ಬಸವಕಲ್ಯಾಣ: ದೇಶದ ಸಾಮಾಜಿಕ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಸಂವರ್ಧನೆಯಲ್ಲಿ ಯುವಕರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಉಪನ್ಯಾಸಕ ಡಾ| ಭೀಮಾಶಂಕರ ಬಿರಾದಾರ್ ಹೇಳಿದರು.
ನಗರದ ಜ್ಞಾನ ಗಂಗಾ ಐಟಿಐ ಕಾಲೇಜಿನಲ್ಲಿ ಬೀದರ್ ನೆಹರು ಯುವ ಕೇಂದ್ರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದಿಂದ ನಡೆದ ಯುವ ಮಂಡಳ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕ್ರಿಯಾಶೀಲತೆ, ಉತ್ಸಾಹ ಮತ್ತು ಚೈತನ್ಯಶೀಲತೆ ಯುವಕರ ಲಕ್ಷಣವಾಗಿದೆ. ಯುವಕರು ತಮಗೆ ದಕ್ಕುವ ಆಲೋಚನೆಗಳನ್ನು ಸೈದ್ಧಾಂತಿಕವಾಗಿ ತಾರ್ತಿಕವಾಗಿ ಸ್ವೀಕರಿಸಬೇಕು ಎಂದರು.
ವೈಚಾರಿಕ ಪ್ರಜ್ಞೆ ಸದಾ ಜಾಗೃತವಾಗಿರಬೇಕು. ಯುವಕರು ಸಮಾಜದ ಮತ್ತು ದೇಶದ ಚಾಲಕ ಶಕ್ತಿಗಳಾಗಿದ್ದಾರೆ. ಸರ್ಕಾರದ ಯೋಜನೆಗಳನ್ನು ಸರಿಯಾದ ಕ್ರಮದಲ್ಲಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಯುವಕರು ತಮ್ಮ ಬದುಕಿನಲ್ಲಿ ಸಂಭ್ರಮಿಸಬೇಕು ಎಂದರು.
ಜಾಗತಿಕ ಜ್ಞಾನ ಶಾಖೆಗಳ ಓದು ಅಧ್ಯಯನಗಳು ಯುವಕರಲ್ಲಿ ಪ್ರಖರ ವ್ಯಕ್ತಿತ್ವವೊಂದನ್ನು ರೂಪಿಸುತ್ತದೆ. ಕುವೆಂಪು, ಲಂಕೇಶ್, ತೇಜಸ್ವಿ ಅವರಂತಂಹ ಬರಹಗಾರರು ತಮ್ಮ ಇಪ್ಪತ್ತನೇಯ ವಯಸಿನಲ್ಲಿಯೇ ಸಾಹಿತ್ಯ ಬರೆಯುವ ಮೂಲಕ ತಾತ್ವಿಕತೆಯೊಂದನ್ನು ರೂಪಿಸಿದ್ದರು. ಮಹಾತ್ಮ ಗಾಂಧೀಜಿ ಅವರು ತಮ್ಮ ಯುವ ವಯಸ್ಸಿನಲ್ಲಿ ವರ್ಣಭೇದ, ಪಾರತಂತ್ರ್ಯದ ವಿರುದ್ಧ ಪ್ರತಿಭಟಿಸಿದ್ದರು. ವಿಶ್ವದ ಅನೇಕ ಯುವ ಬರಹಗಾರರು, ಯುವ ವಿಜ್ಞಾನಿಗಳು ಪ್ರಬುದ್ಧ ಚಿಂತನೆಗಳನ್ನು ಹಾಗೂ ಸಿದ್ಧಾಂತಗಳನ್ನು ಕಟ್ಟಿಕೊಟ್ಟಿದ್ದಾರೆ. ಅವುಗಳ ಆಳ ಅಧ್ಯಯನ ನಮ್ಮ ಯುವ ವಿದ್ಯಾರ್ಥಿಗಳಿಗೆ ಅಗತ್ಯವಿದೆ ಎಂದು ಸಲಹೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಶೆಟ್ಟಿ ಮಲಶೆಟ್ಟಿ ಮಾತನಾಡಿ, ದೇಶದ ಹಿತ ಕಾಪಾಡಲು ಯುವಕರ ಶಕ್ತಿ ಅವಶ್ಯವಾಗಿದೆ. ಇಂದಿನ ಯುವಕರು ತಮ್ಮ ಜೀವನವನ್ನು ಮೊಬೈಲ್ ಹಾಗೂ ದುಶ್ಚಟಕ್ಕೆ ಬಲಿ ಕೊಡದೆ ಸಮಾಜದ ಸೇವೆ ಹಾಗೂ ದೇಶದ ಅಭಿವೃದ್ಧಿಗೆ ವ್ಯಯಿಸಬೇಕು ಎಂದರು. ವಚನ ಸಾಹಿತ್ಯ ಪರಿಷತ್ತಿನ ಸಂಚಾಲಕ ಶಿವಶರಣಪ್ಪ ಹೂಗಾರ ಮಾತನಾಡಿ, ಸಧ್ಯದ ಪರಿಸ್ಥಿತಿಯಲ್ಲಿ ಯುವಕರು ಕೆಲಸ ಮಾಡದೇ ಯಾವುದೆ ಕೆಲಸ ಪೂರ್ಣಗೊಳ್ಳುವುದಿಲ್ಲ. ಯುವಕರಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು. ನೆಹರು ಯುವ ಕೇಂದ್ರದ ಕಾರ್ಯಕರ್ತ ಪವನ ಎಂ. ಡಿಗ್ಗಿಕರ್, ಪ್ರಾಂಶುಪಾಲ ಶ್ರೀನಿವಾಸ ರೆಡ್ಡಿ, ಎಬಿವಿಪಿ ಸಂಚಾಲಕ ಲೋಕೇಶ ಮೊಳಕೆರೆ ಮತ್ತಿತರರು ಇದ್ದರು.