Advertisement

ದೇಶದ ಎಲ್ಲಾ ಸಂಕಟಗಳಿಗೆ ಮೋದಿ ಸರ್ಕಾರವೇ ಕಾರಣ : ರಕ್ಷಾ ರಾಮಯ್ಯ

06:11 PM Sep 17, 2021 | Team Udayavani |

ಬೆಂಗಳೂರು  ; ದೇಶದ ಯುವ ಸಮೂಹ ಸೇರಿದಂತೆ ಎಲ್ಲಾ ವರ್ಗಗಳನ್ನು ಅತೀವ ಸಂಕಷ್ಟಕ್ಕೆ ದೂಡಿರುವ, ಅತಿ ಹೆಚ್ಚು ನಿರುದ್ಯೋಗ ಸೃಷ್ಟಿ ಮಾಡಿರುವ ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರದ ವಿರುದ್ಧ ಪ್ರದೇಶ ಯುವ ಕಾಂಗ್ರೆಸ್ ನಿಂದ ರಾಷ್ಟ್ರೀಯ ನಿರುದ್ಯೋಗ ದಿನ ಆಚರಿಸಲಾಯಿತು.

Advertisement

ನರೇಂದ್ರ ಮೋದಿ ಅವರ ಜನ್ಮ ದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಯುವ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಯುವ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಮತ್ತು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ನೇತೃತ್ವದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಪ್ರತಿಭಟನಾ ಜಾಥ ಆಯೋಜಿಸಲಾಗಿತ್ತು. ಪದವಿಧರರು, ಆಟೋ ಚಾಲಕರು, ಅಸಂಘಟಿತ ಕಾರ್ಮಿಕರ ಪೋಷಾಕು ಧರಿಸಿದ ಯುವ ಕಾರ್ಯಕರ್ತರು “ ನರೇಂದ್ರ ಮೋದಿ ಉದ್ಯೋಗ ಕೊಡಿ” ಎಂದು ಘೋಷಣೆ ಕೂಗಿದರು.

ಯುವ ಜನತೆ, ಕಾರ್ಮಿಕರು, ಉದ್ಯೋಗ ಕಳೆದುಕೊಂಡವರ ಧ್ವನಿಯಾಗಿ ಯುವ ಕಾಂಗ್ರೆಸ್ ನಿಂದ ರಾಷ್ಟ್ರೀಯ ನಿರುದ್ಯೋಗ ದಿನವನ್ನು ವಿಭಿನ್ನವಾಗಿ ಆಚರಿಸಿತು. ಉದ್ಯೋಗ ಸೃಷ್ಟಿ ಮತ್ತು ಉದ್ಯೋಗ ನಷ್ಟ ತಪ್ಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಇದನ್ನೂ ಓದಿ :ಮದ್ಯ ಖರೀದಿಗೆ ಬರುವವರನ್ನು ಕೀಳಾಗಿ ಕಾಣದಿರಿ: ಹೈಕೋರ್ಟ್‌

Advertisement

ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಮಾತನಾಡಿ, ಪ್ರಧಾನಿ ಅವರ ಹುಟ್ಟುಹಬ್ಬವನ್ನು ಯುವ ಕಾಂಗ್ರೆಸ್ ದೇಶಾದ್ಯಂತ ನಿರುದ್ಯೋಗ ದಿನವನ್ನಾಗಿ ಆಚರಿಸುತ್ತಿರುವುದು ಈ ದೇಶದ ದುರಂತವಾಗಿದ್ದು, ಈ ಸರ್ಕಾರದಿಂದ ಜನ ಸಾಮಾನ್ಯರಿಗೆ ನ್ಯಾಯ ದೊರೆಯುವುದಿಲ್ಲ. ವಿರುದ್ಧ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಕ್ವಿಟ್ ಇಂಡಿಯಾ ಮಾದರಿಯಲ್ಲಿ ಹಾಲಿ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಮೋದಿ ಅವರು ನೀಡಿದ ಭರವಸೆಯಂತೆ 2014 ರಿಂದ ಈ ವರೆಗೆ ನಮಗೆ 14 ಕೋಟಿ ಉದ್ಯೋಗ ಸೃಷ್ಟಿಮಾಡಬೇಕಾಗಿತ್ತು. ಆದರೆ ನಾವು 20 ಕೋಟಿ ಉದ್ಯೋಗ ಕಳೆದುಕೊಂಡಿದ್ದೇವೆ. ನಿರುದ್ಯೋಗ ಸಮಸ್ಯೆಯಿಂದ ಬಹಳಷ್ಟು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಯುವ ಜನರ ಧ್ವನಿಯಾಗಿ ನಾವು ಹೋರಾಟ ಮಾಡುತ್ತೇವೆ. ಜನರ ಪರಿವಾಗಿ ನಾವು ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದರು.

ಎಂ.ಎಸ್. ರಕ್ಷಾ ರಾಮಯ್ಯ ಮಾತನಾಡಿ, ದೇಶದಲ್ಲಿ ಶೇ 33 ರಷ್ಟು ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಇದಕ್ಕೆಲ್ಲಾ ನಿರುದ್ಯೋಗ ಸಮಸ್ಯೆಯೇ ಕಾರಣ. ಹೀಗಾಗಿ ನಿರುದ್ಯೋಗದ ವಿರುದ್ಧ ನಮ್ಮ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೇಳಿದರು.

ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶ್ವಾಸನೆ ಕಾಗದಗಳಲ್ಲೇ ಉಳಿದಿದೆ. ಯುವ ಸಮೂಹಕ್ಕೆ ಉದ್ಯೋಗ ಒದಗಿಸಲು ಕೇಂದ್ರ ಸರ್ಕಾರ ಯಾವುದೇ ಕಾರ್ಯಕ್ರಮ ಕೈಗೊಂಡಿಲ್ಲ. ಸಣ್ಣ ಮತ್ತು ಮದ್ಯಮ ಉದ್ಯಮ ನೆಲಕಚ್ಚುವಂತೆ ಮಾಡಿದ್ದು, ಇದರ ಪರಿಣಾಮ ಜನ ಜೀವನ ತೀವ್ರ ಬಾಧಿತವಾಗಿದೆ. ದೇಶದ ಎಲ್ಲಾ ಸಂಕಟಗಳಿಗೂ ಮೋದಿ ಸರ್ಕಾರವೇ ಕಾರಣ ಎಂದು ಆಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next