ಸಾಗರ: ಇಲ್ಲಿನ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ್ ಬೇಳೂರು ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ನ. 15ರಂದು ಇಲ್ಲಿನ ರೋಟರಿ ರಕ್ತ ನಿಧಿ ಕೇಂದ್ರದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಹಮ್ಮಿಕೊಂಡಿದ್ದ ಅಪ್ಪು ನಮನ ಕಾರ‍್ಯಕ್ರಮದಲ್ಲಿ ಅಶೋಕ್ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ನ. 17 ರಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ‍್ಯದರ್ಶಿ ಟಿ.ಎಸ್.ಪ್ರದೀಪ್ ಅಮಾನತು ಆದೇಶ ಪತ್ರವನ್ನು ಪತ್ರಿಕಾ ಪ್ರಕಟಣೆ ಮೂಲಕ ನೀಡಿದ್ದಾರೆ.
ಆದೇಶ ಪತ್ರದಲ್ಲಿ, ‘ಶಿವಮೊಗ್ಗ ಜಿಲ್ಲೆಯ ಸಾಗರ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಬೇಳೂರು ಅವರು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಬದಿಗೊತ್ತಿ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ‍್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು ಕಂಡುಬರುತ್ತಿದೆ. ಇದರ ಅನ್ವಯ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ರಕ್ಷಾ ರಾಮಯ್ಯ ಅವರ ಆದೇಶದ ಮೇರೆಗೆ ಸಾಗರ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ತಕ್ಷಣ ಜಾರಿಗೆ ಬರುವಂತೆ ಅಮಾನತು ಮಾಡಿ ಅದೇಶಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಕುರಿತು ಅಶೋಕ್ ಬೇಳೂರು ಮಾತನಾಡಿ, ಅಮಾನತು ಆದೇಶದ ಬಗ್ಗೆ ನನಗೆ ವೈಯಕ್ತಿಕ ಮಾಹಿತಿ ಇಲ್ಲ. ಜಾಲತಾಣಗಳಲ್ಲಿ ವೈರಲ್ ಆದ ಪತ್ರದ ಪ್ರತಿ ನೋಡಿದ್ದೇನೆ. ಘಟನೆ ಸಂಬಂಧ ರಾಜ್ಯ ಮಟ್ಟದ ಪದಾಧಿಕಾರಿಗಳು ನನ್ನನ್ನು ಸಂಪರ್ಕಿಸಿಲ್ಲ, ವಿಚಾರಣೆ ನಡೆಸಿಲ್ಲ. ಏಕಾಏಕಿ ಅಮಾನತು ಆದೇಶದ ಉದ್ದೇಶವೂ ನನಗೆ ಅರ್ಥವಾಗುತ್ತಿಲ್ಲ. ಜಿಲ್ಲಾ ಮಟ್ಟದ ಸಮಿತಿಯನ್ನು ಸಂಪರ್ಕಿಸಿ, ಮಾಹಿತಿ ಪಡೆದುಕೊಳ್ಳಲಿದ್ದೇನೆ ಎಂದು ಪ್ರತಿಕ್ರಿಯಿಸಿದರು.
ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಅವರ ಸಹೋದರರ ಪುತ್ರರಾಗಿರುವ ಅಶೋಕ್ ಬೇಳೂರು ಪಕ್ಷ ಸಂಘಟನೆ, ಹೋರಾಟ ಇನ್ನಿತರ ಕಾರ‍್ಯಕ್ರಮಗಳ ಮೂಲಕ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವವರು. ಆದರೆ ವಿಧಾನಪರಿಷತ್ ಚುನಾವಣೆ ಸಂದರ್ಭ ಅಶೋಕ್ ಬೇಳೂರು ಅವರ ಅಮಾನತು ಘಟನೆ ನಡೆದಿದೆ.