ್ಬಳಕೆ ಆಗುತ್ತಿರಲಿಲ್ಲ. ನೀರಿನ ಸಂರಕ್ಷಣೆ, ಸಣ್ಣ-ಸಣ್ಣ ಒಡ್ಡುಗಳು ಮೂಲಕ ಅಂತರ್‌ಜಲದ ಬಗ್ಗೆ ಗ್ರಾಮದಲ್ಲಿ ಜಾಗೃತಿ ಮೂಡಿಸುತ್ತಿದ್ದ ಕನಕಮಜಲು  ಯುವಕ ಮಂಡಲಕ್ಕೆ ಈ ನೀರನ್ನು ಸದ್ಬಳಕೆ ಮಾಡುವ ಬಗ್ಗೆ ಯೋಚನೆ ಹೊಳೆಯಿತು. ಜತೆಗೆ ಈ ಹಿಂದೆ ನೀರು ಬಳಸುತ್ತಿದ್ದ ಆರು ಮನೆಯವರು ಮನಸ್ಸು ಮಾಡಿದರು. ಅದೀಗ ಯಶಸ್ಸು ಕಂಡಿದ್ದು, ಗುಡ್ಡದ ನೀರು ಹೊಂಡ ತುಂಬುತ್ತಿದೆ.

ನೀರು ಇಂಗಿಸುವಿಕೆ
ಒರತೆ ಬೀಳುತ್ತಿದ್ದ ಸುರಂಗ ಸ್ಥಳದಲ್ಲಿ ಪೋಲಾಗಿ ಹರಿಯುತ್ತಿದ್ದ ನೀರನ್ನು ಭೂಮಿಗೆ ಹರಿಸುವ ಪೂರ್ವಭಾವಿ ಕಾರ್ಯವನ್ನು ಯುವಕ ಮಂಡಲದ ಸದಸ್ಯರು ಶ್ರಮದಾನ ಮೂಲಕ ಮಾಡಿದರು. ಕೆಲ ತಾಸಿನ ಕೆಲಸದಲ್ಲಿಯೇ ಅಲ್ಲಿ ನೀರು ಹರಿಯಲು ಸಜ್ಜಾಗಿತ್ತು. ಅಡಿಕೆ ತೋಟದೊಳಗಿನ ಹೊಂಡವನ್ನು ಆರು ಮನೆಯವರು, ಇತರರು ಸೇರಿ ದುರಸ್ತಿಗೊಳಿಸಿದ್ದಾರೆ. ಅನಂತರ ಪೈಪ್‌ ಅಳವಡಿಸಿ, 200 ಮೀ ದೂರದಲ್ಲಿನ ಹೊಂಡಕ್ಕೆ ನೀರು ಹರಿಸಲಾಗಿದೆ. ಹೊಂಡದಿಂದ ನೀರು ನೇರವಾಗಿ ಭೂಮಿಗೆ ಇಂಗುತ್ತಿದೆ. ಈಗಲೂ ಹೊಂಡದಲ್ಲಿ ಮುಕ್ಕಾಲು ಭಾಗದಷ್ಟು ನೀರು ನಿಂತಿದೆ ಎನ್ನುತ್ತಾರೆ ಜಯಪ್ರಸಾದ್‌ ಅವರು. 

ಗುಡ್ಡದ ನೀರಿನ ಕಥೆ
ಕೆಲ ವರ್ಷಗಳ ಹಿಂದೆ ಈ ನೀರನ್ನು ತೋಟಕ್ಕೆ ಬಳಸಲಾಗುತಿತ್ತು. ಚಂದ್ರಶೇಖರ್‌, ಜಯಪ್ರಸಾದ್‌, ಕುಶಾಲಪ್ಪ, ಬಾಲಕೃಷ್ಣ, ನಾರಾಯಣ ಗೌಡ, ರುಕ್ಮಯ ಗೌಡ ಅವರು ನೀರು ಸಂಗ್ರಹಿಸಲು ತಮ್ಮ ತೋಟದಲ್ಲಿ 70 μàಟ್‌ ಉದ್ದ, 2 ಕೋಲು ಆಳದ ಹೊಂಡ ನಿರ್ಮಿಸಿದ್ದರು. ಗುಡ್ಡದ ಬಳಿಯಿಂದ ಪೈಪ್‌ ಮೂಲಕ ಈ ಹೊಂಡಕ್ಕೆ ನೀರು ಹರಿದು ಬರುತ್ತಿತ್ತು. ಅನಂತರ ಆರು ಮಂದಿ, ತಲಾ ಒಬ್ಬರಂತೆ ವಾರಕ್ಕೆ ಒಂದು ದಿನ ಈ ಹೊಂಡದಿಂದ ನೀರನ್ನು ತೋಟಕ್ಕೆ
ಬಳಸುತ್ತಿದ್ದರು. ಎಲ್ಲ ಮನೆಗಳಲ್ಲಿ ಕೃಷಿ ತೋಟಕ್ಕೆ ನೀರಿನ ಪರ್ಯಾಯ ವ್ಯವಸ್ಥೆ ಆದ ಕಾರಣದಿಂದ, ಎರಡು ವರ್ಷದಿಂದ ಗುಡ್ಡದ ನೀರನ್ನು ಬಳಸುತ್ತಿಲ್ಲ.

ಹದಿನೈದಕ್ಕೂ ಅಧಿಕ ಕಟ್ಟ
ಗ್ರಾಮದಲ್ಲಿ ಅಂದಾಜು ಹದಿನೈದಕ್ಕೂ ಅಧಿಕ ನೀರು ಸಂರಕ್ಷಣೆಯ ಒಡ್ಡುಗಳಿವೆ. ಈ ವರ್ಷ ಅಕ್ಕಿಮಲೆ, ಕಾರಿಂಜ, ಕೊರಂಬಡ್ಕ, ಪಂಜಿಗುಡ್ಡೆಯಲ್ಲಿ ನೀರಿಂಗಿಸುವ ಕಾರ್ಯದಲ್ಲಿ ಕನಕಮಜಲು ಯುವಕ ಮಂಡಲ ಸಹಕಾರ ನೀಡಿದೆ. ಕಾಪಿಲದಲ್ಲಿ ಯೋಜನೆ ಕೈಗೆತ್ತಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಉಳಿದ ಕಡೆಗಳಲ್ಲಿ ಜನರೇ ಸ್ವಯಂ ಪ್ರೇರಿತರಾಗಿ ಕಟ್ಟ ಕಟ್ಟಿದ್ದು ಇದೆ. ಸರಕಾರದ ಅನುದಾನ ಬಳಸಿಯು ನಿರ್ಮಾಣ ಆಗಿದೆ. ಅಲ್ಲೆಲ್ಲಾ ಜಲ ಸಂರಕ್ಷಣೆ ಕಾರ್ಯ ಪ್ರಗತಿಯಲ್ಲಿದೆ.

Advertisement

ಅಗತ್ಯ ಕಾರ್ಯ
ನೀರಿನ ಸಮಸ್ಯೆ ಪರಿಹಾರಕ್ಕೆ ಕೊಳವೆಬಾವಿ ಶಾಶ್ವತ ಪರಿಹಾರ ಅಲ್ಲ. ಬದಲಿಗೆ ಹರಿದು ಹೋಗುವ ನೀರನ್ನು ಮತ್ತೆ ಬುವಿಗಿಳಿಸುವ, ಅದನ್ನು ಬಳಸುವ ಪ್ರಯತ್ನ ಆಗಬೇಕು. ಅದಕ್ಕೆ ಯುವಕ ಮಂಡಲ ಬೆಂಬಲ ನೀಡಿದೆ. ಮುಂದಿನ
ವರ್ಷ ಜಲಜಾಗೃತಿಯ ನಿಟ್ಟಿನಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವ ಉದ್ದೇಶ ಹೊಂದಲಾಗಿದೆ.
 - ಸಂತೋಷ್‌ ಕುಮಾರ್‌ ನೆಡೀಲು,
    ಅಧ್ಯಕ್ಷರು, ಯುವಕ ಮಂಡಲ, ಕನಕಮಜಲು

ಜಾಗೃತಿ ಕಾರ್ಯ
ಮೂರು ಬಾರಿ ಜಲತಜ್ಞ ಶ್ರೀಪಡ್ರೆ, ಒಂದು ಬಾರಿ ನೋಡೆಲ್‌ ಅಧಿಕಾರಿ ಸುಧಾಕರ್‌ ಅವರ ಉಪಸ್ಥಿತಿಯಲ್ಲಿ ನೀರು ಸಂರಕ್ಷಿಸುವ ಬಗ್ಗೆ ಕಾರ್ಯಾಗಾರ ಗ್ರಾಮದಲ್ಲಿ ನಡೆದಿದೆ. ನಾವಿಲ್ಲಿ ಜಾಗೃತಿ ಮೂಡಿಸುವುದಷ್ಟೆ. ಇಲ್ಲಿ ನಾವೇ ಮಾಡಿದ್ದೇವೆ ಅನ್ನುವುದಲ್ಲ. ಎಲ್ಲರಲ್ಲಿ ನೀರಿನ ಸಂರಕ್ಷಣೆಯ ಬಗ್ಗೆ ಮನಸ್ಥಿತಿ ಮೂಡಲಿ ಅನ್ನುವುದು ನಮ್ಮ ಮುಖ್ಯ ಉದ್ದೇಶ.
– ಲಕ್ಷ್ಮೀನಾರಾಯಣ ಕಜೆಗದ್ದೆ
   ಮಾಜಿ ಅಧ್ಯಕ್ಷ, ಯುವಕ ಮಂಡಲ
    ಕನಕಮಜಲು

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next