Advertisement

ಗಮಕ ಪ್ರಸ್ತುತಿಯಲ್ಲಿ ಯಕ್ಷಪ್ರಶ್ನೆ

11:31 AM Dec 29, 2017 | |

ಕುಮಾರ ವ್ಯಾಸ ಭಾರತದ ವನಪರ್ವದಲ್ಲಿ ಬರುವ ಸನ್ನಿವೇಶ ಯಕ್ಷ ಪ್ರಶ್ನೆ. ಓದುಗನ ಕುತೂಹಲವನ್ನು ಹೆಚ್ಚಿಸುತ್ತ, ಚಿಂತನೆಯನ್ನು ಹೊಡೆದೆಬ್ಬಿಸುವ, ವಿವೇಕಿಯನ್ನಾಗಿ ಮಾಡುವ ಒಂದು ಉಪಾಖ್ಯಾನವಿದು. ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನ ಆರ್‌. ಎನ್‌. ಶೆಟ್ಟಿ ಸಭಾ ಭವನದಲ್ಲಿ ಡಿ. 20ರಂದು ನಡೆದ ಡಾ| ಎಚ್‌. ಶಾಂತಾರಾಮ್‌ ಗಮಕ ಪ್ರಶಸ್ತಿ ಪ್ರದಾನದ ಸಂದರ್ಭದಲ್ಲಿ ಗಮಕ ವಾಚನ ಪ್ರಶಸ್ತಿ ಪಡೆದ ಡಾ| ಸನತ್‌ ಕುಮಾರ್‌ ಸೋಮಯಾಜಿ ಮತ್ತು ವ್ಯಾಖ್ಯಾನ ಪ್ರಶಸ್ತಿ ಪಡೆದ ಎಂ.ಆರ್‌.ರಾಮಮೂರ್ತಿ ಇವರುಗಳು ಈ ಕಾರ್ಯ ಕ್ರಮವನ್ನು ನಡೆಸಿಕೊಟ್ಟರು.

Advertisement

 ಸಾಂಪ್ರದಾಯಿಕ ಹಂಸಧ್ವನಿಯ ವಿಘ್ನೇಶನ ಸ್ತುತಿಯೊಂದಿಗೆ ಕಲಾವಿದರು ಯಕ್ಷಪ್ರಶ್ನೆಗೆ ನಾಂದಿ ಹಾಡಿದರು. ವ್ಯಾಖ್ಯಾನಕಾರರು ಯಕ್ಷಪ್ರಶ್ನೆಯ ಮಹತ್ವವನ್ನು ವಿವರಿಸಿದರು. ಮಹಾಭಾರತದ ಅತ್ಯಂತ ಪ್ರಮುಖ ಘಟ್ಟವಾದ ಇಲ್ಲಿ ಯಮಧರ್ಮನು ತನ್ನ ಪುತ್ರನನ್ನು ಪರೀಕ್ಷಿಸುವ ಉದ್ದೇಶದಿಂದ ಸೃಷ್ಟಿಸುವ ಈ ಸಂದರ್ಭವು ನಮಗೆಲ್ಲರಿಗೂ ಎಷ್ಟು ಬೋಧಪ್ರದ ವಾಗಿದೆಯೆಂದೂ, ಥಟ್‌ ಅಂತ ಹೇಳಿ ಎನ್ನುವ ರೀತಿಯಲ್ಲಿ ಯಕ್ಷನು ಧರ್ಮರಾಯನಿಗೆ ಕೇಳುವ ಪ್ರಶ್ನೆಗಳು ಮತ್ತು ಧರ್ಮರಾಯ ನೀಡುವ ಉತ್ತರಗಳು ಇಂದಿನ ವಿದ್ಯಾರ್ಥಿಗಳಿಗೆ ಎಷ್ಟು ಉಪಯುಕ್ತವಾಗಿದೆಯೆಂದೂ ಹೇಳುತ್ತ ಕಥೆಯ ಹಿನ್ನೆಲೆಯನ್ನು ನಿರೂಪಿಸಿದರು. ಪಾಂಡವರ ವನವಾಸದ ಕೊನೆಯ ಹಂತದಲ್ಲಿ ಸಂಭವಿಸಿದ ಈ ಘಟನೆಯಿಂದಲೇ ಮಹಾಭಾರತದ ಕಥೆಯು ಮುಂದುವರಿಯಲು ಕಾರಣವಾಯಿತು ಎಂದು ತಿಳಿಸಿದರು. ಮುಂದೆ ವಾಚನಕಾರರು ಒಂದೊಂದೇ ಪದ್ಯಗಳನ್ನು ನಾಟ, ಅಠಾಣ, ರಂಜಿನಿ, ಚಂದ್ರಕೌಂಸ್‌, ಕಲ್ಯಾಣಿ, ಭೀಮಪಲಾಸ್‌, ಪೂರ್ವಿಕಲ್ಯಾಣಿ, ರೇವತಿ ಮೊದಲಾದ ಶಾಸ್ತ್ರೀಯ ರಾಗಗಳನ್ನು ಅಳವಡಿಸಿಕೊಂಡು ಅರ್ಥ ಪೂರ್ಣವಾಗಿ ಹಾಡಿದಂತೆ ವ್ಯಾಖ್ಯಾನಕಾರರು ಎಲ್ಲವನ್ನೂ ಇಂದಿನ ಸಂದರ್ಭಗಳಿಗೂ ಅನ್ವಯಿಸುವ ರೀತಿಯಲ್ಲಿ ವಿವರಿಸುತ್ತ ಹೋದರು. 

“ಭೂಮಿಗಿಂತ ಭಾರ ಯಾವುದು?’ ಎಂದು ಯಕ್ಷ ಕೇಳಿದಾಗ “ತಾಯಿ’ ಎಂದು ಥಟ್ಟಂತ ಹೇಳುತ್ತಾನೆ ಧರ್ಮಜ. “ಆಕಾಶಕ್ಕಿಂತ ಎತ್ತರ?’ ಎಂದು ಕೇಳಿದಾಗ “ತಂದೆ’ ಅನ್ನುತ್ತಾನೆ. ಅದರರ್ಥ ತಾಯ್ತಂದೆಯರನ್ನು ಗೌರವಿಸಿ ಎಂದು. ಇದು ನಮ್ಮ ಭಾರತೀಯ ಸಾಂಸ್ಕೃತಿಕ ಮೌಲ್ಯ. “ಗಾಳಿಗಿಂತ ವೇಗ ಯಾವುದು?’ ಎಂದು ಕೇಳಿದರೆ “ಮನಸ್ಸು’ ಎನ್ನುತ್ತಾನೆ. ಅಂದರೆ ಅದನ್ನು ಅಂಕೆಯಲ್ಲಿಟ್ಟುಕೋ ಎಂದರ್ಥ. “ಯಾವುದನ್ನು ತ್ಯಾಗ ಮಾಡಬೇಕು?- ಅಹಂಕಾರ, ಕೋಪ, ಆಸೆ, ದುರಾಸೆಗಳನ್ನು. ಯಾಕೆಂದರೆ ಅವುಗಳು ಮನುಷ್ಯನೊಳಗಿನ ವೈರಿಗಳು. “ಯಾವುದು ಅತ್ಯುತ್ತಮ ಐಶ್ವರ್ಯ?’ ವಿದ್ಯೆಯೇ ಹೊರತು ಹಣವಲ್ಲ.- ಹೀಗೆ ಇಲ್ಲಿ ಎಲ್ಲ ಪ್ರಶ್ನೆಗಳೂ ಜೀವನ ಮೌಲ್ಯಗಳಿಗೆ ಸಂಬಂಧಪಟ್ಟದ್ದಾಗಿವೆ. ಸಾರ್ಥಕ ಬದುಕಿಗೆ ಕಾಯಾ ವಾಚಾ ಮನಸಾ ಪರಿಶುದ್ಧರಾಗಿರುವುದು ಅಗತ್ಯವೆಂದು ಯಕ್ಷ ಪ್ರಶ್ನೆಯ ಕಥೆ ನಿರೂಪಿಸುತ್ತದೆ. ಸನತ್‌ ಕುಮಾರ್‌ ಅವರ ಶುದ್ಧ ಶಾರೀರವು ಪದ್ಯಗಳ ಸಂಗೀತಾತ್ಮಕ ಪ್ರಸ್ತುತಿಯ ಸೊಬಗನ್ನು ಹೆಚ್ಚಿಸಿ ಪ್ರೇಕ್ಷಕರನ್ನು ಸೆರೆಹಿಡಿಯಿತು.

ಡಾ| ಪಾರ್ವತಿ ಜಿ. ಐತಾಳ್‌ 

Advertisement

Udayavani is now on Telegram. Click here to join our channel and stay updated with the latest news.

Next